ಮಂಗಳೂರು : ಬಾಲಕಿಯೊಬ್ಬಳು ಮನೆಯಲ್ಲಿ ಒಬ್ಬಳೇ ಇರುವುದನ್ನು ಅರಿತು ಆಕೆಯ ಮೇಲೆರಗಿ ಲೈಂಗಿಕ ಕೃತ್ಯವೆಸಗಿ ಕೊಲೆಗೈದ ಆರೋಪಿಗೆ ಶಿಕ್ಷೆಯಾಗಿದೆ. ಈ ಬಗ್ಗೆ ಸಾಕ್ಷ್ಯ ನುಡಿದ ಮಹಿಳೆಯರಿಂದಾಗಿ ಆರೋಪಿಗೆ ಡಬಲ್ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
ಘಟನೆ ಏನು ? ಅಪ್ರಾಪ್ತ ಬಾಲಕಿ ಮನೆಯಲ್ಲಿ
ಒಬ್ಬಂಟಿ ಇದ್ದಾಗ ಮನೆಗೆ ನುಗ್ಗಿ ಆಕೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆಗೈದ ಪ್ರಕರಣ ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಫ್ಸಿ-2(ಪೋಕ್ಸೊ) ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕು ಹಂಚಿನಾಳ ಗ್ರಾಮದ ನಿವಾಸಿ ಫಕೀರಪ್ಪ ಹಣಮಪ್ಪ ಮಾದರ (58) ಶಿಕ್ಷೆಗೊಳಗಾದ ಅಪರಾಧಿ.
ಅಪ್ರಾಪ್ತ ಬಾಲಕಿ ಬೆಳಗಾವಿ ಮೂಲದವಳಾಗಿದ್ದು, ಕೊಣಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಳು. ಬಾಲಕಿಯ ತಾಯಿ ಮಗಳನ್ನು ತನ್ನ ಸೋದರ ಸಂಬಂಧಿ ಮನೆಯಲ್ಲಿ ಬಿಟ್ಟು ಕೊಣಾಜೆ ವಸತಿ ಶಾಲೆಗೆ ಬಿಟ್ಟು ಬರುವಂತೆ ಹೇಳಿ ಊರಿಗೆ ತೆರಳಿದ್ದರು. 2024ರ ಆ.6 ರಂದು ಬೆಳಗ್ಗೆ ಪಿರ್ಯಾದಿದಾರರು (ಬಾಲಕಿಯ ಮಾವ) ಗಾರೆ ಕೆಲಸಕ್ಕೆ ಹೊರಟು ಹೋಗಿದ್ದರೆ ಅವರ ಹೆಂಡತಿ ಊರಿಗೆ ಹೋಗಿದ್ದರು. ಬಾಲಕಿ ಒಬ್ಬಳೇ ಮನೆಯಲ್ಲಿದ್ದು, ಈ ಸಂದರ್ಭ ಪಕ್ಕದ ಬಾಡಿಗೆ ಮನೆಯಲ್ಲಿ ವಾಸವಿದ್ದ ಆರೋಪಿ ಫಕೀರಪ್ಪ ಬಾಲಕಿ ಮನೆಗೆ ಅಂದು ಬೆಳಗ್ಗೆ 9 ರಿಂದ 9.15 ರ ಸಮಯದಲ್ಲಿ ನುಗ್ಗಿ ಲೈಂಗಿಕ ದೌರ್ಜನ್ಯವೆಸಗಿದ್ದ. ಬಾಲಕಿ ವಿರೋಧಿಸಿದಾಗ ಹಲ್ಲೆಗೈದು ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ, ಸ್ಥಳದಿಂದ ಪರಾರಿಯಾಗಿದ್ದ.
ಅಪ್ರಾಪ್ತ ಬಾಲಕಿಯ ಕೊಲೆಗೆ ಸಂಬಂಧಿಸಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ
ಕೆ.ಎಸ್.ಮಾನು ಅವರು, ಆರೋಪಿ ಮೇಲಿನ ಅಪರಾಧ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಅಪರಾಧಿಗೆ ಬಿಎನ್ಎಸ್ 103(1) ಕೊಲೆ ಪ್ರಕರಣಕ್ಕೆ ಮರಣದಂಡನೆ ಶಿಕ್ಷೆ, ಪೋಕ್ಸೊ 4(2)ರಡಿ ಪೋಕ್ಸೊ ಪ್ರಕರಣಕ್ಕೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 4 ತಿಂಗಳು ಸಾದಾ ಶಿಕ್ಷೆ, ಬಿಎನ್ಎಸ್ 332 (ಎ) ಅಕ್ರಮ ಪ್ರವೇಶ ಅಪರಾಧದಡಿ ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 4 ತಿಂಗಳು ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
5 ಲಕ್ಷ ರೂ. ಪರಿಹಾರ ನೀಡಲು ಅದೇಶ:
ಬಾಲಕಿಯ ತಂದೆ-ತಾಯಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ. ಪಣಂಬೂರು ಠಾಣಾ ಇನ್ಸ್ಪೆಕ್ಟರ್ ಮೊಹಮ್ಮದ್ ಸಲೀಂ ಅಬ್ಬಾಸ್ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಶೇಷ ಸರಕಾರಿ ಅಭಿಯೋಜಕಿ ಸಹನಾ ದೇವಿ ಬೋಳೂರು ಸರಕಾರದ ಪರವಾಗಿ ವಾದಿಸಿದ್ದರು.
