ಬೆಳಗಾವಿ: ತಮ್ಮ ಕಾದಂಬರಿಗಳ ಮೂಲಕ ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿದವರು ಶ್ರೇಷ್ಠ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು. ಅವರೊಬ್ಬ ಆದರ್ಶ ಬರೆಹಗಾರರಾಗಿದ್ದಂತೆ ಆದರ್ಶ ಶಿಕ್ಷಕರೂ ಆಗಿದ್ದರು” ಎಂದು ಹಿರಿಯ ಸಾಹಿತಿ , ವಿಮರ್ಶಕ ಡಾ. ವೈ. ಎಂ. ಯಾಕೊಳ್ಳಿ ಹೇಳಿದರು.
ಮಹಾಂತೇಶನಗರದ ರಹವಾಸಿಗಳ ಸಂಘದ ಬಿ. ಎಡ್. ಕಾಲೇಜಿನಲ್ಲಿ ಕೃಷ್ಣಮೂರ್ತಿ ಪುರಾಣಿಕ ಪ್ರತಿಷ್ಠಾನ ಮತ್ತು ನಿವೇದಾರ್ಪಣ ಅಕಾಡೆಮಿಯವರ ಸಹಯೋಗದೊಂದಿಗೆ ಬುಧವಾರ ನಡೆದ ಪುರಾಣಿಕರ 114 ನೇ ಜನ್ಮ ದಿನದ ಸಂಸ್ಮರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು , ಪುರಾಣಿಕರು 80 ಕಾದಂಬರಿ ಸಹಿತ ಒಟ್ಟು 115 ಕೃತಿಗಳನ್ನು ರಚಿಸಿದರು. ಕನ್ನಡದಲ್ಲಿ ಕಾದಂಬರಿ ಆಧಾರಿತ ಮೊದಲ ಸಿನೆಮಾ ಆದದ್ದು ಪುರಾಣಿಕರ ರಚನೆಯೇ ಮತ್ತು ಸುಮಾರು ಹದಿಮೂರು ಕಾದಂಬರಿಗಳು ಚಲನಚಿತ್ರವಾದದ್ದೊಂದು ದಾಖಲೆ. ಮುಖ್ಯವಾಗಿ ಅವರ ಕಾದಂಬರಿಗಳು ಸಮಾಜ ಸುಧಾರಣೆಗೆ ಪ್ರೇರಣೆ ನೀಡುವಂತಿದ್ದವು. ಅವನ್ನು ಈಗಿನ ಪೀಳಿಗೆಯವರು ಓದುವಂತಾಗಬೇಕು” ಎಂದರು.
ಪುರಾಣಿಕ ಟ್ರಸ್ಟ್ ಕಾರ್ಯದರ್ಶಿ ಆನಂದ ಪುರಾಣಿಕ ಸ್ವಾಗತಿಸಿದರು. ಟ್ರಸ್ಟ್ ಅಧ್ಯಕ್ಷ ಎಲ್. ಎಸ್. ಶಾಸ್ತ್ರಿ ಪ್ರಾಸ್ರಾವಿಕ ನುಡಿಗಳನ್ನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಎಡ್ ಕಾಲೇಜು ಪ್ರಾಚಾರ್ಯರೂ, ಬರೆಹಗಾರರೂ ಆದ ಡಾ. ನಿರ್ಮಲಾ ಬಟ್ಟಲ ಅವರು ಪುರಾಣಿಕರ ಕಾದಂಬರಿಗಳು ಸಮಾಜದೆದುರು ಉನ್ನತ ಆದರ್ಶವನ್ನು ಇಡುವುದರೊಂದಿಗೆ ಕನ್ನಡದಲ್ಲಿ ಅಪಾರ ಸಂಖ್ಯೆಯ ಓದುಗರನ್ನು ಸೃಷ್ಟಿಸಿದ ಶ್ರೇಯಸ್ಸೂ ಅವರಿಗೆ ಸಲ್ಲುತ್ತದೆಂದರು.
ಡಾ. ಯಾಕೊಳ್ಳಿ ಮತ್ತು ಡಾ.ನಿರ್ಮಲಾ ಬಟ್ಟಲ ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಚಂದ್ರಶೇಖರ ನವಲಗುಂದ ವಂದಿಸಿದರು. ಪ್ರೊ. ಮಂಜುನಾಥ ಕಲಾಲ ನಿರೂಪಿಸಿದರು. ಗಾಯಕ ಡಾ. ಶ್ರೀರಂಗ ಜೋಶಿ ಅವರು ಪುರಾಣಿಕರ ಕವನವನ್ನು ಹಾಡಿದರು.
ವಿದ್ಯಾರ್ಥಿಗಳಲ್ಲದೆ ಸಾಹಿತಿಗಳಾದ ಡಾ. ರಾಮಕೃಷ್ಣ ಮರಾಠೆ, ಡಾ. ಹೇಮಾ ಸೊನೊಳ್ಳಿ, ಜ್ಯೋತಿ ಬದಾಮಿ, ಬಸವರಾಜ ಗಾರ್ಗಿ, ರಮೇಶ ಜಂಗಲ್, ರಾಮನಾಥ ಬನಶಂಕರಿ ಮೊದಲಾದವರು ಉಪಸ್ಥಿತರಿದ್ದರು.