ಬೈಲಹೊಂಗಲ : ಕಾನೂನು ಶಿಕ್ಷಣ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಕೇವಲ ಅಧ್ಯಯನಕ್ಕೆ ಸೀಮಿತವಾಗದೆ ಮಹಾವಿದ್ಯಾಲಯದಲ್ಲಿ ಜರಗುವ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ವ್ಯಕ್ತಿತ್ವ ವಿಕಸನಪಡಿಸಿಕೊಳ್ಳಬೇಕು. ಜೊತೆಗೆ ಭವಿಷ್ಯದಲ್ಲಿ ಉತ್ತಮ ವಕೀಲರಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಸೇವೆ ಸಲ್ಲಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ರವಿ ಬಿ. ಚವ್ಹಾಣ ಕಿವಿಮಾತು ಹೇಳಿದರು.
ಬೈಲಹೊಂಗಲ ಕೆ ಆರ್ ಸಿ ಶಿಕ್ಷಣ ಸಂಸ್ಥೆಯ ಎಚ್.ವಿ. ಕೌಜಲಗಿ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ 2025-26 ನೇ ಸಾಲಿನ ಪಠ್ಯೇತರ ಚಟುವಟಿಕೆ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬೈಲಹೊಂಗಲ ಪ್ರಧಾನ ದಿವಾಣಿ ನ್ಯಾಯಾಧೀಶೆ ರೋಹಿಣಿ ಬಸಾಪುರ ಮಾತನಾಡಿ, ಪ್ರತಿಯೊಬ್ಬರು ಕಾನೂನು ಶಿಕ್ಷಣ ಪಡೆಯುವ ಅವಕಾಶ ವಿಪುಲವಾಗಿದ್ದು, ಕಾನೂನು ಶಿಕ್ಷಣ ಆಯ್ಕೆ ಮಾಡಿಕೊಂಡಿರುವ ತಾವೆಲ್ಲರೂ ಅದೃಷ್ಟವಂತರು. ಯಾಕೆಂದರೆ ವಕೀಲಿ ವೃತ್ತಿ ಎಂಬುವುದು ಇತರ ವೃತ್ತಿಗಳಿಗಿಂತ ಹೆಚ್ಚಿನ ಸ್ಥಾನಮಾನ ಪಡೆದುಕೊಂಡಿದೆ. ಸಮಾಜದಲ್ಲಿ ವಕೀಲರಿಗೆ ಉನ್ನತ ಸ್ಥಾನಮಾನ ಇದ್ದು ಇದು ಶ್ರೇಷ್ಠ ವೃತ್ತಿಯಾಗಿದೆ. ವಿದ್ಯಾರ್ಥಿ ದಿಸೆಯಲ್ಲಿದ್ದಾಗ ಅಂತರಾಷ್ಟ್ರೀಯ, ವಿಶ್ವವಿದ್ಯಾಲಯ, ಮಹಾವಿದ್ಯಾಲಯ ಮಟ್ಟದಲ್ಲಿ ನಡೆಯುವ ಅಣಕು ನ್ಯಾಯಾಲಯ ಮತ್ತು ಚರ್ಚಾ ಸ್ಪರ್ಧೆ, ಕ್ರೀಡಾ ಸ್ಪರ್ಧೆಗಳಲ್ಲಿ ಧೈರ್ಯವಾಗಿ, ಪ್ರಾಮಾಣಿಕವಾಗಿ ಸ್ಪರ್ಧಾತ್ಮಕತೆಯನ್ನು ಎದುರಿಸಬೇಕು. ಕಾನೂನು ಶಿಕ್ಷಣದಲ್ಲಿ ಉತ್ತಮ ಅಂಕದಿಂದ ಪಾಸಾಗಿ ಉನ್ನತ ಅವಕಾಶ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.
ಬೈಲಹೊಂಗಲದ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಬಸವರಾಜ ನಾಯಕ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಿ ಕಾನೂನು ಬಗ್ಗೆ ಆಳವಾದ ಅಧ್ಯಯನ ನಡೆಸಿ ಉತ್ತಮರಾಗಿ ನ್ಯಾಯಾಧೀಶರಾಗಬೇಕು. ನ್ಯಾಯಾಂಗ ಇಲಾಖೆ ಮತ್ತು ಇತರ ಹುದ್ದೆಯ ಅವಕಾಶ ಪಡೆಯುವಲ್ಲಿ ಉಜ್ವಲ ಅವಕಾಶ ಇದೆ. ಈ ನಿಟ್ಟಿನಲ್ಲಿ ಕಾನೂನು ವಿದ್ಯಾರ್ಥಿಗಳು ಸಾಧಕರಾಗಬೇಕು ಎಂದು ತಿಳಿಸಿದರು.
