ಬಂಗಾಳ ಕೊಲ್ಲಿಯ ಪೂರ್ವ ಸಮುದ್ರ ವಿಸ್ತಾರದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ನೆಲೆಸಿದ್ದು, ಸರಿಸುಮಾರು 836 ದ್ವೀಪಗಳನ್ನು ಒಳಗೊಂಡಿರುವ ಒಂದು ಆಕರ್ಷಕ ದ್ವೀಪಸಮೂಹ. ಈ ದ್ವೀಪಗಳನ್ನು ಉತ್ತರ ಅಂಡಮಾನ್ ದ್ವೀಪಗಳು ಮತ್ತು ದಕ್ಷಿಣ ನಿಕೋಬಾರ್ ದ್ವೀಪಗಳಾಗಿ ವರ್ಗೀಕರಿಸಲಾಗಿದೆ. ಭೌಗೋಳಿಕವಾಗಿ ಎರಡನ್ನೂ ಪ್ರತ್ಯೇಕಿಸುವ 10-ಡಿಗ್ರಿ ವಿಸ್ತಾರವಾದ ಚಾನಲ್ ಇದೆ. ದಕ್ಷಿಣ ನಿಕೋಬಾರ್ ದ್ವೀಪಸಮೂಹದಲ್ಲಿ ಕಾರ್ ನಿಕೋಬಾರ್, ನ್ಯಾನ್ಕೌರಿ ಮತ್ತು ಗ್ರೇಟ್ ನಿಕೋಬಾರ್ ಪ್ರಮುಖ ದ್ವೀಪಗಳು. ದಕ್ಷಿಣದ ತುತ್ತತುದಿಯಲ್ಲಿರುವ ಗ್ರೇಟ್ ನಿಕೋಬಾರ್ ದ್ವೀಪ, ಈ ಸಮೂಹದ ಅತಿ ದೊಡ್ಡ ದ್ವೀಪ. ಪೂರ್ವದ ತುದಿಯಲ್ಲಿರುವ ರಂಗನಾಥ ಕೊಲ್ಲಿಯಿಂದ ಆರಂಭವಾಗಿ ದಕ್ಷಿಣಕ್ಕೆ ಗಲಾಥಿಯಾ ಕೊಲ್ಲಿಯವರೆಗೂ ಸುಮಾರು 910 ಚದರ ಕಿಲೋಮೀಟರ್ಗಳ ವಿಸ್ತೀರ್ಣಗಳ ಈ ಗ್ರೇಟ್ ನಿಕೋಬಾರ್ ಭೂಪ್ರದೇಶ ಹಲವಾರು ವಿಧದ ವೃಕ್ಷಸಂಕುಲ ಮತ್ತು ವನ್ಯಜೀವಿಗಳ ಆವಾಸಸ್ಥಾನವಾಗಿದೆ. ಭಾರತದ ದಕ್ಷಿಣದ ತುಟ್ಟತುದಿಯಾದ ‘ ಇಂದಿರಾ ಪಾಯಿಂಟ್’ ಸಹಾ ಈ ದ್ವೀಪದಲ್ಲಿದೆ. ಗ್ರೇಟ್ ನಿಕೋಬಾರ್ ದ್ವೀಪ ಒಂದು ವಿಸ್ತಾರವಾದ ಜೈವಿಕ ವೈವಿಧ್ಯತೆಯ ನೈಸರ್ಗಿಕ ಅಭಯಾರಣ್ಯ, ಇಲ್ಲಿ ಎರಡು ರಾಷ್ಟ್ರೀಯ ಉದ್ಯಾನವನಗಳಿವೆ. ಶೋಂಪೆನ್ ಮತ್ತು ನಿಕೋಬಾರಿ ಬುಡಕಟ್ಟುಗಳು ಜನಾಂಗೀಯರು ಇಲ್ಲಿನ ಮೂಲನಿವಾಸಿಗಳು. ದ್ವೀಪದ ಪಶ್ಚಿಮ ಕರಾವಳಿ ಪ್ರದೇಶದಲ್ಲಿ ವಾಸಿಸುವ ನಿಕೋಬಾರಿನ ಬುಡಕಟ್ಟು ಜನಾಂಗದ ಜನಸಂಖ್ಯೆ 1094 ಇದ್ದರೆ, ಪೂರ್ವ ಕರಾವಳಿಯಲ್ಲಿರುವ ಶೋಂಪೇನ್ ಜನಾಂಗದವರು ಕೇವಲ 237 ಜನ ಮಾತ್ರ. ಹಲವಾರು ಮಾಜಿ ಸೈನಿಕರು ಮತ್ತು ಭಾರತದ ಇತರೆ ಪ್ರದೇಶಗಳಿಂದ ಇಲ್ಲಿಗೆ ಬಂದು ಇಲ್ಲಿನ ಮೂಲನಿವಾಸಿಗಳೊಂದಿಗೆ ಮತ್ತು ಇಲ್ಲಿನ ಪರಿಸರದೊಂದಿಗೆ ಸಹಬಾಳ್ವೆ ನಡೆಸುತ್ತಿರುವ ಸಮೂಹದ ಒಟ್ಟಾರೆ ಜನಸಂಖ್ಯೆ ಸುಮಾರು ಎಂಟು ಸಾವಿರದಷ್ಟು ಇದೆ. ಅಂಡಮಾನ್ ನಿಕೋಬಾರ್ ದ್ವೀಪ ಸಮೂಹ ಚೋಳರ ಕಾಲದಿಂದಲೂ ಅವರ ಸಮುದ್ರಯಾನದ ತಾತ್ಕಾಲಿಕ ತಾಣವಾಗಿತ್ತು ಎನ್ನುವುದಕ್ಕೆ ಇಲ್ಲಿ ಸಾಕಷ್ಟು ಐತಿಹಾಸಿಕ ಕುರುಹುಗಳ ನಿದರ್ಶನ ದೊರಕುತ್ತದೆ.
ಬಹುತೇಕ ವರ್ಷವಿಡೀ ಸುರಿಯುವ ಮಳೆಯಿಂದಾಗಿ ಈ ದ್ವೀಪದ 80% ಭಾಗ ಹರಿದ್ವರ್ಣದ ಕಾಡುಗಳಿಂದಾವೃತವಾಗಿದೆ. ಇಲ್ಲಿನ ದಟ್ಟವಾದ ಉಷ್ಣವಲಯದ ದಟ್ಟಪೊದೆಗಳು ಕಡಲ ತೀರವನ್ನು ಒಂದು ಕಡೆ ಆವರಿಸಿಕೊಂಡಿದ್ದರೆ, ಮತ್ತೊಂದು ಕಡೆ ಇಲ್ಲಿನ ಹಸಿರು ಮಿಶ್ರಿತ ನೀಲಿ ಸಮುದ್ರರಾಶಿ ಸಾವಿರಾರು ಜಲಚರಗಳ ತವರಾಗಿದೆ. ಒಂದು ಸಮೀಕ್ಷೆಯ ಪ್ರಕಾರ ಇಲ್ಲಿನ ಸಮುದ್ರವಲಯದಲ್ಲಿ ಸುಮಾರು 1640 ಅಪರೂಪದ ಜಲಚರಗಳು ವಾಸಿಸುತ್ತಿವೆಯಂತೆ. ಕಾಮನಬಿಲ್ಲಿನ ಬಣ್ಣದ ಮೀನುಗಳು, ಹವಳದ ಬಂಡೆಗಳು, ಯಥೇಚ್ಛವಾಗಿರುವ ಕಡಲಕಳೆ, ಉಪ್ಪುನೀರಿನ ವಾಸಿಗಳಾದ ಮೊಸಳೆಗಳು ಮತ್ತು ನದಿನೀರಿನಲ್ಲಿ ತೇಲಿಕೊಂಡು ಹೋಗುವ ಚರ್ಮದ ಹೊದಿಕೆ ಹೊದ್ದಂತೆ ಕಾಣುವ ಬೃಹದಾಕಾರದ ಆಮೆಗಳು ಇಲ್ಲಿನ ಅದ್ಭುತ ಜಲಚರ ರಾಶಿಗಳ ವಿಶೇಷತೆ.
ಪ್ರಕೃತಿ ಮತ್ತು ಪ್ರಗತಿಯ ಸಮತೋಲನ.
ಗ್ರೇಟ್ ನಿಕೋಬಾರ್ ದ್ವೀಪ ಇಂಡೋನೇಷಿಯಾದ ಸುಮಾತ್ರಾ ಕರಾವಳಿ ಪ್ರದೇಶಕ್ಕೆ ಕೇವಲ 90 ಮೈಲುಗಳಷ್ಟು ದೂರದಲ್ಲಿದೆ. ಆಗ್ನೇಯ ಏಷ್ಯಾದ ಹೆಬ್ಬಾಗಿಲು ಎನಿಸಿಕೊಂಡಿರುವ ಮಲಕ್ಕಾ ಜಲಸಂಧಿಗೂ ಕೇವಲ ನೂರು ಮೈಲಿಗಳಷ್ಟು ಅಂತರದಲ್ಲಿರುವುದರಿಂದ ಅದರ ಮುಖಾಂತರ ಹಾದು ಹೋಗುವ ಅಂತರಾಷ್ಟ್ರೀಯ ಕಡಲ ವ್ಯಾಪಾರ ಮಾರ್ಗ ಗ್ರೇಟ್ ಅಂಡಮಾನಿನ ದಕ್ಷಿಣ ತುದಿಯಲ್ಲಿರುವ ಗಲಾತಥಿಯಾ ಕೊಲ್ಲಿಗೆ ಕೇವಲ ನಲವತ್ತು ಮೈಲಿಗಳಷ್ಟು ದೂರದಲ್ಲಿ ಹಾಯ್ದು ಹೋಗುತ್ತದೆ, ಹಾಗಾಗಿ ಈ ಗ್ರೇಟ್ ನಿಕೋಬಾರ್ ಕೇವಲ ಅಂತರಾಷ್ಟ್ರೀಯ ಕಡಲ ವ್ಯಾಪಾರಕ್ಕೇ ಅಲ್ಲದೆ ಭೌಗೋಳಿಕ ರಾಜಕೀಯ ಮಟ್ಟದಲ್ಲಿಯೂ ಸಹಾ ಬಹಳ ಪ್ರಭಾವಶಾಲಿ ಸ್ಥಾನ ಪಡೆದಿದೆ.
ಈ ಅಂತರಾಷ್ಟ್ರೀಯ ಜಲಮಾರ್ಗದಲ್ಲಿ ಚಲಿಸುವ ಹಲವಾರು ಬೃಹತ್ ಗಾತ್ರದ ಹಡಗುಗಳು ಸಾಮಾನ್ಯವಾಗಿ ಭಾರತೀಯ ಬಂದರುಗಳನ್ನು ಬೈಪಾಸ್ ಮಾಡುತ್ತವೆ. ಇದಕ್ಕೆ ಕಾರಣವೇನೆಂದರೆ ಪ್ರಾಥಮಿಕವಾಗಿ, ಈ ಹಡಗುಗಳಿಗೆ ಸುರಕ್ಷಿತವಾಗಿ ಬಂದರುಗಳನ್ನು ಪ್ರವೇಶ ಮಾಡಲು ಕನಿಷ್ಠ 17 ಮೀಟರ್ಗಳ ಡ್ರಾಫ್ಟ್ , ಅಂದರೆ ಸಮುದ್ರದ ಆಳದ ಅಗತ್ಯವಿರುತ್ತದೆ. ಭಾರತದಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಬಂದರುಗಳಲ್ಲಿ ಈ ಅವಶ್ಯಕತೆಯನ್ನು ಪೂರೈಸಲಾಗುತ್ತಿಲ್ಲ. ಮತ್ತೆ ಇನ್ನೊಂದು ಕಾರಣವೇನೆಂದರೆ ಭಾರತೀಯ ಬಂದರುಗಳು ಅಂತರಾಷ್ಟ್ರೀಯ ಹಡಗು ಮಾರ್ಗಗಳಿಂದ ಭೌಗೋಳಿಕವಾಗಿ ದೂರವಿದ್ದು, ಅವುಗಳನ್ನು ತಲುಪಲು ಪ್ರಯತ್ನಿಸುವ ಹಡಗುಗಳಿಗೆ ಹೆಚ್ಚಿದ ವೆಚ್ಚಗಳು ಮತ್ತು ದೀರ್ಘಾವಧಿಯ ನೌಕಾಯಾನದ ಅನಿವಾರ್ಯತೆ ಉಂಟಾಗುತ್ತದೆ. ಹಾಗಾಗಿ ಈ ಬೃಹತ್ ಹಡಗುಗಳಲ್ಲಿ ಭಾರತಕ್ಕೆ ಬರಬೇಕಿದ್ದ ಸಾಮಗ್ರಿಗಳನ್ನು ಸಿಂಗಾಪುರದಲ್ಲೋ, ಕೊಲೊಂಬೋದಲ್ಲೋ ಅಥವಾ ದುಬೈನಲ್ಲೋ ಸರಕುಗಳನ್ನು ಮಧ್ಯಮ ವರ್ಗದ ಹಡಗುಗಳಿಗೆ ವರ್ಗಾಯಿಸಲಾಗುತ್ತದೆ. ಇದರಿಂದಾಗಿ ಸರಕುಸಾಗಣಿಕೆಯ ವೆಚ್ಚ ಅನವಶ್ಕವಾಗಿ ಹೆಚ್ಚಾಗುತ್ತದೆ. ಗ್ರೇಟ್ ನಿಕೋಬಾರ್ನಲ್ಲಿರುವ ಗಲಾಥಿಯಾ ಬಂದರು ಈ ಸವಾಲುಗಳಿಗೆ ಪರಿಹಾರವನ್ನು ಒದಗಿಸುತ್ತದೆ. ಅಂತರಾಷ್ಟ್ರೀಯ ಹಡಗು ಮಾರ್ಗದಿಂದ ಕೇವಲ 40 ನಾಟಿಕಲ್ ಮೈಲುಗಳಷ್ಟು ದೂರದಲ್ಲಿರುವ ಈ ಬಂದರು ದೊಡ್ಡ ಹಡಗುಗಳು ಸುರಕ್ಷಿತವಾಗಿ ಬಂದರನ್ನು ಪ್ರವೇಶಿಸಲು ಅವಶ್ಯಕ ಸಮುದ್ರದ ಆಳವೂ ಸಹಾ ಇದೆ. ಹಾಗಾಗಿ ದೊಡ್ಡ ಹಡಗುಗಳಲ್ಲಿ ಬಾರತಕ್ಕೆ ಬರುವ ಸರಕುಗಳನ್ನು ಇಲ್ಲಿಯೇ ಮಧ್ಯಮಗಾತ್ರದ ಹಡಗುಗಳಿಗೆ ಹಸ್ತಾಂತರಿಸಬಹುದು. ಇದರಿಂದಾಗಿ ವಿದೇಶದ ಬಂದರುಗಳಿಗೆ ಮಿಲಿಯನ್ ಡಾಲರುಗಳ ಲೆಕ್ಕದಲ್ಲಿ ಕೊಡಬೇಕಾದ ವೆಚ್ಚದ ಉಳಿತಾಯವಾಗುತ್ತದೆ. ಈ ನಿಟ್ಟಿನಲ್ಲಿ ಗ್ರೇಟ್ ನಿಕೋಬಾರಿನ ವಾಣಿಜ್ಯ ಅಭಿವೃದ್ಧಿಗೆ ಯೋಜನೆಯೊಂದು ತಯಾರಾಗಿದೆ. ಹಂತ ಹಂತವಾಗಿ ಜಾರಿಗೆ ಬರಲಿರುವ ಈ ಯೋಜನೆಗೆ ಭಾರತ ಸರ್ಕಾರ ಸುಮಾರು 72,000 ಕೋಟಿ ರೂಪಾಯಿಯಷ್ಟು ಹಣವನ್ನು ವಿನಿಯೋಗಿಸಲು ಮುಂದಾಗಿದೆ.
