ಬೆಳಗಾವಿ: ರೈಲ್ವೆ ಮತ್ತು ಜಲಶಕ್ತಿ ಇಲಾಖೆಯ ಕೇಂದ್ರ ರಾಜ್ಯ ಸಚಿವ ವಿ. ಸೋಮಣ್ಣ ಅವರು ಬೆಳಗಾವಿ ಮತ್ತು ಖಾನಾಪುರದಲ್ಲಿ ಎರಡು ಪ್ರಮುಖ ರಸ್ತೆ ಕೆಳ ಸೇತುವೆಗಳು ಹಾಗೂ ಖಾನಾಪುರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸೌಲಭ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಈ ಯೋಜನೆಗಳು ಈ ಪ್ರದೇಶಗಳ ಸಂಪರ್ಕ ಪ್ರಯಾಣದ ದಕ್ಷತೆ ಮತ್ತು ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಇದೇ ಸಂದರ್ಭದಲ್ಲಿ, ಖಾನಾಪುರದಲ್ಲಿ ಹೆಚ್ಚುವರಿ ನಿಲುಗಡೆಗೆ ಅವಕಾಶ ಕಲ್ಪಿಸಿದ ಎಸ್ಎಸ್ಎಸ್ ಹುಬ್ಬಳ್ಳಿ – ದಾದರ್ ಸೆಂಟ್ರಲ್ ಎಕ್ಸ್ ಪ್ರೆಸ್ (17317) ರೈಲಿಗೆ ಅವರು ಹಸಿರು ನಿಶಾನೆ ತೋರಿದರು.
ಅನಗೋಳ ಗೇಟ್ (4ನೇ ಗೇಟ್) ನಲ್ಲಿರುವ ಎಲ್ಸಿ 380 ರಲ್ಲಿ, ರೂ. 26.05 ಕೋಟಿ ವೆಚ್ಚದಲ್ಲಿ ರಸ್ತೆ ಕೆಳ ಸೇತುವೆಯನ್ನು ನಿರ್ಮಿಸಲಾಗುತ್ತದೆ. ಹಾಗೆಯೇ, ಖಾನಾಪುರ ಸ್ಟೇಷನ್ ಯಾರ್ಡ್ನಲ್ಲಿರುವ ಎಲ್ಸಿ 360 ರಲ್ಲಿ ರೂ. 11 ಕೋಟಿ ವೆಚ್ಚದಲ್ಲಿ ಮತ್ತೊಂದು ರಸ್ತೆ ಕೆಳ ಸೇತುವೆಯನ್ನು ನಿರ್ಮಿಸಲಾಗುತ್ತದೆ. ಇದರ ಜೊತೆಗೆ ಖಾನಾಪುರ ರೈಲು ನಿಲ್ದಾಣದಲ್ಲಿ ರೂ. 2.5 ಕೋಟಿ ವೆಚ್ಚದಲ್ಲಿ ವಿಶ್ರಾಂತಿ ಕೊಠಡಿ ಪ್ಲಾಟ್ ಫಾರ್ಮ್ ಮೇಲ್ಛಾವಾಣಿ, ಶೌಚಾಲಯ ವನ್ನು ಸೇರಿ ಇತರೆ ಪ್ರಯಾಣಿಕರ ಸೌಲಭ್ಯಗಳನ್ನು ನಿರ್ಮಿಸಲಾಗುತ್ತದೆ. ಈ ಯೋಜನೆಗಳು ಬೆಳಗಾವಿ ಮತ್ತು ಖಾನಾಪುರದ ಜನರ ಬಹುಕಾಲದ ಬೇಡಿಕೆಗಳನ್ನು ಈಡೇರಿಸುತ್ತಿದ್ದು, ವೇಗವಾದ ಮತ್ತು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ನಿರ್ಮಾಣ ಕಾರ್ಯವನ್ನು ನಿಗದಿತ ಸಮಯದಲ್ಲಿ ಉತ್ತಮ ಗುಣಮಟ್ಟದಿಂದ ಪೂರ್ಣಗೊಳಿಸಲು ಸೂಚನೆ ನೀಡಿದರು.
ಶಂಕುಸ್ಥಾಪನೆ ಕಾರ್ಯಕ್ರಮಕ್ಕೂ ಮುನ್ನ, ಸೋಮಣ್ಣ ಅವರು ಧಾರವಾಡ ಮತ್ತು ಬೆಳಗಾವಿ ನಡುವೆ ರೈಲಿನಲ್ಲಿ ಪ್ರಯಾಣಿಸಿ ಪರಿಶೀಲನೆ ನಡೆಸಿದರು. ಈ ಮಾರ್ಗದಲ್ಲಿ ಅವರು ಅಳ್ನಾವರ ಮತ್ತು ಲೋಂಡಾ ರೈಲ್ವೆ ನಿಲ್ದಾಣಗಳನ್ನು ಪರಿಶೀಲಿಸಿ, ಅಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಅವರ ಸಮಸ್ಯೆಗಳನ್ನು ಆಲಿಸಿದ ಸಚಿವರು, ಶೀಘ್ರವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ, ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್, ರಾಜ್ಯಸಭಾ ಸಂಸದ ಈರಣ್ಣ ಕಡಾಡಿ, ಶಾಸಕ ಅಭಯ್ ಪಾಟೀಲ್, ಮಹಾಪೌರ ಮಂಗೇಶ್ ಪವಾರ್, ಡಿಆರ್ ಎಂ ಹುಬ್ಬಳ್ಳಿ ಬೇಲಾ ಮೀನಾ, ಮುಖ್ಯ ಆಡಳಿತಾಧಿಕಾರಿ ಕನ್ಸ್ಟ್ರಕ್ಷನ್ ಅಜಯ್ ಶರ್ಮ;ಎಸ್. ಪಿ. ಶಾಸ್ತ್ರಿ, ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಖಾನಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯಸಭಾ ಸಂಸದ ಈರಣ್ಣ ಕಡಾಡಿ, ಶಾಸಕ ವಿಠಲ್ ಸೋಮಣ್ಣ ಹಲಗೇಕರ, ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಹಾಜರಿದ್ದರು.