ಬೈಲಹೊಂಗಲ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಆರ್. ಮೆಳವಂಕಿ ಮಾತನಾಡಿ, ವಿದ್ಯಾರ್ಥಿಯಾಗಿರುವಾಗ ಪ್ರಕ್ರಿಯೆ ಕಾನೂನು ಹಾಗೂ ವಾಸ್ತವಿಕ ಕಾನೂನು ಬಗ್ಗೆ ಆಳವಾಗಿ ಅಧ್ಯಯನ ನಡೆಸಬೇಕು. ಪಿ ಡಿ ಸಿ ವಿಷಯದಲ್ಲಿ ಕಾನೂನು ಭಾಷೆಯನ್ನು ಅರಿತುಕೊಂಡು ಉತ್ತಮ ಕಾನೂನು ಕೌಶಲ ಪಡೆದುಕೊಂಡು ನ್ಯಾಯಾಲಯದಲ್ಲಿ ಅಪರಾಧಿಕ ಪ್ರಕರಣ ಹಾಗೂ ದಿವಾಣಿ ಪ್ರಕರಣದಲ್ಲಿ ನಿಮ್ಮ ಕಕ್ಷಿದಾರರ ಪರವಾಗಿ ಧೈರ್ಯವಾಗಿ ಪ್ರತಿಪಾದಿಸುವ ಮೂಲಕ ನ್ಯಾಯ ದೊರಕಿಸಲು ಮುಂದಾಗಬೇಕು. ಹಣದಾಸೆಗಾಗಿ ವೃತ್ತಿಯನ್ನು ಕೈಗೊಳ್ಳದೆ ಸಾರ್ವಜನಿಕರಲ್ಲಿ ನಂಬಿಕೆ-ವಿಶ್ವಾಸವನ್ನು ಹೊಂದಬೇಕು ಎಂದ ಅವರು, ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ವಕೀಲಿ ವೃತ್ತಿಯ ಬಗ್ಗೆ ಭರವಸೆಯ ಬೆಳಕನ್ನು ಮೂಡಿಸಿದರು.
ಇವತ್ತಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ಗೌರವಾನ್ವಿತ ನ್ಯಾಯಾಧೀಶರ ಮೂಲಕ ಪೆನ್ನುಗಳನ್ನು ಕಿರು ಕಾಣಿಕೆಯಾಗಿ ಪಡೆದುಕೊಂಡಿದ್ದು ಮಾತಿನ ಜೊತೆಗೆ ಲೇಖನಿ ಸಹ ಹರಿತವಾಗಿದೆ. ಅದನ್ನು ನೀವು ಸಮರ್ಪಕವಾಗಿ ಬಳಸಿಕೊಂಡು ಮುಂದೆ ನೀವು ಉತ್ತಮ ನ್ಯಾಯಾಧೀಶರಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಜಿ. ಕಟದಾಳ ಮಾತನಾಡಿ, ಪ್ರಥಮ ವರ್ಷದ ವಿದ್ಯಾರ್ಥಿಗಳು ಈಗಿನಿಂದಲೇ ಕಾನೂನು ವಿಷಯಗಳನ್ನು ಅತ್ಯಂತ ಆಳವಾಗಿ ಅಧ್ಯಯನ ಮಾಡಬೇಕು. ಪ್ರಾಮಾಣಿಕ ಪ್ರಯತ್ನದ ಮೂಲಕ ಉತ್ತಮ ನ್ಯಾಯವಾದಿಯಾಗಲು ಸಾಧ್ಯ ಎಂದು ವಿವರಿಸಿದರು.
