23 ಸೆಪ್ಟಂಬರ್…ಈ ದಿನದಂದು ಇಸ್ರೇಲಿನಲ್ಲಿ ಮತ್ತು ಭಾರತೀಯ ಸೇನೆಯ ಅಶ್ವಪಡೆಗಳಲ್ಲಿ “ ಹೈಫಾ ದಿನಾಚಾರಣೆ” ಆಚರಿಸಲಾಗುತ್ತದೆ. ಬೆಂಗಳೂರಿನ J C ನಗರದಲ್ಲಿ ನಿರ್ಮಿಸಿರುವ ಮೈಸೂರು ಅಶ್ವಾರೂಢರ ಹೈಫಾ ಯುದ್ಧ ಸ್ಮಾರಕದಲ್ಲಿ ಆ ದಿನ ಒಂದಿಷ್ಟು ವಿಶೇಷ ಆಚರಣೆ ನಡೆಯುತ್ತದೆ ಎನ್ನುವುದನ್ನು ಬಿಟ್ಟರೆ, ಇಸ್ರೇಲಿನಲ್ಲಿ 96 ವರ್ಷಗಳ ಹಿಂದೆ ಈ ಯುದ್ಧ ಕಾರ್ಯಾಚರಣೆಗೂ ಮತ್ತು ಕರ್ನಾಟಕಕ್ಕೂ ಇರುವ ನಂಟು ಬಹುತೇಕರಿಗೆ ತಿಳಿದೇ ಇಲ್ಲ. ಆದರೆ ಇಸ್ರೇಲಿನ ಶಾಲೆಗಳ ಪಠ್ಯ ಪುಸ್ತಕಗಳಲ್ಲಿ ಹೇಗೆ ಮೈಸೂರು ಸಂಸ್ಥಾನದ ಅಶ್ವಾರೂಢರು ಮೊದಲನೇ ವಿಶ್ವಯುದ್ಧದ ಸಮಯದಲ್ಲಿ ತುರ್ಕಿ ದೇಶದ ವಶದಲ್ಲಿದ್ದ ಹೈಫಾ ಎನ್ನುವ ಬಂದರು ನಗರವನ್ನು ಹೋರಾಡಿ ವಶಪಡಿಸಿಕೊಂಡಿದ್ದರ ಬಗ್ಗೆ ಹೇಳಿಕೊಡಲಾಗುತ್ತದೆ.
ಹಾಗಾದರೆ ಏನು ಇದರ ಹಿನ್ನಲೆ..?
1914 ರಲ್ಲಿ ಮೈಸೂರಿನ ರಾಜಸಂಸ್ಥಾನದ ಮಹಾರಾಜರಾದ ನಾಲ್ಮಡಿ ಕೃಷ್ಣರಾಜ ಒಡೆಯರ ಸೈನ್ಯದಲ್ಲಿ ಒಂದು ವಿಶೇಷ ಅಶ್ವಾರೂಢರ ದಳವಿತ್ತು. 29 ಸೈನ್ಯಾದಿಕಾರಿಗಳ, 444 ಅಶ್ವಯೋಧರೊಂದಿಗೆ 526 ಶ್ರೇಷ್ಠ ಅರಬ್ಬೀ ಕುದುರೆಗಳ ಈ ಪಡೆಗೆ ಒಂದು ವಿಶೇಷ ಗೌರವವಿರುತ್ತಿತ್ತು. ಆಗಾಗಲೇ ಸೈನ್ಯಗಳಲ್ಲಿ ಫಿರಂಗಿಗಳ, ಮಷೀನುಗನ್ನುಗಳ ಆಗಮನವಾಗಿ, ಕುದುರೆಗಳ ನಾಗಾಲೋಟದ, ಖರಪುಟದ ಶಬ್ದದ ಕಾಲ ಮುಗಿದೇ ಬಿಡ್ತೇನೋ ಎನ್ನುವ ಸಮಯವದು. ಹೈದ್ರಾಬಾದಿನ ನಿಜಾಮರ ಮತ್ತು ರಾಜಾಸ್ಥಾನದ ರಾಜರ ಸೈನ್ಯಗಳನ್ನು ಹೊರತು ಪಡಿಸಿದರೆ ಬಹುತೇಕ ಬೇರೆಲ್ಲೆಡೂ ಆಶ್ವಾರೂಢದ ದಳವೇ ಇರಲಿಲ್ಲ ಎನ್ನಬಹುದು.
ಅದೇ ಸಮಯಕ್ಕೆ ಮೊದಲನೆ ವಿಶ್ವಯುದ್ಧದ ಅಲೆ ಎದ್ದಾಗಿತ್ತು. ಯೂರೋಪಿನ, ಆಫ್ರಿಕಾದೆಲ್ಲೆಡೆ ಸೈನ್ಯದ ಜಮಾವಣೆ ಭರದಿಂದ ಸಾಗುತ್ತಿತ್ತು. ಇದೇ ಸಮಯದಲ್ಲಿ ಬ್ರಿಟಿಷರು ಮಧ್ಯ ಪ್ರಾಚ್ಯದ ಸೂಯೆಜ್ ಕಾಲುವೆಯ ರಕ್ಷಣೆಗೆಂದು ಭಾರತೀಯ ಸೇನೆಯ ಅಶ್ವಪಡೆಗಳನ್ನು ಈಜಿಪ್ಟಿಗೆ ರವಾನಿಸಲು ತೀರ್ಮಾನಿಸಿದ್ದರು. ಸೂಯೆಜ್ ಕಾಲುವೆ ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರದ ನಡುವಣ ಅತ್ಯಂತ ಮಹತ್ತರ ಜಲಸಂಪರ್ಕದ ಕೊಂಡಿ, ಇದರ ಮುಖಾಂತರವೇ ಪ್ರಪಂಚದ ಬಹುತೇಕ ವಾಣಿಜ್ಯ ಹಡಗುಗಳ ಸಂಚಾರ ನಡೆಯುತ್ತಿತ್ತು, ಈಗಲೂ ನಡೆಯುತ್ತಿದೆ.
ಬ್ರಿಟಿಷ್ ಸರ್ಕಾರದ ಈ ಆದೇಶವನ್ನು ಮನ್ನಿಸಿ ಮೈಸೂರಿನ ಮಹಾರಾಜರೂ ಸಹಾ ಸುಮಾರು ೪೫೦ ಕುದುರೆಗಳನ್ನು ಮತ್ತು ೫೦೦ ಅಶ್ವಾರೂಢರೊಂದಿಗೆ ರೆಜಿಮೆಂಟ್ದಾರ್ ಚಾಮರಾಜ ಅರಸ್ ಅವರ ನೇತೃತ್ವದಲ್ಲಿ ಕಳುಹಿಸಿಕೊಟ್ಟಿದ್ದರು. ಮೈಸೂರಿನ ಚಾಮರಾಜ ಅರಸರ ನೇತೃತ್ವದ ಅಶ್ವಪಡೆಯನ್ನು ಜೋಧಪುರ ಮತ್ತು ಹೈದರಾಬಾದಿನ ಅಶ್ವದಳಕ್ಕೆ ಸೇರಿಸಿ ಮೇಜರ್ ದಲಪತ್ ಸಿಂಗ್ ಶೆಖಾವತ್ತರ ನೇತೃತ್ವದಲ್ಲಿ 33 ಹಡಗುಗಳಲ್ಲಿ ಭಾರತದ ಅಶ್ವಾರೂಢ ದಳವನ್ನು ಈಜಿಪ್ಟಿಗೆ ರವಾನಿಸಿದರು. ಹೀಗೆ ಭಾರತದ ಇತರೆ ಪ್ರದೇಶಗಳಿಂದ ಹೊರಟ ಸುಮಾರು ಹದಿಮೂರು ಲಕ್ಷ ಜನ ಸೈನಿಕರು ಮೊದಲನೆ ವಿಶ್ವಯುದ್ಧದಲ್ಲಿ ಭಾಗವಹಿಸಿ, ಫ್ರಾನ್ಸ್, ಈಜಿಪ್ಟ್, ಮೆಸಪಟೋಮಿಯ, ಗಲ್ಲಿಪೋಲಿ ಮತ್ತು ಸಿನಾಯ್ ಪ್ರದೇಶಗಳಲ್ಲಿನ ಯುದ್ಧಗಳಲ್ಲಿ ಭಾಗವಹಿಸಿದರು. ಪ್ರಾರಂಭದ ದಿನಗಳಲ್ಲಿ ಬಹಳ ಕಷ್ಟವನ್ನು ಅನುಭವಿಸಿದ ಭಾರತೀಯ ಸೈನಿಕರು ಕೆಲವೇ ದಿನಗಳಲ್ಲಿ ಸುಧಾರಿಸಿಕೊಂಡು ಸಕ್ರಿಯವಾಗಿ ಯುದ್ಧದಲ್ಲಿ ಭಾಗವಹಿಸಿ ತಮ್ಮ ಶೌರ್ಯ ಸಾಹಸಗಳ ಪ್ರದರ್ಶನ ನೀಡಿದರು. ಯೂರೋಪ್ ಮತ್ತು ಆಫ್ರಿಕಾದೆಲ್ಲೆಡೆ ಸೈನ್ಯದ ಕಾರ್ಯಾಚರಣೆ ಭರದಿಂದ ನಡೆಯುತ್ತಿತ್ತು.