ಬೆಳಗಾವಿ: ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ದಾಖಲಾಗುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿಯ ಪೋಕ್ಸೋ ನ್ಯಾಯಾಲಯ ಮತ್ತೊಂದು ಮಹತ್ವದ ತೀರ್ಪು ನೀಡಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಬೆಳಗಾವಿ ಪೋಕ್ಸೊ ನ್ಯಾಯಾಲಯ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 10,000 ದಂಡ ವಿಧಿಸಿ ಶನಿವಾರ ತೀರ್ಪು ನೀಡಿದೆ.
ಯಾದಗಿರಿ ಜಿಲ್ಲೆ ಸುರಪುರ ತಾಲೂಕು ಯಡಹಳ್ಳಿಯ ಪರಶುರಾಮ ಮಹಾಂತಪ್ಪ ಚಲವಾದಿ (28)ಶಿಕ್ಷೆಗೊಳಗಾದ ಆರೋಪಿ.
ಅಪ್ರಾಪ್ತೆ 2021ರ ಸೆ. 20 ರಂದು ಮನೆಯಲ್ಲಿ ಶಾಲೆಗೆ ಹೋಗುವುದಾಗಿ ಹೇಳಿ ನಂತರ ಕಾಣೆಯಾಗಿದ್ದಳು.
ಅಪ್ರಾಪ್ತೆಯೆಂದು ಗೊತ್ತಿದ್ದರೂ ಆತ ನಾಲ್ಕು ತಿಂಗಳ ಕಾಲ ಪ್ರೀತಿಸಿ ಮದುವೆಯಾಗುವುದಾಗಿ ಹೇಳಿದ್ದ. ಆದರೆ, 2021 ರ ಸೆ. 20 ರಂದು ದೇವರ ಗುಡಿ ಮುಂದೆ ತಮ್ಮಷ್ಟಕ್ಕೆ ತಾವೇ ಮದುವೆಯಾಗಿ ನಂತರ ಇಬ್ಬರು ತಮ್ಮ ಮನೆಯಲ್ಲಿ ಗಂಡ-ಹೆಂಡತಿ ರೀತಿ ಜೀವನ ನಡೆಸಿ ಪದೇ ಪದೇ ದೈಹಿಕ ಸಂಪರ್ಕ ಮಾಡಿರುವ ಅಪರಾಧದ ಬಗ್ಗೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್ಐ ಎಸ್.ಪಿ.ಉನ್ನದ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ರಾಯಬಾಗ ಸಿಪಿಐ ಎಂ.ಎಂ.ತಹಶೀಲ್ದಾರ ಈ ಬಗ್ಗೆ ತನಿಖೆ ಮಾಡಿದ್ದರು. ಮುಂದಿನ ವಿಚಾರಣೆ ನಡೆಸಿದ ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಮಾನ್ಯ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಪ್ರಕರಣದ ವಿಚಾರಣೆ ನಡೆಸಿ ಆರೋಪಿಯ ಮೇಲಿನ ಆರೋಪ ಸಾಬೀತಾಗಿವೆ ಎಂದು ತೀರ್ಪು ನೀಡಿ, ಆರೋಪಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ.10,000 ದಂಡ ವಿಧಿಸಿದ್ದಾರೆ. ಈ ಮೊತ್ತವನ್ನು ತುಂಬದೇ ಇದ್ದ ಕಾಲಕ್ಕೆ ಒಂದು ವರ್ಷ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ಹೊರಡಿಸಿದ್ದಾರೆ. ನೊಂದ ಅಪ್ರಾಪ್ತೆಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ 4 ಲಕ್ಷ ರೂ. ಪರಿಹಾರಧನ ಪಡೆಯಲು ಮಾನ್ಯ ನ್ಯಾಯಾಲಯ ಆದೇಶಿಸಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದ್ದರು.
ಬೆಳಗಾವಿಯ ಪೋಕ್ಸೋ ನ್ಯಾಯಾಲಯದಿಂದ ಮತ್ತೊಂದು ಮಹತ್ವದ ತೀರ್ಪು ಲೈಂಗಿಕ ಅಪರಾಧ ಎಸಗಿದ ಆರೋಪಿಗೆ 30 ವರ್ಷ ಕಾರಾಗೃಹ ಶಿಕ್ಷೆ ಜಾರಿ