ಬೈಲಹೊಂಗಲ ಅಪರ ಸರ್ಕಾರಿ ವಕೀಲ ರಮೇಶ ಕೋಲ್ಕಾರ ಮಾತನಾಡಿ, ವಿದ್ಯಾರ್ಥಿಗಳು ಸಣ್ಣ ಸಣ್ಣ ಕೆಲಸಗಳನ್ನು ನಿರ್ಲಕ್ಷಿಸದೆ, ಅಚ್ಚುಕಟ್ಟಿನಿಂದ ಮುಗಿಸುವ ದೃಢ ನಿರ್ಧಾರ ಮಾಡುವ ಮೂಲಕ ಉತ್ತಮ ನ್ಯಾಯವಾದಿಗಳಾಗಿ, ಸಮಾಜಕ್ಕೆ ಶ್ರೇಷ್ಠ ಕೊಡುಗೆ ಕೊಡಲು ಸಾಧ್ಯವಿದೆ. ಆದಕಾರಣ ಯಾವುದೇ ಕಕ್ಷಿದಾರರು ಪ್ರಕರಣವನ್ನು ವಹಿಸಿಕೊಟ್ಟಲ್ಲಿ ಹಣಕ್ಕಾಗಿ ನಿರೀಕ್ಷಣೆ ಮಾಡದೆ, ಅದು ತಮ್ಮ ಪಾಲಿನ ಕರ್ತವ್ಯ ಎಂದು ತಿಳಿದು ಪ್ರಾಮಾಣಿಕವಾಗಿ ಅದನ್ನು ಮಾಡಲು ಬದ್ಧರಾಗಬೇಕು. ಯಶಸ್ಸಿನ ಮೂಲಕ ಆರ್ಥಿಕ ಮೂಲವೂ ವೃದ್ಧಿಯಾಗುತ್ತದೆ ಎಂದು ತಮ್ಮ ವೈಯಕ್ತಿಕ ಅನುಭವದ ಮೂಲಕ ಕಾನೂನು ವೃತ್ತಿಯ ರೋಚಕ ಅನುಭವವನ್ನು ಅವರು ಮನದಟ್ಟಾಗುವಂತೆ ತಿಳಿಸಿದರು.
ಪ್ರಾಚಾರ್ಯ ಪ್ರಕಾಶ ಎನ್. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಾದ ತಾವೆಲ್ಲರೂ ಕಾನೂನು ಶಿಕ್ಷಣದೊಂದಿಗೆ ಗುರು ಹಿರಿಯರನ್ನು ಗೌರವಿಸುವ ಸೌಜನ್ಯತೆಯನ್ನು ಬೆಳೆಸಿಕೊಳ್ಳಬೇಕು. ವೃತ್ತಿಯಲ್ಲಿ ಸಂಸ್ಥೆಗೆ, ಸಮಾಜಕ್ಕೆ ಉತ್ತಮ ಸ್ಥಾನ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
ಮಹಾವಿದ್ಯಾಲಯ ಉಪ ಸಮಿತಿ ಚೇರ್ಮನ್ ಶಿರೀಷ ತುಡವೇಕರ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿಗಳಾದ ಎಂ.ಎಸ್. ಪಟ್ಟಣಶೆಟ್ಟಿ, ಈರಣ್ಣ ಹುಣಸಿಕಟ್ಟಿ, ಸುನಿಲ ಬಾಳಿ, ಕಾರ್ಯಕ್ರಮದ ಸಂಯೋಜಕ, ಸಹಾಯಕ ಪ್ರಾಧ್ಯಾಪಕ ಡಿ.ಬಿ. ನರಗುಂದ, ಜೋಸೆಫ್ ಅಂಬೋಜ ಉಪಸ್ಥಿತರಿದ್ದರು.
ಸಂದೀಪ ಹೆದ್ದೂರಿ ಮತ್ತು ಪಕೀರಪ್ಪ ಹಲಗತ್ತಿ ಪ್ರಾರ್ಥಿಸಿದರು. ದ್ವಿತೀಯ ವರ್ಷದ ವಿದ್ಯಾರ್ಥಿನಿ ಸುರೇಖಾ ರೇಣುಕಗೌಡ್ರ ನಿರೂಪಿಸಿದರು. ಸ್ಮಿತಾ ಹರಕುಣಿ ಪರಿಚಯಿಸಿದರು. ಲಕ್ಷ್ಮಣ ಲಮಾಣಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅತಿಥಿಗಳ ಮೂಲಕ ಕಿರು ನೆನಪಿನ ಕಾಣಿಕೆ ಕೊಡಿಸುವ ಮೂಲಕ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರಯ್ಯ ಹೊಸಮಠ ವಂದಿಸಿದರು.
ಎಚ್.ವಿ. ಕೌಜಲಗಿ ಕಾನೂನು ಮಹಾವಿದ್ಯಾಲಯ, ತಾಲೂಕು ಕಾನೂನು ಸೇವಾ ಸಮಿತಿ ಮತ್ತು ನ್ಯಾಯವಾದಿಗಳ ಸಂಘದ ವತಿಯಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.