ಸುಮಾರು ಮೂರು ವರ್ಷಗಳವರೆಗೆ ಸುಯೆಜ್ ಕಾಲುವೆಯ ರಕ್ಷಣೆಯ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಈ ಅಶ್ವಾರೂಢರ ತಂಡಕ್ಕೆ 1918 ರ ಸೆಪ್ಟೆಂಬರಿನಲ್ಲಿ ಇನ್ನೊಂದು ಮಹತ್ತರ ಕಾರ್ಯಾಚರಣೆಯನ್ನು ವಹಿಸಲಾಗಿತ್ತು, ಅದೇ “ಹೈಫಾ” ಬಂದರನ್ನು ತುರ್ಕಿ ಮತ್ತು ಜರ್ಮನಿ ಸೈನಿಕರಿಂದ ವಶಪಡಿಸಿಕೊಳ್ಳುವುದು.
ಹೈಫಾ ಬಂದರು ನಗರ
ಹೈಫಾ ಬಂದರುನಗರ ಈಗಿನ ಇಸ್ರೇಲಿನ ಎರಡನೇ ಅತಿದೊಡ್ಡ ನಗರ ಹಾಗು ಪ್ರಮುಖ ಬಂದರು. ಐತಿಹಾಸಿಕವಾಗಿ ಸಮುದ್ರಮಾರ್ಗದಲ್ಲಿ ಮತ್ತು ಭೂಮಾರ್ಗವಾಗಿ ನಡೆಯುತ್ತಿದ್ದ ಸರಕು ಸಾಗಾಣಿಕೆಗೆ ಈ ಬಂದರು ನಗರ ಒಂದು ಮುಖ್ಯವಾದ ಸಾರಿಗೆ ಶಿಬಿರವಾಗಿತ್ತು. ಹೈಫಾದಿಂದ ವಿಯೆಟ್ನಾಮಿನ ಹನಾಯ್ ವರೆಗೂ ಇದ್ದ ಅಂತರಾಷ್ಟೀಯ ಹೆದ್ದಾರಿಗೆ ಯೂರೋಪ್ ಮತ್ತು ಏಷಿಯಾ ಖಂಡಗಳ ನಡುವಣ ಕೊಂಡಿಯಾಗಿತ್ತು ಹೈಫಾ ಬಂದರುನಗರ. ಹಾಗಾಗಿ ಇದನ್ನು ವಶಪಡಿಸಿಕೊಳ್ಳಲು ಹಲವಾರು ಯುದ್ಧಗಳೂ ಸಹಾ ನಡೆದಿದ್ದವು. ಸುಮಾರು 400 ವರ್ಷಗಳಿಂದ ತುರ್ಕಿಯ ಒಟ್ಟೊಮನ್ ಸಾಮ್ರಾಜ್ಯದ ಆಡಳಿತದಲ್ಲಿದ್ದ ಈ ಮುಖ್ಯ ಬಂದರನ್ನು ವಶಪಡಿಸಿಕೊಳ್ಳುವುದು ಬ್ರಿಟಿಷರ ಕದನತಂತ್ರದ ಬಹು ಮುಖ್ಯವಾದ ಅಂಗವಾಗಿತ್ತು. ಹೈಫಾ ಬಂದರಿನ ಭೌಗೋಳಿಕ ಪ್ರಾಮುಖ್ಯತೆಯನ್ನರಿತಿದ್ದ ಜರ್ಮನರು ಮತ್ತು ತುರ್ಕಿಯವರು ಅಲ್ಲಿ ರಕ್ಷಣಾಪಡೆಗಳ ಕೋಟೆಯನ್ನೇ ನಿರ್ಮಿಸಿದ್ದರು. ಒಂದು