ಅಬುದಾಬಿ : ‘ಎ’ ಗುಂಪಿನ ಕೊನೆಯ ಪಂದ್ಯ ಇಂದು ನಡೆಯಲಿದ್ದು, ಒಮಾನ್ ಸವಾಲನ್ನು ಭಾರತ ಎದುರಿಸಲಿದೆ. ಈ ಪಂದ್ಯವನ್ನು ಗೆದ್ದು ಗುಂಪಿನ ಅಗ್ರಸ್ಥಾನಿಯಾಗಿ ಭಾರತ ಸೂಪರ್ ಫೋರ್ಗೆ ಲಗ್ಗೆ ಇಡುವುದು ಬಹುತೇಕ ಖಚಿತವೆನಿಸಿದೆ.
ಏಷ್ಯಾ ಕಪ್ ಟಿ20 ಪಂದ್ಯಾವಳಿಯಲ್ಲಿ ಈಗಾಗಲೇ ಸೂಪರ್-4ಗೆ ಪ್ರವೇಶಿಸಿರುವ ಭಾರತ “ಎ’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಶುಕ್ರವಾರ ಅಬುಧಾಬಿಯಲ್ಲಿ ದುರ್ಬಲ ಒಮಾನ್ ತಂಡವನ್ನು ಎದುರುಗೊಳ್ಳಲಿದೆ. ಒಮಾನ್ ಈಗಾಗಲೇ ಕೂಟದಿಂದ ಹೊರಬಿದ್ದಿರುವುದರಿಂದ ಎರಡೂ ತಂಡಗಳ ಪಾಲಿಗೂ ಇದೊಂದು ಔಪಚಾರಿಕ ಪಂದ್ಯವಾಗಿರಲಿದೆ.
ಪಂದ್ಯಾವಳಿಯಲ್ಲಿ ಆಡಿರುವ 2 ಪಂದ್ಯಗಳಲ್ಲಿ ಭಾರತ ಕ್ರಮವಾಗಿ ಯುಎಇ ಮತ್ತು ಪಾಕಿಸ್ಥಾನ ವಿರುದ್ಧ ಗೆದ್ದಿದೆ. ಹೀಗಾಗಿ ಶುಕ್ರವಾರದ ಪಂದ್ಯವನ್ನೂ ಗೆದ್ದು ಮುನ್ನುಗ್ಗುವ ವಿಶ್ವಾಸದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವಿದೆ. ಇತ್ತ ಒಮಾನ್ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ ಸೋತಿತ್ತು. ಮುಂದಿನ ಪಂದ್ಯದಲ್ಲಿ ಯುಎಇಗೆ ಶರಣಾಗಿತ್ತು.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಭಾರತ ಮತ್ತು ಒಮಾನ್ ತಂಡಗಳು ಎಂದಿಗೂ ಮುಖಾಮುಖೀ ಆಗಿದ್ದಿಲ್ಲ. ಹೀಗಾಗಿ ಇದು ಇತ್ತಂಡಗಳ ನಡುವಿನ ಮೊದಲ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
ಇದು ಔಪಚಾರಿಕ ಪಂದ್ಯವಾಗಿರುವ ಕಾರಣ ಭಾರತೀಯ ತಂಡದಲ್ಲಿ ಸಣ್ಣಪುಟ್ಟ ಬದಲಾವಣೆಗಳು ನಿರೀಕ್ಷಿತ. ಮುಖ್ಯವಾಗಿ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಪಂದ್ಯದಿಂದ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ಇವರ ಬದಲಿಗೆ ಅರ್ಶದೀಪ್ ಸಿಂಗ್ ಕಣಕ್ಕಿಳಿಯುವ ನಿರೀಕ್ಷೆಯಿದೆ.
ಜತೀಂದರ್ ಸಿಂಗ್ ನಾಯಕತ್ವದ ಒಮಾನ್ ತಂಡದಲ್ಲಿ ಹೇಳಿಕೊಳ್ಳುವ ಬ್ಯಾಟರ್ಗಳಿಲ್ಲ. ಆದರೆ ಬೌಲರ್ಗಳ ಬಣ ತಕ್ಕಮಟ್ಟಿಗೆ ಚೆನ್ನಾಗಿದೆ. ಮಧ್ಯಮ ವೇಗಿ ಜುನೈದ್ ಸಿದ್ದಿಕ್, ಹೈದರ್ ಅಲಿ, ಮೊಹಮ್ಮದ್ ಜವಾದುಲ್ಲ ಇವರೆಲ್ಲ ಪಂದ್ಯದ ವೇಳೆ ಗಮನ ಸೆಳೆಯಬಲ್ಲರು.
ಬಿ ಗುಂಪಿನಿಂದ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಮತ್ತು ‘ಎ’ ಗುಂಪಿನಿಂದ ಭಾರತ ಹಾಗೂ ಪಾಕಿಸ್ತಾನ ತಂಡಗಳು ತೇರ್ಗಡೆ ಹೊಂದಿವೆ.
‘ಬಿ’ ಗುಂಪಿನ ಎಲ್ಲ ಪಂದ್ಯಗಳು ಕೊನೆಗೊಂಡಿವೆ. ಶ್ರೀಲಂಕಾ ವಿರುದ್ಧ ಗುರುವಾರ ನಡೆದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಸೋಲನುಭವಿಸಿರುವ ಅಫ್ಘಾನಿಸ್ತಾನ ಕೂಟದಿಂದಲೇ ನಿರ್ಗಮಿಸಿದೆ.
ಎಲ್ಲ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಶ್ರೀಲಂಕಾ, ಒಟ್ಟು ಆರು ಅಂಕ ಗಳಿಸಿ ‘ಬಿ’ ಗುಂಪಿನ ಅಗ್ರಸ್ಥಾನಿಯಾಗಿ ಸೂಪರ್ ಫೋರ್ ಹಂತಕ್ಕೆ ಲಗ್ಗೆ ಇಟ್ಟಿದೆ.
ಬಾಂಗ್ಲಾದೇಶ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಒಂದು ಸೋಲಿನೊಂದಿಗೆ ನಾಲ್ಕು ಅಂಕಗಳೊಂದಿಗೆ ಎರಡನೇ ಸ್ಥಾನಿಯಾಗಿ ಮುನ್ನಡೆದಿದೆ.
ಈ ಗುಂಪಿನಲ್ಲಿ ಅಫ್ಘಾನಿಸ್ತಾನದೊಂದಿಗೆ ಎಲ್ಲ ಮೂರು ಪಂದ್ಯಗಳಲ್ಲಿ ಮುಗ್ಗರಿಸಿರುವ ಹಾಂಕ್ಕಾಂಗ್ ಸಹ ಹೊರಬಿದ್ದಿದೆ.