ಬೆಳಗಾವಿ: ಪತ್ನಿಗೆ ಮಾನಸಿಕ ಕಿರುಕುಳ ನೀಡಿ ಮೂಗು ಕತ್ತರಿಸಿ ಹಲ್ಲೆ ಮಾಡಿ ಭಾರಿ ಗಾಯ ಮಾಡಿದ ಆರೋಪಿಗೆ ಇಲ್ಲಿಯ 5 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶನಿವಾರ ಶಿಕ್ಷೆ ಪ್ರಕಟಿಸಿದೆ.
ಮಹಾರಾಷ್ಟ್ರದ ಶೆಡಸ್ಯಾಳದ ಸುರೇಶ ಪರಶುರಾಮ ನಾಯಿಕ(38)ಶಿಕ್ಷೆಗೊಳಗಾದ ಆರೋಪಿ. ಈತ ತನ್ನ ಪತ್ನಿ ಕಾಗವಾಡದ ಸುನೀತಾ ನಾಯಿಕ ಅವರ ಮೂಗು ಕತ್ತರಿಸಿ ಹಲ್ಲೆಗೈದಿದ್ದ. ಪ್ರತಿದಿನ ಸಾರಾಯಿ ಕುಡಿದು ಬಂದು ಪತ್ನಿ ಸುನೀತಾಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ. ಹೀಗಾಗಿ ಸುನೀತಾ ತವರು ಮನೆಯಾದ ಕಾಗವಾಡಕ್ಕೆ ಬಂದು ಮತ್ತೆ ಗಂಡನ ಮನೆಗೆ ಹೋಗಿರಲಿಲ್ಲ. ಆದರೆ, ಆರೋಪಿ ಸುರೇಶ ಆಗಾಗ ಸುನೀತಾರ ತವರು ಮನೆಗೆ ಬಂದು ಕಿರುಕುಳ ನೀಡುವುದನ್ನು ಮುಂದುವರಿಸಿದ್ದ. ಪತ್ನಿ ತವರು ಮನೆಯಲ್ಲೇ ಇದ್ದ ಕಾರಣಕ್ಕೆ ಸಿಟ್ಟಾಗಿದ್ದ ಆರೋಪಿ, 2019 ರ ಜ. 6ರಂದು ರಾತ್ರಿ ಕಾಗವಾಡದ ಪತ್ನಿ ಮನೆಗೆ ಬಂದು ಮನೆಗೆ ಬಾ ಎಂದು ಕರೆದಿದ್ದಾನೆ. ಆಗ ಪತ್ನಿ ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆತ ಪತ್ನಿಯನ್ನು ಕೊಲೆಗೈಯುವ ಉದ್ದೇಶದಿಂದ ಚಾಕುವಿನಿಂದ ಮೂಗು ಮತ್ತು ಬಾಯಿಯ ಮೇಲೆ ಕೊಯ್ದು ಭಾರಿ ಪ್ರಮಾಣದಲ್ಲಿ ಹಲ್ಲೆ ಮಾಡಿದ್ದಾನೆ.
ಈ ಬಗ್ಗೆ ಕಾಗವಾಡದ ಹಿಂದಿನ ಪಿಎಸ್ಐ ಹನುಮಂತ ಶಿರಹಟ್ಟಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಬೆಳಗಾವಿಯ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಚ್.ಎಸ್ . ಮಂಜುನಾಥ ಅವರು ಅಭಿಯೋಜನೆ ಪರವಾಗಿ ಹಾಜರುಪಡಿಸಲಾದ ಸಾಕ್ಷಿ ಮತ್ತು ವಾದ-ವಿವಾದ ಅವಲೋಕಿಸಿ ಆರೋಪಿ ಸುರೇಶ ನಾಯಿಕಗೆ ಒಂದು ವರ್ಷ ಜೈಲು ಮತ್ತು 10,000 ರೂ.ದಂಡ ಮತ್ತು ಚಾಕುವಿನಿಂದ ಮೂಗು ಮತ್ತು ಬಾಯಿಗೆ ಭಾರಿ ಪ್ರಮಾಣದಲ್ಲಿ ಗಾಯಪಡಿಸಿದ್ದ ಅಪರಾಧಕ್ಕೆ 5 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 30,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರ ಸರಕಾರಿ ಅಭಿಯೋಜಕ ಐ.ಎಂ.ಮಠಪತಿ ವಾದ ಮಂಡಿಸಿದ್ದರು
ವಿಲಕ್ಷಣ ಘಟನೆ ಇದು ಹೆಂಡತಿಯ ಮೂಗು ಕೊಯ್ದ ಗಂಡನಿಗೆ ಕೊನೆಗೂ ಶಿಕ್ಷೆ
