ಬೆಳಗಾವಿ: ಖಾನಾಪುರ ಕ್ಷೇತ್ರದ ಬಹುದಿನಗಳ ಬೇಡಿಕೆಯಾಗಿದ್ದ ರೈಲ್ವೆ ಮೂಲಸೌಕರ್ಯ ಸುಧಾರಣಾ ಯೋಜನೆಗಳಿಗೆ ಇಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.
ಖಾನಾಪುರ ಸ್ಟೇಷನ್ ಯಾರ್ಡ್ನಲ್ಲಿರುವ ಎಲ್.ಸಿ. 360 ರೈಲ್ವೆ ಗೇಟ್ ಬದಲಿಗೆ ನಿರ್ಮಿಸಲಾಗುತ್ತಿರುವ ರಸ್ತೆ ಕೆಳ ಸೇತುವೆಗೆ ಶಿಲಾನ್ಯಾಸ ಮಾಡಲಾಯಿತು. ಜೊತೆಗೆ, ಹುಬ್ಬಳ್ಳಿ-ದಾದರ್ ಸೆಂಟ್ರಲ್ ಎಕ್ಸ್ಪ್ರೆಸ್ ರೈಲು (ಸಂಖ್ಯೆ 17317) ಖಾನಾಪುರದಲ್ಲಿ ಹೆಚ್ಚುವರಿ ನಿಲುಗಡೆಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಈ ಮಹತ್ವದ ನಿರ್ಧಾರಗಳನ್ನು ಘೋಷಿಸಲಾಯಿತು.
ಈ ಎರಡು ಮಹತ್ವದ ಯೋಜನೆಗಳು ಈ ಭಾಗದ ಜನರ ಜೀವನವನ್ನು ಸುಗಮಗೊಳಿಸಲಿವೆ. ವಿಶೇಷವಾಗಿ, ಖಾನಾಪುರ ನಿಲ್ದಾಣದಲ್ಲಿ ಹುಬ್ಬಳ್ಳಿ-ದಾದರ್ ಎಕ್ಸ್ಪ್ರೆಸ್ ರೈಲಿನ ನಿಲುಗಡೆಯು ಈ ಪ್ರದೇಶದ ಪ್ರಯಾಣಿಕರಿಗೆ ಮಹಾನಗರಗಳಿಗೆ ಸುಲಭವಾಗಿ ತಲುಪಲು ನೆರವಾಗಲಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಈ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಕ್ಕಾಗಿ ಅವರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಈ ಯೋಜನೆಗಳು ಖಾನಾಪುರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿ, ಸುಗಮ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಿವೆ.
ಇದು ಈ ಪ್ರದೇಶದ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ನೀಡಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ, ಶಾಸಕ ವಿಠ್ಠಲ್ ಹಲಗೇಕರ ಮತ್ತು ತಾಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.