ಬೆಳಗಾವಿ : ತಂದೆ-ತಾಯಿ ನೀಡಿದ ಸಂಸ್ಕಾರ, ಗುರು ನೀಡಿದ ವಿದ್ಯೆ, ಕಲಿಕೆಯಲ್ಲಿ ಸಮರ್ಪಣೆ ಇದ್ದಾಗ ವಿದ್ಯಾರ್ಥಿಗಳು ಕಲೆಯಲ್ಲಿ ಔನ್ನತ್ಯವನ್ನು ತಲುಪುತ್ತಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅಭಿಪ್ರಾಯಪಟ್ಟರು.
ನಗರದ ಕೆ. ಎಲ್. ಇ. ಡಾ. ಬಿ.ಎಸ್. ಜೀರಗೆ ಸಭಾಂಗಣದಲ್ಲಿ ನಡೆದ ಅಭಿನಯ ಕಲಾ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಅಭಿನಯ ಕಲಾ ಸಂಸ್ಥೆಯನ್ನು ಸ್ಥಾಪಿಸಿದ ವಿದುಷಿ ಡಾ. ದೀಪ್ತಿ ಶೆಟ್ಟಿ ಮತ್ತು ವಿದುಷಿ ಧನ್ಯ ಶೆಟ್ಟಿ ಅವರು ಅಭಿನಂದನಾರ್ಹರು. ಭರತನಾಟ್ಯ ಸಂಸ್ಥೆಯನ್ನು ಬೆಳಗಾವಿಯಲ್ಲಿ ಸ್ಥಾಪಿಸಿ ಆ ಮೂಲಕ ಮಕ್ಕಳಿಗೆ ಕಲಾ ಸಂಸ್ಕಾರ ನೀಡುವ ಅವರ ಕಾರ್ಯ ಶ್ಲಾಘನೀಯವಾದುದು. ಭರತನಾಟ್ಯ ಕಲೆ ಅಷ್ಟು ಸುಲಭದಲ್ಲಿ ಒಲಿದು ಬರುವ ಕಲೆಯಲ್ಲ. ಅತ್ಯಂತ ಪರಿಶ್ರಮದಿಂದ ಪಡೆದುಕೊಳ್ಳಬೇಕು. ಈ ಕಲೆಯಲ್ಲಿ ಶ್ರದ್ಧೆ, ಏಕಾಗ್ರತೆ ತುಂಬಾ ಮುಖ್ಯ. ಇದು ಕಲೆಯಲ್ಲಿಯೇ ಅಸಾಮಾನ್ಯವಾದುದು, ಅಗ್ರಮಾನ್ಯವಾದುದು. ದೇಶದಲ್ಲಿ ಅಷ್ಟೇ ಅಲ್ಲ, ವಿದೇಶದಲ್ಲಿಯೂ ಅದರ ವೈಭವವನ್ನು ಕಾಣುತ್ತೇವೆ ಎಂದರು.
ಬೆಳಗಾವಿಯ ರವಿ ನೃತ್ಯ ಕಲಾ ಮಂದಿರದ ಮುಖ್ಯಸ್ಥ ಕರ್ನಾಟಕ ಕಲಾಶ್ರೀ ವಿದ್ವಾನ್ ರವೀಂದ್ರ ಶರ್ಮಾ ಅವರು ಭರತನಾಟ್ಯ ಕಲೆಯು ಅದ್ಭುತವಾದ ಕಲೆ. ಇದು ನಮ್ಮ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ. ಗುರು ಮುಖೇನ ಕಲಿಯುವ ಕಲೆ ಇದಾಗಿದ್ದು, ಗುರುವಿನಲ್ಲಿ ಶ್ರದ್ಧೆ, ಭಕ್ತಿಯನ್ನಿಟ್ಟು ಕಲಿಯಬೇಕು ಎಂದರು.
ಬೆಳಗಾವಿಯ ಶಾಂತಲಾ ನಾಟ್ಯಾಲಯದ ಮುಖ್ಯಸ್ಥೆ ವಿದುಷಿ ರೇಖಾ ಅಶೋಕ ಹೆಗಡೆ ಅವರು, ಪ್ರತಿಯೊಂದು ಸಾಧನೆಯ ಹಿಂದೆ ಬೆಲೆಕಟ್ಟಲಾಗದ ಪರಿಶ್ರಮ ಇರುತ್ತದೆ. ಸೋದರಿಯರಾದ ವಿದುಷಿ ಡಾ. ದೀಪ್ತಿ ಶೆಟ್ಟಿ ಮತ್ತು ವಿದುಷಿ ಧನ್ಯ ಶೆಟ್ಟಿ ತಾವು ಪಡೆದುಕೊಂಡ ಕಲೆಯನ್ನು ಸಮಾಜಕ್ಕೆ ಅರ್ಪಿಸುವ ಸದುದ್ದೇಶದಿಂದ ಅಭಿನಯ ಕಲಾ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿದ್ದಾರೆ. ಪ್ರಸ್ತುತ ಈ ಸಂಸ್ಥೆಯಲ್ಲಿ 200 ಕ್ಕೂ ಹೆಚ್ಚು ವಿವಿಧ ವಯೋಮಾನದ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇವರಿಬ್ಬರೂ ನನ್ನ ವಿದ್ಯಾರ್ಥಿಗಳೆಂಬುದು ಅತ್ಯಂತ ಹೆಮ್ಮೆಯ ವಿಷಯ. ಅವರು ಇಷ್ಟು ಎತ್ತರಕ್ಕೆ ಸಾಗಲು ಅವರ ಪೋಷಕರು ಅವರ ಬೆನ್ನೆಲುಬಾಗಿ ನಿಂತಿದ್ದರು ಎಂದರು.
