ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾದ ಸಾಹಸ ಸಿಂಹ ಖ್ಯಾತಿಯ ವಿಷ್ಣುವರ್ಧನ್ ಹಾಗೂ ಬಿ. ಸರೋಜಾದೇವಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗುವುದು.
ಈ ಬಗ್ಗೆ ಕಾನೂನು ಸಚಿವ ಎಚ್ .ಕೆ. ಪಾಟೀಲ ಮಾಹಿತಿ ನೀಡಿದ್ದಾರೆ.
ಗುರುವಾರ ಸಚಿವ ಸಂಪುಟ ಸಭೆ ಬಳಿಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯವನ್ನು ತಿಳಿಸಿದರು.
ವಿಷ್ಣುವರ್ಧನ್ ಸ್ಮಾರಕಕ್ಕೆ ಜಮೀನು ನೀಡಬೇಕು ಎಂದು ಅವರ ಅಭಿಮಾನಿಗಳು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದರು. ಆದರೆ ಈ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದು ಅವರು ವಿವರಿಸಿದರು.
ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಕನ್ನಡ ಚಲನಚಿತ್ರ ರಂಗದ ಹಿರಿಯ ನಟಿಯರಾದ ಜಯಮಾಲಾ, ಶ್ರತಿ ಮತ್ತು ಮಾಳವಿಕಾ ಅವಿನಾಶ್ ಅವರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು.
ರಾಷ್ಟ್ರಕವಿ ಕುವೆಂಪು ಅವರಿಗೆ ‘ಭಾರತ ರತ್ನ’ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಭೆಯಲ್ಲಿ ತೀರ್ಮಾನಿಸಿದೆ ಎಂದು ಅವರು ಹೇಳಿದರು.
ಕರ್ನಾಟಕ ಪ್ರದಾನ ಮಾಡುವ ಸಮಾರಂಭದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ನೀಡಬೇಕು ಎನ್ನುವುದು ಅಭಿಮಾನಿಗಳ ಕನಸು. ಈ ಬಗ್ಗೆ ಅಭಿಮಾನಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇತ್ತೀಚಿಗಷ್ಟೇ ಭಾರತಿ ವಿಷ್ಣುವರ್ಧನ್ ಮತ್ತು ಅನಿರುದ್ಧ ಅವರು ಕರ್ನಾಟಕ ರತ್ನ ನೀಡುವ ಬಗ್ಗೆ ಮನವಿ ಸಲ್ಲಿಸಿದ್ದರು.
ಇದೇ ವರ್ಷದ ಜುಲೈ 14ರಂದು 87ರ ಹರೆಯದಲ್ಲಿ ಸರೋಜಾದೇವಿ ನಿಧನರಾಗಿದ್ದರು. ವಿಷ್ಣುವರ್ಧನ್ 2009ರ ಡಿಸೆಂಬರ್ 30ರಂದು ತಮ್ಮ 59ನೇ ವಯಸ್ಸಿನಲ್ಲಿ ನಿಧನರಾಗಿದ್ದರು.