ಕಡೆ ಕಿಶೋನ್ ನದಿ, ಮತ್ತೊಂದು ಕಡೆ ಮೌಂಟ್ ಕಾರ್ಮೆಲ್ ಗುಡ್ಡಗಳ ಸಾಲು ಮತ್ತು ಪಶ್ಚಿಮಕ್ಕೆ ಮೆಡಿಟರೇನಿಯನ್ ಸಮುದ್ರ, ಹೀಗೆ ನಾಲ್ಕೂ ಕಡೆಯಿಂದ ಬರಬಹುದಾದ ಶತ್ರುಗಳ ಮೇಲೆ ಕಣ್ಗಾವಲಿಡಲು ಎಲ್ಲಾಕಡೆ ತುರ್ಕಿಯ ಮತ್ತು ಜರ್ಮನಿಯ ಸೈನಿಕರ ಜಮಾವಣೆಯಾಗಿತ್ತು. ಬೆಟ್ಟಗಳ ಮೇಲೆ ಜರ್ಮನರ ಮಷೀನು ಗನ್ನುಗಳು ನಾಲ್ಕೂಕಡೆ ಶತ್ರುಗಳ ಚಲನವಲನಗಳನ್ನು ಗಮನಿಸುತ್ತಿದ್ದರು, ಹಾಗಾಗಿ ಈ ಬಂದರುನಗರವನ್ನು ವಶಪಡಿಸುವುದಿರಲಿ ಒಬ್ಬಬ್ಬರಾಗಿ ಪ್ರವೇಶಿಸುವದೂ ಕಷ್ಟಸಾಧ್ಯವಾಗಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಮಷೀನು ಗನ್ನುಗಳ ಪೋಸ್ಟ್, ಮತ್ತು ಮದ್ದು ಗುಂಡುಗಳ ಉಗ್ರಾಣಗಳನ್ನು ನಿರ್ಮಿಸಲಾಗಿತ್ತು.
ಇಂತಹ ಬಲವಾದ ಭದ್ರಕೋಟೆಯನ್ನು ಹೇಗೆ ಬೇಧಿಸುವುದು ಎಂದು ಬ್ರಿಟಿಷರು ಯೋಚನೆಯಲ್ಲಿ ಮುಳುಗಿದ್ದರು. ಈ ಪರಿಸ್ಥಿತಿಯಲ್ಲಿ ಬ್ರಿಟಿಷರು ಇನ್ನೇನು ಮಾಡುವುದು ಎಂದು ಯೋಚನೆಯಲ್ಲಿ ಮುಳುಗಿದ್ದಾಗ, ಮೇಜರ್ ದಲಪತ್ ಶೆಖಾವತ್ತರು ನಮಗೆ ಸ್ವಲ್ಪ ಸಮಯ ಕೊಡಿ ನಾವು ಒಂದು ಉಪಾಯ ಕಂಡುಹಿಡಿಯುತ್ತೇವೆ ಎಂದರು. ಕ್ಯಾಪ್ಟನ್ ಅನೂಪ್ ಸಿಂಗ್ ಮತ್ತು ಮೈಸೂರಿನ ಕೆಲವು ಅನುಭವಿ ಅಶ್ವಾರೂಢರೊಂದಿಗೆ ರಾತ್ರಿಯ ಕತ್ತಲಿನಲ್ಲಿ ಅಲ್ಲಿದ್ದ ಬೆಟ್ಟಗುಡ್ಡಗಳನ್ನು ಪರಿಶೀಲಿಸಲಾರಂಭಿಸಿದರು. ಸಮುದ್ರದಿಂದ ಸ್ವಲ್ಪ ದೂರದಲ್ಲೇ ಮೌಂಟ್ ಕಾರ್ಮೆಲ್ ಬೆಟ್ಟವಿತ್ತು. ಆ ಬೆಟ್ಟದ ಪಶ್ಚಿಮ ಭಾಗದಿಂದ ಸಮುದ್ರ ಮಾರ್ಗದಲ್ಲಿ ಮತ್ತು ಹೆದ್ದಾರಿಯಲ್ಲಿ ಹೋಗಿಬರುವವರ ಮೇಲೆ ಸದಾ ನಿಗಾ ಇಟ್ಟುಕೊಂಡು ಕಾಯ್ದಿರುತ್ತಿದ್ದರು ಜರ್ಮನಿ ಮತ್ತು ತುರ್ಕಿಯ ಸೈನಿಕರು. ಬೆಟ್ಟದ ಪೂರ್ವಕ್ಕೆ ಅಂತಹಾ ಕಾವಲೇನು ಇರಲಿಲ್ಲ. ಬೆಟ್ಟದ ಈ ಭಾಗಕ್ಕೆ ಅಶ್ವಪಡೆಗಳನ್ನು ತಂದು ನಿಲ್ಲಿಸುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದರು. ಅದನ್ನು ಮೂಲ ಶಿಬಿರವಾಗಿಟ್ಟು ಕೊಂಡು ಹೈಫಾ ಬಂದರುನಗರದ ಮೇಲೆ ಮೂರು ದಿಕ್ಕಿನಿಂದ ಆಕ್ರಮಣ ಮಾಡುವ ಯೋಜನೆ ಸಿದ್ಧವಾಯಿತು. ಜೋಧಪುರದ ಪಡೆ ಮೌಂಟ್ ಕಾರ್ಮೆಲ್ ಬೆಟ್ಟದ ಮೇಲಿಂದ ಮತ್ತು ಮೈಸೂರಿನ ಪಡೆಗಳು ಉತ್ತರ ಮತ್ತು ಪೂರ್ವ ದಿಕ್ಕಿನಿಂದ ನಗರ ಪ್ರವೇಶ ಮಾಡಬೇಕು ಎಂದು ನಿರ್ಣಯಿಸಲಾಯಿತು. ಈ ಯುಧ್ಧತಂತ್ರವನ್ನು ಬ್ರಿಟಿಷ್ ಜನರಲ್ ಗಳಿಗೆ ವಿವರಿಸಿದಾಗ ಬ್ರಿಟಿಷ್ ಜನರಲ್ ಇದನ್ನು ತಳ್ಳಿಹಾಕಿ ಬಿಡುತ್ತಾರೆ, ಮಷೀನುಗನ್ನುಗಳ ವಿರುದ್ದ ಭರ್ಚಿ ಹಿಡಿದುಕೊಂಡ ಅಶ್ವಾರೂಢರು ಯುದ್ಧ ಮಾಡುವುದೇ? ಆದರೆ ಬೇರೆ ದಾರಿಯೂ ಇಲ್ಲ, ಹೈಫಾ ಬಂದರನ್ನು ವಶಪಡಿಸಿಕೊಳ್ಳುವುದಂತೂ ಯುದ್ಧವನ್ನು ಗೆಲ್ಲಲು ಬಹಳ ಪ್ರಮುಖವಾದ ಯೋಜನೆ. ಸರಿ ನಿಮ್ಮ ರಣತಂತ್ರ ಯಶಸ್ವಿಯಾಗಲಿ ಎಂದು ಅನುಮತಿ ನೀಡಿದರು. ಬಂದೂಕು ಚಲಾಯಿಸುವುದರಲ್ಲಿ ಪರಿಣಿತಿ ಪಡೆದಿದ್ದ ಮೈಸೂರಿನ ಪಡೆಗೆ ಬ್ರಿಟಿಷರ ಬಳಿ ಇದ್ದ ಬಂದೂಕುಗಳನ್ನು ಕೊಡಲಾಯಿತು.
ಹಠಾತ್ತನೆ ಆಕ್ರಮಣ
23 ಸೆಪ್ಟಂಬರ್ 1918 ರಂದು ಪೂರ್ವ ನಿಯೋಜಿತ ತಂತ್ರದಂತೆ ಜೋಧಪುರದ ಪಡೆ ಕುದುರೆಗಳನ್ನು ಮೆಲುನಡೆಯಲ್ಲಿ ಬೆಟ್ಟದ ಮೇಲೆ ಏರಿಸಿ ನಿಗದಿತ ಸಮಯಕ್ಕೆ ಕಾಯುತ್ತಾ ಕುಳಿತಿದ್ದರು. ಮೇಜರ್ ದಲಪತ್ ಸಿಂಗರಿಂದ ಆಜ್ಞೆ ಬರುತ್ತಲೇ ಕುದುರೆಗಳ ಮೆಲ್ಲನೆಯ ಮೆಲುನಡೆ…ಸುಳಿನಡೆಗೆ ತಿರುಗಿ, ಸುಳಿನಡೆ..