ಉಡುಪಿಯ ನೃತ್ಯ ಕಲಾ ಕುಟೀರದ ಮುಖ್ಯಸ್ಥೆ ವಿದುಷಿ ಮಂಜರಿ ಚಂದ್ರ ಪುಷ್ಪರಾಜ ಅವರು ಕಲೆ ಮನುಷ್ಯನ ಅಂತರಾಳವನ್ನು ಬೆಳಗುತ್ತದೆ. ಮಾನವೀಯ ಮೌಲ್ಯಗಳನ್ನು ತುಂಬುತ್ತದೆ. ಮನುಷ್ಯನಿಗೆ ಸಮಾಜದಲ್ಲಿ ಹೇಗೆ ಬದುಕಬೇಕೆಂಬುದನ್ನು ಕಲಿಸುತ್ತದೆ. ದೇಶದಲ್ಲಿ ಸತ್ಪ್ರಜೆಗಳನ್ನಾಗಿ ಬದುಕಲು ಕಲೆ, ಸಾಹಿತ್ಯ ಪ್ರೇರೇಪಿಸುತ್ತದೆ. ದೀಪ್ತಿ ಮತ್ತು ಧನ್ಯ ಶೆಟ್ಟಿ ಅವರು ನಾಟ್ಯಶಾರದೆಯ ಪುತ್ರಿಯರು. ಇಷ್ಟು ಕಡಿಮೆ ವಯಸ್ಸಿನಲ್ಲಿ ಇಂಥ ಒಂದು ಸಂಸ್ಥೆಯನ್ನು ಕಟ್ಟಿ ನೂರಾರು ಮಕ್ಕಳಿಗೆ ಕಲೆಯನ್ನು ಧಾರೆಯೆರೆಯುವುದು ಅದೊಂದು ಅಮೋಘವಾದ ಸಾಧನೆ. ಅವರ ಕಲಾ ಸೇವೆ ಹೀಗೆಯೇ ಮುಂದುವರಿಯಲಿ ಎಂದರು.
ರಾಮದೇವ ಹೊಟೇಲಿನ ತಾರಾನಾಥ ಶೆಟ್ಟಿ ಹಾಗೂ ಅಶೋಕ ಶೆಟ್ಟಿ ಮತ್ತು ಬೆಳಗಾವಿ ಬಂಟರ ಸಂಘದ ಅಧ್ಯಕ್ಷ ವಿಜಯ ಎಂ. ಶೆಟ್ಟಿ, ವಾಣಿ ಶೆಟ್ಟಿ
ರವಿರಾಜ ಶೆಟ್ಟಿ, ವಸಂತಿ ಶೆಟ್ಟಿ ಉಪಸ್ಥಿತರಿದ್ದರು.
ಶಾಂತಲಾ ನಾಟ್ಯಾಲಯ ಬೆಳಗಾವಿಯ ಮುಖ್ಯಸ್ಥೆ ಮತ್ತು ಗುರು ವಿದುಷಿ ರೇಖಾ ಹೆಗ್ಡೆ ಹಾಗೂ ಉಡುಪಿ ಸೃಷ್ಟಿ ಕಲಾ ಕುಟೀರದ ಡಾ. ವಿದುಷಿ ಮಂಜರಿ ಚಂದ್ರ ಪುಷ್ಪರಾಜ ಅವರನ್ನು ಸನ್ಮಾನಿಸಲಾಯಿತು.
ಅಭಿನಯ ಕಲಾ ಸಂಸ್ಥೆಯಲ್ಲಿ ಕಲಿಯುತ್ತಿರುವ 200 ವಿದ್ಯಾರ್ಥಿಗಳಲ್ಲಿ 80 ವಿದ್ಯಾರ್ಥಿಗಳು ವಿವಿಧ ತಂಡಗಳೊಂದಿಗೆ ವಿವಿಧ ನೃತ್ಯ ಪ್ರದರ್ಶನಗಳನ್ನು ನೀಡಿದರು.
ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲದ ರಾಣಿ ಅಬ್ಬಕ್ಕ ದೇವಿಯು ಪೋರ್ಚುಗೀಸ್ ಅವರೊಂದಿಗೆ ಹೋರಾಡಿದ ಚಿತ್ರಣವನ್ನು ಮನಮುಟ್ಟುವಂತೆ ನೃತ್ಯ ರೂಪಕದಲ್ಲಿ ಅಳವಡಿಸಿ ನೀಡಿದ ಪ್ರದರ್ಶನವು ಅಮೋಘವಾಗಿತ್ತು.
ವಿದುಷಿ ಧನ್ಯ ಶೆಟ್ಟಿ ಪ್ರಾರ್ಥಿಸಿದರು. ಚೇತನ್ ಶೆಟ್ಟಿ ಸ್ವಾಗತಿಸಿದರು, ಉಳ್ತೂರು ಅಜಿತ್ ಶೆಟ್ಟಿ ನಿರೂಪಿಸಿದರು. ವಿದುಷಿ ಡಾ. ದೀಪ್ತಿ ಶೆಟ್ಟಿ ವಂದಿಸಿದರು.