ಬೆಳಗಾವಿ: ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರ ನೇಮಕದಲ್ಲಿ ಒತ್ತಡ ಅಥವಾ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಂಗಳವಾರ ಇಲಾಖೆಯ ವಿಭಾಗಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಮೆರಿಟ್ ಆಧಾರದ ಮೇಲೆ ಅಂಗನವಾಡಿ ನೇಮಕ ನಡೆಯುತ್ತದೆ. ಇದರಲ್ಲಿ ನಾನು ಎಂದೂ ಹಸ್ತಕ್ಷೇಪ ಮಾಡುವುದಿಲ್ಲ. ಜೊತೆಗೆ ಯಾರ ಒತ್ತಡಕ್ಕೂ ಒಳಗಾಗುವುದು ಬೇಡ. ಅಲ್ಲದೆ ಒಂದು ರೂಪಾಯಿ ಕೂಡ ಭ್ರಷ್ಟಾಚಾರ ನಡೆಯುವುದನ್ನು ಸಹಿಸುವುದಿಲ್ಲ. ಹಾಗೇನಾದರೂ ಆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಂಪೂರ್ಣ ಪಾರದರ್ಶಕವಾಗಿ ನೇಮಕಾತಿ ನಡೆಸಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಸೂಚಿಸಿದರು.
ಅಂಗನವಾಡಿಗಳು ಆರಂಭವಾಗಿ 50 ವರ್ಷವಾಗಿದೆ. ಇಲಾಖೆಗೆ ಇತಿಹಾಸವಿದೆ. ಈ ವರ್ಷ ಸುವರ್ಣ ಮಹೋತ್ಸವ ಆಚರಿಸಲು ತಯಾರಿ ನಡೆಸುತ್ತಿದ್ದೇವೆ. ಶೇ.80ರಷ್ಟು ಅಂಗನವಾಡಿಗಳು ಖಾಸಗಿ ನರ್ಸರಿಗಳಿಗಿಂತ ಚೆನ್ನಾಗಿ ನಡೆಯುತ್ತಿದೆ. ಮಕ್ಕಳಿಗೆ ಎಲ್ಲ ಸೌಲಭ್ಯ ಕೊಡುತ್ತಿದ್ದೇವೆ.
ಬೀದಿ ಬೀದಿಗಳಲ್ಲಿ ಹೋಗಿ. ಪ್ರಚಾರ ಮಾಡಿ. ಸಂಖ್ಯೆ ಕಡಿಮೆಯಾಗಲು ಬಿಡಬೇಡಿ. ಪಾಲಕರ ಮನವೊಲಿಸಿ. ಮಕ್ಕಳನ್ನು ಹೆಚ್ಚು ಆಕರ್ಷಿಸಿ ಎಂದು ಅಧಿಕಾರಿಗಳಿಗೆ ಕರೆ ನೀಡಿದರು.
ಅಂಗನವಾಡಿ ಕಟ್ಟಡಗಳ ಬಾಡಿಗೆ, ಮಕ್ಕಳಿಗೆ ಹಂಚುವ ಮೊಟ್ಟೆಗಳಿಗೆ ಅನುದಾನ ಕೊರತೆ ಇಲ್ಲ. ಇವುಗಳನ್ನು ವಿಳಂಬವಿಲ್ಲದೆ ಪಾವತಿಸಿ. ಪ್ರತಿ ತಿಂಗಳು ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಿ. ಇಲಾಖೆಯ ಕೆಲಸಗಳು ಸುಗಮವಾಗಿ ನಡೆಯಬೇಕು. ಅಗತ್ಯ ಸುಧಾರಣೆಯಾಗಬೇಕು. ಯಾವುದೇ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಸಚಿವರು ಹೇಳಿದರು.
ಸಕ್ಷಮ ಯೋಜನೆಯಲ್ಲಿ ವಿಶೇಷ ಪ್ರಯತ್ನ ಮಾಡಿ ರಾಜ್ಯಕ್ಕೆ 17,500 ಅಂಗನವಾಡಿ ತರಲಾಗಿದೆ. ದೊಡ್ಡ ರಾಜ್ಯಗಳಿಗೂ ಸಿಗದಷ್ಟು ನಮಗೆ ಸಿಕ್ಕಿದೆ. ಕೇಂದ್ರ ಸರಕಾರ ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಬೇರೆ ರಾಜ್ಯಗಳಿಗೆ ಮಾದರಿಯಾಗಿ ಉದಾಹರಿಸುತ್ತಿದೆ. ಹಾಗಾಗಿ ಅದಕ್ಕೆ ತಕ್ಕಂತೆ ಕೆಲಸ ಮಾಡಿ ಎಂದು ಸಚಿವರು ಹೇಳಿದರು.
ಸಭೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ಜಿಲ್ಲಾಧಿಕಾರಿ ಮೊಹಮದ್ ರೋಷನ್, ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಡೇದ್, ಆಯುಕ್ತ ಗುಲಾಬರಾವ್ ಭೂಷಣ ಬೋರಸೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಮಹೇಶ್ ಬಾಬು, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ರಾಘವೇಂದ್ರ, ಇಲಾಖೆಯ ಜಂಟಿ ನಿರ್ದೇಶಕ ಹಾಗೂ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್, ಡಿಎಸ್ಪಿ ನಿರಂಜನ್ ರಾಜೇ ಅರಸ್, ಇಲಾಖೆಯ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು, ಜಿಲ್ಲಾ ನಿರೂಪಣಾಧಿಕಾರಿಗಳು ಹಾಗೂ ಶಿಶು ಯೋಜನಾಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ಅಪೌಷ್ಠಿಕ ಮಕ್ಕಳ ನಿರ್ವಹಣೆಗೆ “ಚಿಗುರುʼ ಯೋಜನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ
ಸುವರ್ಣ ಸೌಧದಲ್ಲಿ ಚಾಲನೆ ನೀಡಿದ ಸಚಿವರು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಿಸಲು ಸಮುದಾಯ ಆಧಾರಿತ ತೀವ್ರ ಅಪೌಷ್ಠಿಕ ಮಕ್ಕಳ ನಿರ್ವಹಣೆಯ ಯೋಜನೆ ʼಚಿಗುರುʼ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ ನೀಡಿದರು.
ಮಕ್ಕಳ ಅಪೌಷ್ಟಿಕತೆ ನಿವಾರಣೆ ಇಲಾಖೆಯ ಅತ್ಯಂತ ಆದ್ಯತೆಯ ಯೋಜನೆಗಳಲ್ಲೊಂದಾಗಿದ್ದು, ಈ ಮೂಲಕ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಯೋಜನೆಯ ವಿವರ:
ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಿಸಲು ಸಮುದಾಯ ಆಧಾರಿತ ತೀವ್ರ ಅಪೌಷ್ಟಿಕ ಮಕ್ಕಳ ನಿರ್ವಹಣೆ [Community Based Management of acute malnourished (C-MAM)] ಈ ಯೋಜನೆಯ ಭಾಗವಾಗಿದೆ.
NFHS-5 ಸಮೀಕ್ಷೆಯ ಪ್ರಕಾರ ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಿಸಲು ಸಮುದಾಯ ಆಧಾರಿತ ತೀವ್ರ ಅಪೌಷ್ಟಿಕ ಮಕ್ಕಳ ನಿರ್ವಹಣೆ ಯೋಜನೆಯನ್ನು ಅನುಷ್ಟಾನಗೊಳಿಸಲು UNICEF ಸಂಸ್ಥೆಯ ಸಹಯೋಗದೊಂದಿಗೆ C-MAM ಬಗ್ಗೆ technical protocol ಅನ್ನು ಕೇಂದ್ರ ಸರ್ಕಾರದಿಂದ ಒದಗಿಸಲಾದ document ಮಾದರಿಯಲ್ಲಿ ಸಿದ್ಧಪಡಿಸಲಾಗಿದೆ.
ಯೋಜನೆಯನ್ನು ಪ್ರಸ್ತುತ ಕರ್ನಾಟಕ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿನ high burdened in terms of wasting and stunting ಎಂದು ಗುರುತಿಸಲಾಗಿರುವ ಬಳ್ಳಾರಿ, ಬೀದರ್, ಕಲಬುರಗಿ, ಯಾದಗಿರಿ, ಬೆಳಗಾವಿ, ರಾಯಚೂರು, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಯೋಜನೆಯಡಿ, ವೈದ್ಯಕೀಯ ಸಮಸ್ಯೆಗಳಿಲ್ಲದ ತೀವ್ರ ಮತ್ತು ಸಾಧಾರಣ ಅಪೌಷ್ಟಿಕ ಮಕ್ಕಳಿಗೆ ವೈದ್ಯಕೀಯ ಪೂರಕಾಂಶಗಳು ಹಾಗೂ ಹೆಚ್ಚು ಪೋಷಕಾಂಶಯುಕ್ತ ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ.