ಕುಕ್ಕುಲೋಟಕ್ಕೆ ಮುಂದೆ ನಾಗಾಲೋಟಕ್ಕೆ ತಿರುಗತ್ತಿದ್ದಂತೆ…ಹರ್ ಹರ್ ಮಹಾದೇವ್ ಎನ್ನುವ ರಣಕೇಕೆಯೊಂದಿಗೆ ಅಶ್ವಾರೂಢರ ಮಿಂಚಿನ ದಾಳಿ ನಡೆದೇ ಬಿಟ್ಟಿತು. ಜೋಧಪುರದ ದಳ ಪೂರ್ವದಿಂದ ತುರ್ಕಿಸ್ತಾನದ ಸೈನ್ಯದ ಮೇಲೆ ದಾಳಿ ನಡೆಸಿತು. ಅದೇ ಸಮಯಕ್ಕೆ ಮೈಸೂರಿನ ಒಂದು ಪಡೆ ಬೆಟ್ಟದ ಮೇಲೇರಿ ತುರ್ಕಿಸ್ತಾನದ ಪಡೆಗಳ ಮೇಲೆ ಗುಂಡುಮದ್ದುಗಳ ಮಳೆಗರೆದರು. ಅನಿರೀಕ್ಷಿತವಾಗಿ ನಡೆದ ದಾಳಿಯಿಂದ ಕಕ್ಕಾಬಿಕ್ಕಿಯಾಗಿ ಓಡಿಹೋದರು ತುರುಕರು. ಕೂಡಲೇ ಮೈಸೂರಿನ ಪಡೆ ಮಷೀನ್ ಗನ್ನುಗಳನ್ನು ವಶಪಡಿಸಿಕೊಂಡಿತು. ಮೈಸೂರಿನ ಇನ್ನೊಂದು ಪಡೆ ಪೂರ್ವದ ಹೆಬ್ಬಾಗಿಲಿನಿಂದ ಹೈಫಾ ನಗರವನ್ನು ಪ್ರವೇಶಿತು. ಕುದುರೆಗಳ ನಾಗಾಲೋಟದ ಈ ದಾಳಿಯಿಂದ ಕಕ್ಕಾಬಿಕ್ಕಿಯಾಗಿ ಜರ್ಮನರ ಸೈನಿಕರು ಮಷೀನು ಗನ್ನುಗಳ ದಾಳಿ ನಡೆಸಿದರೂ, ನಿರಂತರವಾಗಿ ಬರುತ್ತಿದ್ದ ಕುದುರೆ ಪಡೆಗಳನ್ನು ನೋಡಿ ಓಡಲು ಶುರುಮಾಡಿದರು. ಕೆಲವೇ ಘಂಟೆಗಳಲ್ಲಿ ಹೈಫಾ ಬಂದರುನಗರ ಭಾರತೀಯ ಅಶ್ವಪಡೆಯ ವಶವಾಯಿತು. ಕೂಡಲೇ ಕಾರ್ಯಗತವಾದ ಹೈದರಾಬಾದಿನ ಪಡೆ ಸುಮಾರು 1350 ಕ್ಕೂ ಹೆಚ್ಚು ಜರ್ಮನ್ ಮತ್ತು ಒಟ್ಟೋಮನ್ ಸೈನಿಕರನ್ನು ವಶಪಡಿಸಿಕೊಂಡಿತು. ನೂರಾರು ವರ್ಷಗಳಿಂದ ಯೂರೋಪಿಯನ್ನರಿಗೆ ಪ್ರವೇಶ ನಿಷೇಧಗೊಳಿಸಿದ್ದ ಹೈಫಾನಗರವನ್ನು ಮತ್ತು ಬಂದರನ್ನು ಸಂಚಾರಕ್ಕೆ, ವ್ಯಾಪಾರಕ್ಕೆ ಮುಕ್ತಗೊಳಿಸಲಾಯಿತು.