ಹಿಂದೂ ಮಹಾಸಾಗರದಲ್ಲಿ ಚೀನಾದ ಪ್ರಾಬಲ್ಯ
ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಾಬಲ್ಯದಿಂದಾಗಿ ಈ ಯೋಜನೆಯನ್ನು ತೀವ್ರಗತಿಯಲ್ಲಿ ಅನುಷ್ಠಾನಗೊಳಿಸುವ ಅವಶ್ಯಕತೆ ಇದೆ. ಈಗಾಗಲೇ ಈ ವಲಯದಲ್ಲಿ ಚೀನಾದ ಹೂಡಿಕೆಯ ಅಡಿಯಲ್ಲಿ ಮ್ಯಾನ್ಮಾರ್ (ಕ್ಯೌಕ್ಪಿಯು), ಶ್ರೀಲಂಕಾ (ಹಂಬಂತೋಟಾ) ಮತ್ತು ಪಾಕಿಸ್ತಾನ (ಗ್ವಾದರ್) ಬಂದರುಗಳು ನಿರ್ಮಾಣವಾಗಿವೆ. ಕುತಂತ್ರಿ ಚೀನಾದ ಸಾಲದ ಸುಳಿಗೆ ಸಿಲುಕಿದ ಈ ದೇಶಗಳು ಸಾಲವನ್ನು ತೀರಿಸಲಾಗದೆ ಈ ಬಂದರುಗಳ ಮಾಲೀಕತ್ವವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಮತ್ತು ಚೀನಾ ಅವುಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದುವ ಹುನ್ನಾರ ನಡೆಸುತ್ತಿರುವುದು ಸ್ಪಷ್ಟವಾಗಿದೆ. ಇತ್ತೀಚೆಗೆ ಮಾಲ್ಡೀವ್ಸ್ ದೇಶವನ್ನೂ ತನ್ನ ಸಾಲದ ಶೂಲಕ್ಕೆ ಸಿಲುಕಿಸಿಕೊಂಡು ಅಲ್ಲಿಯೂ ತನ್ನ ಅಧಿಪತ್ಯವನ್ನು ಸ್ಥಾಪಿಸಲು ಮುಂದಾಗಿದೆ. ಹಾಗಾಗಿ ಈ ವಲಯದಲ್ಲಿ ಚೀನಾದ ಪ್ರಭಾವಕ್ಕೆ ಪ್ರತ್ಯುತ್ತರವಾಗಿ ಭಾರತ ತನ್ನ ಸೇನಾ ಸಾಮರ್ಥ್ಯವನ್ನೂ ಸಹಾ ಬಲಪಡಿಸಿಕೊಳ್ಳುವ ಅನಿವಾರ್ಯತೆಯು ಕೂಡಾ ಇದೆ. ಈಗಾಗಲೇ ಗ್ರೇಟ್ ನಿಕೋಬಾರಿನಲ್ಲಿ INS ಬಾಜ಼್ ಎನ್ನುವ ನೌಕಾದಳದ ನೆಲೆ ಇದೆ. ಭವಿಷ್ಯದಲ್ಲಿ ಗ್ರೇಟ್ ನಿಕೋಬಾರ್ ಒಂದು ಅಂತರಾಷ್ಟ್ರೀಯ ಮಟ್ಟದ ಪ್ರಮುಖ ವಾಣಿಜ್ಯ ಬಂದರು ಆಗುವ ನಿರೀಕ್ಷೆ ಇರುವುದರಿಂದ ಇಲ್ಲಿನ ನೌಕಾದಳವನ್ನೂ ವಿಸ್ತರಿಸಬೇಕಾಗುತ್ತದೆ. ಈಗಾಗಲೇ ಹೇಳಿದ ಹಾಗೆ ಇಲ್ಲಿನ ಪ್ರಕೃತಿ ಸೌಂದರ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯುವುದರಲ್ಲಿ ಅನುಮಾನವೇ ಇಲ್ಲ ಹಾಗಾಗಿ ಇಲ್ಲಿನ ಪರಿಸರಕ್ಕೆ ಧಕ್ಕೆಯಾಗದಂತೆ ಸಮಗ್ರವಾದ ಪ್ರವಾಸೋದ್ಯಮದ ಅಭಿವೃದ್ಧಿಯೂ ನಡೆಯಬೇಕಾಗಿದೆ. ಹಾಗಾದರೇ NITI ಆಯೋಗದವರು ನಿರ್ಮಿಸಿರುವ ಗ್ರೇಟ್ ನಿಕೋಬಾರಿನ ಅಭಿವೃದ್ಧಿಗೆ ನಿರ್ಮಿಸಿರುವ ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಏನೆಲ್ಲಾ ಇದೆ ಎಂದು ಅವಲೋಕಿಸೋಣ.