ಕಠಿಣ ಶಿಕ್ಷೆಗೆ ನೆರವಾದ ಪ್ರತ್ಯಕ್ಷ ಸಾಕ್ಷಿ :
ಅಪ್ರಾಪ್ತ ಬಾಲಕಿ ಕೊಲೆಗೆ ಮುನ್ನ ದಿನ ನೆರೆಮನೆಯ ಮಹಿಳೆಯೊಬ್ಬರ ಫೋನ್ ಮೂಲಕ ತನ್ನ ತಾಯಿಗೆ ಕರೆ ಮಾಡಿ ಜ್ವರವಿರುವ ಬಗ್ಗೆ ಹೇಳಿದ್ದಳು. ಈ ಕಾರಣದಿಂದ ಮರುದಿನ ಅದೇ ಮಹಿಳೆಯ ಫೋನ್ಗೆ ಕರೆ ಮಾಡಿ ಬಾಲಕಿ ಜತೆ ಮಾತನಾಡಲು ಫೋನ್ ಕೊಡುವಂತೆ ಹೇಳಿದ್ದರು.
ಈ ಸಂದರ್ಭದಲ್ಲಿ ಪಕ್ಕದ ಮನೆಯ ಮಹಿಳೆ ಮತ್ತೊಬ್ಬ ಮಹಿಳೆ ಜತೆ ಬಾಲಕಿ ಇರುವ ಮನೆಗೆ ಬಂದಾಗ ಆರೋಪಿ ಫಕೀರಪ್ಪ ಬಾಲಕಿನ ಮೇಲೆ ಕುಳಿತು ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿದ್ದ. ಇದನ್ನು ನೋಡಿ ಮಹಿಳೆಯರು ಆತಂಕಿತರಾಗಿದ್ದು, ಕೂಡಲೇ ಆರೋಪಿ ಈ ವಿಷಯ ಯಾರಿಗೂ ಹೇಳದಂತೆ ಮಹಿಳೆಯರಿಗೆ ಬೆದರಿಸಿ ಅಲ್ಲಿಂದ ತೆರಳಿದ್ದನು. ಅಲ್ಲಿಂದ ತನ್ನ ಬಾಡಿಗೆ ಮನೆಗೆ ಹೋಗಿ ಬಟ್ಟೆ ಬದಲಾಯಿಸಿ ಪರಾರಿಯಾಗಿದ್ದ. ಕೋರ್ಟ್ ವಿಚಾರಣೆ ವೇಳೆ ಇಬ್ಬರು ಮಹಿಳೆಯರು ಘಟನೆಯ ಪ್ರತ್ಯಕ್ಷ ಸಾಕ್ಷಿ ಹೇಳಿದರೆ, ಉಳಿದ 16 ಮಂದಿ ಮಂದಿ ಸಾಂದರ್ಭಿಕ ಸಾಕ್ಷಿಗಳನ್ನು ಹೇಳಿದ್ದರು. 38 ದಾಖಲೆಗಳನ್ನು ಕೋರ್ಟ್ಗೆ ಹಾಜರುಪಡಿಸಲಾಗಿತ್ತು.
ಪ್ರತ್ಯಕ್ಷ ಸಾಕ್ಷಿ, ಸಾಂದರ್ಭಿಕ ಸಾಕ್ಷಿ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ವರದಿ ಕಠಿಣ ಶಿಕ್ಷೆಗೆ ವಿಧಿಸಲು ಸಾಧ್ಯವಾಯಿತು. ಕಳೆದ ಒಂದು ವರ್ಷದಿಂದ ಈತ ಜೈಲಿನಲ್ಲಿ ಇದ್ದ.
ಕೊನೆಗೂ ನ್ಯಾಯಾಲಯ ಇದೀಗ ಆರೋಪಿಗೆ ಶಿಕ್ಷೆ ವಿಧಿಸಿ ಆದೇಶಿಸಿದೆ.