ಹೈಫಾದಲ್ಲಿ ಮೈಸೂರಿನ ಅಶ್ವಾರೂಢರಿಂದ ಇನ್ನೊಂದು ಮಹತ್ಕಾರ್ಯ ನಡೆಯುತ್ತದೆ. ತುರ್ಕಿಯ ಸುಲ್ತಾನರು ಬಹಾಯಿ ಸಮುದಾಯದ ಮುಖ್ಯಸ್ಥ ಅಬ್ದುಲ್ ಬಹಾ ಎನ್ನುವವರನನ್ನು ಬಹಳ ವರ್ಷಗಳ ತನಕ ಸೆರೆಮನೆಯಲ್ಲಿಟ್ಟಿರುತ್ತಾರೆ. ಹೈಫಾನಗರವನ್ನು ವಶಪಡಿಸಿಕೊಂಡ ನಂತರದ ಸಮಯದಲ್ಲಿ ಸೆರೆಮನೆಯಲ್ಲಿದ್ದ ಬಹಾಯಿ ಧರ್ಮ ಗುರುವನ್ನು ಗುರುತಿಸಿ ಅವರನ್ನು ಕುದುರೆ ಮೇಲೆ ಕೂರಿಸಿಕೊಂಡು ದೂರದ ನಗರದಲ್ಲಿದ್ದ ಬಹಾಯಿ ಸಮುದಾಯಕ್ಕೆ ಒಪ್ಪಿಸಿ ಬರುತ್ತಾರೆ. ಅವನತಿಯ ಅಂಚಿನಲ್ಲಿದ್ದ ಬಹಾಯಿ ಸಮುದಾಯ ಪುನಃಶ್ಚೇತನಗೊಳ್ಳುತ್ತದೆ ಮತ್ತು ಆ ಸಮುದಾಯ ಈಗಲೂ ಮೈಸೂರಿನ ಅಶ್ವಾರೂಢರನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತಾರಂತೆ. ಮುಂದೆ 1948 ರಲ್ಲಿ ಇಸ್ರೇಲಿನ ಸ್ಥಾಪನೆಯಾದನಂತರ ಹೈಫಾ ಅಲ್ಲಿನ ಪ್ರಮುಖ ಬಂದರು ನಗರವಾಯಿತು. ಈ ಕಾರ್ಯಾಚರಣೆಯಲ್ಲಿ ಮೇಜರ್ ದಲಪತ್ ಶೆಖಾವತ್ತರು ವೀರಮರಣವನ್ನಪ್ಪಿದರು. ಮೈಸೂರಿನ ಹಲವಾರು ಅಶ್ವಾರೋಹಿ ಸೈನಿಕರೂ ಮತ್ತು ಕುದುರೆಗಳೂ ಸಹ ಹತವಾದರು.
ಇಸ್ರೇಲಿನ ಪಠ್ಯ ಪುಸ್ತಕಗಳಲ್ಲಿ ಈ ವೀರಗಾಥೆಯನ್ನು ಇಲ್ಲಿಯ ಮಕ್ಕಳಿಗೆ ಪರಿಚಯಿಸಲಾಗುತ್ತಿದೆ. ಇಸ್ರೇಲಿನಂತಹ ವೀರರ ನಾಡಿನಲ್ಲಿ ನಮ್ಮ ನಾಡಿನ ಶೂರರೂ ಪ್ರದರ್ಶಿಸಿದ ಪರಾಕ್ರಮ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಲ್ಲವೇ? ಯುದ್ಧ ಮುಗಿದ ನಂತರ ಭಾರತಕ್ಕೆ, ಮೈಸೂರಿಗೆ ಮರಳಿದ ಅಶ್ವತಂಡಕ್ಕೆ ನಾಲ್ಮಡಿ ಕೃಷ್ಣರಾಜ ಒಡೆಯರಿಂದ ಭವ್ಯ ಸ್ವಾಗತ ಮತ್ತು ಪ್ರಶಸ್ತಿಗಳ ಸಂಧಾನವಾಗುತ್ತದೆ.
ಈ ಅಶ್ವಾರೂಢ ಯೋಧರ ಅಪ್ರತಿಮ ಸಾಹಸದ ಸ್ಮರಣಾರ್ಥವಾಗಿ ದೆಹಲಿಯಲ್ಲಿ ಒಂದು ಯುಧ್ಧ ಸ್ಮಾರಕವನ್ನು ನಿರ್ಮಾಣ ಮಾಡಲಾಯಿತು. ಅದೇ “ತೀನ್ ಮೂರ್ತಿ ಸ್ಮಾರಕ”, ಜೋಧಪುರ, ಹೈದರಾಬಾದ್ ಮತ್ತು ಮೈಸೂರಿನ ಅಶ್ವಾರೂಢರ ಸಂಕೇತವಾಗಿ ಈ ಮೂರು ಮೂರ್ತಿಗಳು.
✍️..ವಿಂಗ್ ಕಮಾಂಡರ್ ಬಿ ಎಸ್ ಸುದರ್ಶನ್