ಹಾಸನ: ಗಣೇಶ ಮೂರ್ತಿ ಮೆರವಣಿಗೆ ವೇಳೆ ಜನಸಂದಣಿಯತ್ತ ಟ್ರಕ್ ನುಗ್ಗಿದ ಕಾರಣ 9 ಮಂದಿ ಮೃತಪಟ್ಟ ದಾರುಣ ಘಟನೆ ಹಾಸನದ ಮೊಸಳೆಹೊಸಳ್ಳಿ ಬಳಿ ಭೀಕರ ಅಪಘಾತ ನಡೆದಿದೆ. ನಡೆದಿದೆ ಎಂದು ವರದಿಯಾಗಿದೆ.
ಹಾಸನ ತಾಲೂಕಿನ ಹೊಳೇನರಸೀಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮೊಸಳೆ ಹೊಸಳ್ಳಿ ಬಳಿ ದುರಂತ ಸಂಭವಿಸಿದೆ. ಗಣಪತಿ ಮೂರ್ತಿ ವಿಸರ್ಜನೆಗಾಗಿ ಮೆರವಣಿಗೆ ಮೂಲಕ ಸಾಗುತ್ತಿದ್ದಾಗ ವೇಗವಾಗಿ ಬಂದ ಕ್ಯಾಂಟರ್ ಜನರ ಗುಂಪಿನ ಮೇಲೆ ನುಗ್ಗಿದ್ದರಿಂದ ಎಂಟು ಮಂದಿ ಸಾವಿಗೀಡಾಗಿದ್ದಾರೆ. ಅಪಘಾತದಲ್ಲಿ 20ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಮೊಸಳೆಹೊಸಳ್ಳಿ ರಾಷ್ಟ್ರೀಯ ಹೆದ್ದಾರಿ 373ರ ಚತುಷ್ಪಥ ರಸ್ತೆಯ ಒಂದು ಬದಿಯಲ್ಲಿ ಗಣೇಶ ಮೂರ್ತಿ ಮೆರವಣಿಗೆಗೆ ಅವಕಾಶ ನೀಡಲಾಗಿತ್ತು. ಈ ವೇಳೆ ವೇಗವಾಗಿ ಬಂದ ಮಹಾರಾಷ್ಟ್ರ ಮೂಲದ ಕ್ಯಾಂಟರ್ ಮೊದಲಿಗೆ ಬೈಕ್ ಗೆ ಡಿಕ್ಕಿ ಹೊಡೆದು ನಂತರ ಮೆರವಣಿಗೆಯಲ್ಲಿ ಸಾಗುತ್ತಿದ್ದ ಜನರ ಮೇಲೆ ನುಗ್ಗಿದೆ. ಎದುರಿಗೆ ಬಂದ ಬೈಕ್ ಸವಾರನನನ್ನು ತಪ್ಪಿಸಲು ಹೋಗಿ ಕ್ಯಾಂಟರ್ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ನುಗ್ಗಿದೆ ಎನ್ನಲಾಗಿದೆ.
ರಸ್ತೆಯ ಒಂದು ಬದಿಯಿಂದ ಏಕಾಏಕಿ ಡಿವೈಡರ್ ಗುದ್ದಿದ ಟ್ರಕ್ ಯಮನಂತೆ ಸಾವಿರಾರು ಜನರಿದ್ದ ಮೆರವಣಿಗೆಗೆ ನುಗ್ಗಿದೆ. ಇದರಿಂದಾಗಿ ಘನಘೋರ ದುರಂತ ಸಂಭವಿಸಿದೆ. ಸ್ಥಳದಲ್ಲೇ ಐವರು ಸಾವಿಗೀಡಾಗಿದ್ದಾರೆ ಎನ್ನಲಾಗಿದ್ದು, ಮೂವರು ಚಿಕಿತ್ಸೆ ಫಲಕಾರಿಯಾಗದೆ ಮೂವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಮೊಸಳೆಹೊಸಳ್ಳಿ ಗ್ರಾಮದಲ್ಲಿ ಜನರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಸ್ಥಳೀಯ ಗ್ರಾಮಸ್ಥರು ಕೂಡ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.