ಬೆಳಗಾವಿ :
ಗಣಿಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಬುಧವಾರದಂದು ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಂ. ಡಿ. ಚಡಿಚಾಳ ಅವರನ್ನು ಹಳೆಯ ವಿದ್ಯಾರ್ಥಿ ಸಂಘ ಹಾಗೂ ಗ್ರಾಮಸ್ಥರು ಆತ್ಮೀಯವಾಗಿ ಸನ್ಮಾನಿಸಿದರು.
ಸನ್ಮಾನ ಸ್ವಿಕರಿಸಿ ಮಾತನಾಡಿದ ಎಂ. ಡಿ. ಚಡಿಚಾಳ, ನಾನು ಅನೇಕ ವರ್ಷಗಳಿಂದ ಶಿಕ್ಷಕ ವೃತ್ತಿಯನ್ನು ಮಾಡುತ್ತಿದ್ದು ಈ ಊರಿಗೆ ಬಂದಿದ್ದು ನನ್ನ ಪೂರ್ವ ಜನ್ಮದ ಪುಣ್ಯ. ಈ ಊರಿನ ಯುವಕರು ಹಾಗೂ ಗ್ರಾಮಸ್ಥರ ಸಹಾಯದಿಂದ ಶಾಲೆಯ ವಾತಾವರಣವನ್ನು ಬದಲಾಯಿಸಲು ಸಾಧ್ಯವಾಯಿತು. ನಮ್ಮ ಶಾಲೆಯ ಮಕ್ಕಳ ಪ್ರತಿಭೆ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಇಂದು ಬೆಳಗುತ್ತಿದೆ. ಅದಕ್ಕೆ ಕಾರಣ ನಮ್ಮ ಶಾಲೆಯ ಶಿಕ್ಷಕ ವೃಂದ ಹಾಗೂ ತಮ್ಮೆಲ್ಲರ ಸಹಕಾರ, ಮಕ್ಕಳ ಉತ್ತಮ ಶಿಕ್ಷಣದ ಭವಿಷ್ಯಕ್ಕಾಗಿ ನನ್ನ ಜೀವನವನ್ನೇ ಸದಾ ಮುಡಿಪಾಗಿಡುವೆ ಎಂದರು.
ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರಾದ ಮಲ್ಲಿಕಾರ್ಜುನ ಹಿರೇಕೊಪ್ಪ , ಶಿವಪ್ಪ ಹೊಂಗಲ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶಾಲೆಯ ಶಿಕ್ಷಕರಾದ ಭರಮಣ್ಣವರ, ಶಿಕ್ಷಕಿಯರಾದ ಸುನೀತಾ ಬನಸಿ ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ವಿಶಾಲ ಪಾಟೀಲ ನಿರೂಪಿಸಿದರು. ಪೇಮಾ ಗಾಬಿ ಸ್ವಾಗತಿಸಿದರು. ವೀಣಾ ಹಿರೇಮಠ ವಂದಿಸಿದರು.