ಬೆಳಗಾವಿ : ಬುಧವಾರದಂದು ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಆಚರಿಸಲಾಯಿತು.
ಮಹಾವಿದ್ಯಾಲಯದ ಪ್ರಾಚಾರ್ಯೆ , ಆಪ್ತ ಸಮಾಲೋಚಕಿ ಡಾ.ನಿರ್ಮಲಾ ಜಿ. ಬಟ್ಟಲ ಮಾತನಾಡಿ,
ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಘೋಷ ವ್ಯಾಖ್ಯೆಯಾದ “ನೀನು ಆತ್ಮಹತ್ಯೆಯನ್ನು ತಡೆಗಟ್ಟಬಹುದು” ಎಂಬುದನ್ನು ಮನೋವೈಜ್ಞಾನಿಕವಾಗಿ ವಿಶ್ಲೇಷಿಸಿಸುತ್ತಾ ವ್ಯಕ್ತಿಯ ಮೇಲೆ ಉಂಟಾಗುವ ಅತಿಯಾದ ಒತ್ತಡಗಳು, ನಿರೀಕ್ಷೆಗಳು , ಸಾಮಾನ್ಯ ಮನಸ್ಥಿತಿಯಿಂದ ವ್ಯತಿರಿಕ್ತವಾಗಿ ವರ್ತಿಸುವುದು (ಬೈ ಪೋಲಾರ್ ಡಿಸಾರ್ಡರ್ ), ಹಾಗೂ ಅನಾವಶ್ಯಕವಾಗಿ ಸೃಷ್ಟಿಸುಕೊಳ್ಳುವ ಧಾವಂತಗಳು, ಖಿನ್ನತೆ, ಋಣಾತ್ಮಕ ಚಿಂತನೆ, ಅನಾರೋಗ್ಯಕರವಾದ ಜೀವನ ಶೈಲಿಯೂ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮೃತ್ಯು ಸಹಜ ಲಾಲಸಿ ಪ್ರವೃತ್ತಿ ದ್ವಿಗುಣಗೊಳ್ಳುತ್ತಿದೆ. ಈ ದುಃಸ್ಥಿತಿಯನ್ನು ನಿಯಂತ್ರಿಸುವ ಕ್ರಮಗಳೆಂದರೆ ಮನಸ್ಸನ್ನು ಖುಶಿಯಾಗಿಸಿಟ್ಟುಕೊಳ್ಳುವುದು, ಜನರ ಜೊತೆ ಬೆರೆಯುವುದು, ಪುಸ್ತಕಗಳನ್ನು ಓದುವುದು, ಮನಸ್ಸಿನ ವಿಶ್ವಾಸವನ್ನು ಬಲಪಡಿಸಿಕೊಳ್ಳುವುದರ ಮೂಲಕ ಆತ್ಮಹತ್ಯೆಯನ್ನು ಯೋಚನೆಯಿಂದ ಹೊರಬರಬಹುದೆಂದು ಹೇಳುವುದರ ಜೊತೆಗೆ ಮನೋವಿಜ್ಞಾನಿ ಸಿಗ್ಮಂಡ ಫ್ರಾಯ್ಡ್ ರವರ ಮನೋವಿಶ್ಲೇಷಣಾತ್ಮಕ ಸಿದ್ಧಾಂತವನ್ನು ವಿವರಿಸಿ ಮನೋರಂಗದಲ್ಲಿ ನಡೆಯುವ ಧನಾತ್ಮಕ,ಋಣಾತ್ಮಕ ಪ್ರಕ್ರಿಯೆಯನ್ನು ಸಮಗ್ರವಾಗಿ ವಿಶ್ಲೇಷಣೆ ಮಾಡುತ್ತಾ ಖಿನ್ನತೆಯ ಕಾರಣ ಹಾಗೂ ಪರಿಣಾಮಗಳನ್ನು ಚರ್ಚಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಶಾಲಾ ಮಕ್ಕಳಲ್ಲಿ ಸಹ ಆತ್ಮಹತ್ಯೆ ಮನಸ್ಥಿತಿ ಪ್ರಬಲಗೊಳ್ಳುತ್ತಿರುವುದು ಕಳವಳಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
“ಹಲವರು ಹಾಗೇ….. ಕೆಲವರು ಹೀಗೆ” ಎಂಬ ಸ್ಟರಚಿತ ಕವನ ವಾಚಿಸಿದರು. ಭಾವೀ ಶಿಕ್ಷಕರ ಮೇಲೆ ಇರುವ ಹೊಣೆಗಾರಿಕೆಗಳನ್ನು ವಿವರಿಸಿದರು. ಉಚಿತ ಆಪ್ತ ಸಮಾಲೋಚನೆ ಮಾಡುವ ಟೆಲಿ ಮನಸ್ಸು 0800585858 ಬಗ್ಗೆ ತಿಳಿಸಿದರು. ಶಿಕ್ಷಕರಿಗೆ ಈ ಕುರಿತು ಜ್ಞಾನ ಅತ್ಯವಶ್ಯವೆಂದು ಹೇಳಿದರು.
