ಬೆಳಗಾವಿ:
ಬೆಳಗಾವಿಯ ಪೋಕ್ಸೋ ನ್ಯಾಯಾಲಯ ಸೋಮವಾರವು ಮತ್ತೊಂದು ಮಹತ್ವದ ತೀರ್ಪು ನೀಡಿದೆ. ಅತ್ಯಾಚಾರ ಎಸಗಿದ ಪ್ರಕರಣವೊಂದಕ್ಕೆ ಸಂಬಂಧಿಸಿ 30 ವರ್ಷದ ವ್ಯಕ್ತಿಗೆ ಆತ ಮಾಡಿದ ಅಪರಾಧಕ್ಕೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ನೀಡಿ ಆದೇಶ ಹೊರಡಿಸಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಇಲ್ಲಿಯ ಪೋಕ್ಸೊ ನ್ಯಾಯಾಲಯ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಜಾರಿಗೊಳಿಸಿ ತೀರ್ಪು ನೀಡಿದೆ. ರಾಮದುರ್ಗ ತಾಲೂಕಿನವನಾದ ಹಾಲಿ ಕೌಜಲಗಿ ಸಾ: ಮುಳ್ಳೂರು ಕರಿಯಪ್ಪ ವಿಠ್ಠಪ್ಪ ಅವೊಜಿ(30)ಶಿಕ್ಷೆಗೊಳಗಾದ ಆರೋಪಿ.
ಅಪ್ರಾಪ್ತೆ ಎಂದು ಗೊತ್ತಿದ್ದರೂ ಆರೋಪಿ 2024 ರ ಮೇ 3 ರಂದು ತನ್ನ ಬೈಕ್ ನಲ್ಲಿ ಆಕೆಯನ್ನು ಕರೆದುಕೊಂಡು ಹೋಗಿ ಒಬ್ಬರ ಮನೆಯಲ್ಲಿಟ್ಟು ಅಂದು ರಾತ್ರಿ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಪರ್ಕ ಮಾಡಿದ್ದಾನೆ. ಆರೋಪಿ ಸುಮಾರು 8-9 ವರ್ಷಗಳ ಕಾಲ ಆಕೆಯ ಮನೆಯಲ್ಲಿದ್ದು, ಸಲುಗೆ ಬೆಳೆಸಿ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ನಂಬಿಸಿ ಮೇಲಿಂದ ಮೇಲೆ ದೈಹಿಕ ಸಂಪರ್ಕ ಮಾಡಿದ್ದ. ಈ ಬಗ್ಗೆ ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಅಪರಾಧಕ್ಕೆ ಸಂಬಂಧಿಸಿದ ತನಿಖೆಯನ್ನು ಆರ್.ಬಿ.ನಾಯ್ಕ, ಬಸವರಾಜ ಕಾಮನಬೈಲು ಮತ್ತು ರಾಯಬಾಗ ಸಿಪಿಐ ಶ್ರೀಶೈಲ ಕೆ.ಅವರು ಮಾಡಿ ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ-01 ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಮಾನ್ಯ ನ್ಯಾಯಾಧೀಶರಾದ ಸಿ.ಎಂ. ಪುಷ್ಪಾಲತಾ ಅವರು ಒಟ್ಟು 8 ಸಾಕ್ಷಿಗಳ ವಿಚಾರಣೆ, 51 ದಾಖಲೆ ಮತ್ತು 10 ಮುದ್ದೆ ಮಾಲುಗಳ ಆಧಾರದ ಮೇಲೆ ಆರೋಪ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ.
ಆರೋಪಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, ರೂ.10,000 ದಂಡ ವಿಧಿಸಿದ್ದಾರೆ. ದಂಡದ ಮೊತ್ತ ತುಂಬದೇ ಇದ್ದ ಕಾಲಕ್ಕೆ 1 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿದ್ದಾರೆ. ನೊಂದ ಅಪ್ರಾಪ್ತೆಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ. 4 ಲಕ್ಷ ಪರಿಹಾರ ಧನ ಪಡೆಯಲು ನ್ಯಾಯಾಲಯ ಆದೇಶಿಸಿದೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕ ಎಲ್. ವಿ. ಪಾಟೀಲ ಹಾಜರಾಗಿ ಪ್ರಕರಣ ನಡೆಸಿ ವಾದ ಮಂಡಿಸಿದ್ದರು.
ಬೆಳಗಾವಿಯಲ್ಲಿ ಮತ್ತೊಬ್ಬ ಅತ್ಯಾಚಾರಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಜಾರಿ ಪೋಕ್ಸೋ ನ್ಯಾಯಾಲಯದಿಂದ ಮಹತ್ವದ ತೀರ್ಪು