ಪೋಷಣೆ ತಾಯಿ ಮಾತ್ರವಲ್ಲ, ಇಡೀ ಕುಟುಂಬದ ಜವಾಬ್ದಾರಿ ಎಂಬ ಪರಿಕಲ್ಪನೆಯಡಿ ತಾಯಂದಿರು ಮತ್ತು ಸಮುದಾಯದ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಮನೆಮನೆಗೆ ಭೇಟಿ ಮೂಲಕ ಆರು ತಿಂಗಳುಗಳ ಕಾಲ ಸಮೀಪವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಸದರಿ ಯೋಜನೆಯಡಿ ಯೂನಿಸೆಫ್ ಕೂಡ ಸಹಭಾಗಿಯಾಗಿದ್ದು, ಪ್ರಾಥಮಿಕ ಹಂತದ ತರಬೇತಿಗಳಿಗೆ ಸಂಬಂಧಿಸಿದಂತೆ ಯೂನಿಸೆಫ್ ವತಿಯಿಂದ 8 ಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತೆ ಮತ್ತು ಮೇಲ್ವಿಚಾರಕಿಯರಿಗೆ C-MAM Intervention ಅಡಿಯಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಒದಗಿಸಲು ತರಬೇತಿಯನ್ನು ವಿನ್ಯಾಸಗೊಳಿಸಲಾಗಿರುತ್ತದೆ
ಈ ವೇಳೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಮಹೇಶ್ ಬಾಬು, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ನಿರ್ದೇಶಕರಾದ ರಾಘವೇಂದ್ರ, ಇಲಾಖೆ ಜಂಟಿ ನಿರ್ದೇಶಕರು ಹಾಗೂ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್, ಯುನಿಸೆಫ್ನ ಕರ್ನಾಟಕ ಪ್ರತಿನಿಧಿ ಖ್ಯಾತಿ ತಿವಾರಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಕರ್ನಾಟಕ ಸರ್ಕಾರದ ಮಾಡೆಲ್ ಇಡೀ ದೇಶಕ್ಕೆ ಮಾದರಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ನವೆಂಬರ್ 19ಕ್ಕೆ ಅಕ್ಕಾ ಪಡೆಗೆ ಚಾಲನೆ, ಸರ್ಕಾರಿ ಮಾಂಟೆಸ್ಸರಿ ಆರಂಭ
ಬೆಳಗಾವಿ ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಬಳಿಕ ಸಚಿವರ ಹೇಳಿಕೆ
ಬೆಳಗಾವಿ: ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಿರುವ ಕರ್ನಾಟಕ ಸರ್ಕಾರದ ಮಾಡೆಲ್ (ಮಾದರಿ) ಅನ್ನು ಕೇಂದ್ರ ಸರ್ಕಾರವೂ ಅನುಸರಿಸುತ್ತಿದ್ದು, ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೆಲಸಗಳ ಕುರಿತು ಕೇಂದ್ರ ಸರ್ಕಾರ ಶ್ಲಾಘನೆ ವ್ಯಕ್ತಪಡಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಸುವರ್ಣ ಸೌಧದಲ್ಲಿ ಬೆಳಗಾವಿ ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಇಲಾಖೆ ಸುಧಾರಣೆ ಬಗ್ಗೆ ಚರ್ಚೆ ನಡೆಸಲಾಯಿತು. ನಮ್ಮದು ಜೀವನಮಟ್ಟ ಸುಧಾರಣೆ ಮಾಡುವ ಇಲಾಖೆಯಾಗಿದೆ ಎಂದರು.