ಡಾ.ಎಸ್.ವಿ.ವಾಲಿಶೆಟ್ಟಿ ಮಾತನಾಡಿ, ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಹಿನ್ನೆಲೆ, ಆತ್ಮಹತ್ಯೆಗೆ ಪ್ರೇರೆಪಿಸುವ ಅಂಶಗಳಾದ ಜಿಗುಪ್ಸೆ, ಸೋಲು , ಸಾಲ, ಅಪಾಯಕಾರಿ ಪೈಪೋಟಿ ಹಾಗೂ ಇನ್ನಿತರ ಕ್ಷುಲ್ಲಕ ಕಾರಣಗಳಿಂದ ಜನರು ಭಗವಂತ ನೀಡಿದ ಶರೀರವನ್ನು ನಾಶಪಡಿಸಿಕೊಳ್ಳುತ್ತಿದ್ದಾರೆ. ದೇವರ ಕೊಟ್ಟ ಅಮೂಲ್ಯವಾದ ಜೀವನವನ್ನು ಈ ರೀತಿ ಇಲ್ಲವಾಗಿಸಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಬುದ್ಧಿಜೀವಿಯಾದ ಮಾನವ ಭಾವನಾತ್ಮಕವಾಗಿಯೂ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಬರುವ ಸಮಸ್ಯೆಗಳನ್ನು ಆತ್ಮಸ್ಥೈರ್ಯದಿಂದ ಪರಿಹರಿಸಿಕೊಳ್ಳುವ ಕಲೆ ಕರಗತ ಮಾಡಿಕೊಳ್ಳಬೇಕು. ಶಿಕ್ಷಕರ ಮೇಲೆ ಈ ಜವಾಬ್ದಾರಿ ಗುರುತರವಾಗಿದೆ. ಭಾವೀ ಶಿಕ್ಷಕರು ಆತ್ಮಹತ್ಯೆ ತಡೆಗಟ್ಟುವ ಕುರಿತು ಮನೋವೈಜ್ಞಾನಿಕವಾಗಿ ಅಧ್ಯಯನ ಮಾಡಿ ತಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕೆಂದರು.
ವಿದ್ಯಾರ್ಥಿ ಪರಿಷತ್ತಿನ ಕಾರ್ಯದರ್ಶಿ ಪ್ರೊ. ಸುನಿಲ ಪಾಣಿ , ಡಾ. ಗೀತಾ ದಯಣ್ಣವರ, ಪ್ರೊ.ಮಲ್ಲಿಕಾರ್ಜುನ ಜಮಖಂಡಿ ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿ ಮುಸ್ಕಾನ ಲಾಡನ್ನ ವರ ತಂಡ ಪ್ರಾರ್ಥಿಸಿದರು. ಪ್ರೊ.ಮಂಜುನಾಥ ಕಲಾಲ ಸ್ವಾಗತಿಸಿದರು, ಪ್ರೊ.ಸೋನಲ ಚಿನಿವಾಲ ನಿರೂಪಿಸಿದರು.