ಮಕ್ಕಳ ವಿದ್ಯಾಭ್ಯಾಸ, ಪೌಷ್ಠಿಕಾಂಶ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ವಿವಿಧ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಜೊತೆಗೆ ನಮ್ಮ ಸರ್ಕಾರ ಮಹಾತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯೂ ಫಲಾನುಭವಿಗಳಿಗೆ ತಲುಪುತ್ತಿರುವ ಬಗ್ಗೆ, ಸಾಮಾಜಿಕ ಪೀಡುಗಾಗಿರುವ ಬಾಲ್ಯ ವಿವಾಹ ನಿರ್ಮೂಲನೆ, ಪೋಕ್ಸೋ ಪ್ರಕರಣಗಳು ಸೇರಿದಂತೆ ವಿಕಲಚೇತನರಿಗೆ ಸಂಬಂಧಪಟ್ಟ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಸಚಿವರು ವಿವರಿಸಿದರು.
ನವೆಂಬರ್ 19ಕ್ಕೆ ಅಕ್ಕಾ ಪಡೆಗೆ ಚಾಲನೆ
ಕರ್ನಾಟಕದಲ್ಲಿ ಅಂಗನವಾಡಿ ಕೇಂದ್ರಗಳು ಆರಂಭಗೊಂಡು ಮುಂದಿನ ತಿಂಗಳಿಗೆ 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನವೆಂಬರ್ 19ರಂದು ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ನವೆಂಬರ್ 19ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಂದೇ ಅಂಗನವಾಡಿ ಸುವರ್ಣ ಮಹೋತ್ಸವ ಸಮಾರಂಭ ನಡೆಸಲು ಉದ್ದೇಶಿಸಿದ್ದು, ಅಂದೇ ಅಕ್ಕಾ ಪಡೆಗೆ ಚಾಲನೆ ನೀಡಲಾಗುವುದು. ಪ್ರಾಯೋಗಿಕವಾಗಿ ಮೈಸೂರು, ಉಡುಪಿ, ಬೆಳಗಾವಿಯಲ್ಲಿ ಅಕ್ಕಾಪಡೆ ಜಾರಿಗೆ ಬರಲಿದೆ ಎಂದು ಸಚಿವರು ವಿವರಿಸಿದರು.
ಈಗಾಗಲೇ 200 ಅಂಗನವಾಡಿ ಕೇಂದ್ರಗಳಲ್ಲಿ ಪ್ರಾಯೋಗಿಕವಾಗಿ ಸರ್ಕಾರಿ ಮಾಂಟೆಸ್ಸರಿ ತರಗತಿಗಳು ಆರಂಭಗೊಂಡಿದ್ದು, ಸದ್ಯ ಮೊದಲ ಹಂತದಲ್ಲಿ ಐದು ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಆರಂಭಗೊಳ್ಳಲಿವೆ. ಬಳಿಕ ಹಂತ ಹಂತವಾಗಿ ವಿಸ್ತರಿಸಲಾಗುವುದು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಅಕ್ಕಾ ಪಡೆ ಕಾರ್ಯನಿರ್ವಹಿಸಲಿದೆ. ಎನ್ಸಿಸಿ ವಿದ್ಯಾರ್ಥಿಗಳು, ಮಹಿಳಾ ಪೇದೆಗಳು ಜನನಿಬೀಡ ಪ್ರದೇಶಗಳು ಹಾಗೂ ಮಹಿಳಾ ಕಾಲೇಜುಗಳ ಬಳಿ ಕಾರ್ಯನಿರ್ವಹಿಸಲಿವೆ. ಇದಕ್ಕಾಗಿ 109 ಸಹಾಯವಾಣಿ ಆರಂಭಿಸಲಾಗಿದೆ ಎಂದರು.
ದೇಶದಲ್ಲೇ ಪ್ರಥಮ ಬಾರಿಗೆ ದೇವದಾಸಿ ಸಮೀಕ್ಷೆ, ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗಳು ನಡೆಯುತ್ತಿದ್ದು, ಕಳೆದ ಮುಂಗಾರು ಅಧಿವೇಶನದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು (ತಿದ್ದುಪಡಿ) ಜಾರಿಗೆ ತರಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದರೂ ನಮ್ಮ ಇಲಾಖೆಗೆ ಹೆಚ್ಚು ಅನುದಾನವನ್ನು ತಂದಿರುವೆ. ನಮ್ಮ ಇಲಾಖೆಯ ಕಾರ್ಯವೈಖರಿಗೆ ಕೇಂದ್ರ ಸರ್ಕಾರವೇ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.