ಯೋಜನೆಯಲ್ಲಿ ಏನಿದೆ?
ಪೂರ್ವಭಾವಿಯಾಗಿ ಇದ್ದ ಕಟ್ಟಡವನ್ನು ವಿಸ್ತರಿಸುವುದಾಗಲೀ ಅಥವಾ ಇರುವ ವಿಮಾನ ನಿಲ್ದಾಣವನ್ನು ಇನ್ನೊಂದಿಷ್ಡು ಉದ್ದ ಅಗಲ ಮಾಡುವುದನ್ನು ‘ಬ್ರೌನ್ ಫೀಲ್ಡ್ ‘ಯೋಜನೆ ಎನ್ನುತ್ತಾರೆ. ಆದರೆ ಇಡೀ ಒಂದು ವಿಮಾನ ನಿಲ್ದಾಣವನ್ನು ಹೊಸದಾಗಿ ಸೃಷ್ಟಿಸುವುದಾಗಲೀ ಅಥವಾ ನೂತನ ನಗರವನ್ನು ನಿರ್ಮಾಣ ಮಾಡುವ ಯೋಜನೆಗಳನ್ನು ‘ಗ್ರೀನ್ ಫೀಲ್ಡ್’ ಯೋಜನೆಗಳು ಎಂದು ಕರೆಯಲಾಗುತ್ತದೆ. ಗ್ರೇಟ್ ನಿಕೋಬಾರಿನಲ್ಲಿ ನೈಸರ್ಗಿಕ ಕೊಲ್ಲಿಯೊಂದನ್ನು ಬಿಟ್ಟರೆ ಎಲ್ಲವನ್ನೂ ಹೊಚ್ಚ ಹೊಸದಾಗಿ ನಿರ್ಮಿಸಬೇಕಿದೆ.
ಸುಮಾರು ಮೂವತ್ತು ವರ್ಷಗಳ ಅವಧಿಯಲ್ಲಿ ಸಂಪೂರ್ಣಗೊಳ್ಳುವ ನಿರೀಕ್ಷೆ ಇರುವ ಯೋಜನೆಯ ಮೊದಲನೇ ಹಂತದಲ್ಲಿ ನಿರ್ಮಿಸುತ್ತಿರುವುದು ಅಂತರಾಷ್ಟ್ರೀಯ ಸರಕು ವರ್ಗಾವಣೆಯ ಟರ್ಮಿನಲ್. ಸುಮಾರು ಒಂದು ಕೋಟಿ ನಲವತ್ತೆರಡು ಲಕ್ಷ ಕಂಟೈನರುಗಳ ವರ್ಗಾವಣೆ ಮಾಡುವ ಕ್ಷಮತೆ ಇರುವ ಬಂದರು 2028 ರಲ್ಲಿ ಕಾರ್ಯ ಪ್ರಾರಂಭ ಮಾಡುವ ನಿರೀಕ್ಷೆ ಇದೆ.
ಇನ್ನು ಎರಡನೇ ಹಂತದಲ್ಲಿ ಸುಮಾರು ಮೂರುವರೆ ಲಕ್ಷ ಜನರಿಗೆ, ಅಂದರೆ ಇಲ್ಲಿನ ಬಂದರಿನಲ್ಲಿ ಕೆಲಸ ಮಾಡುವ ಕಾರ್ಮಿಕ ಮತ್ತು ಇತರೆ ಸಿಬ್ಬಂದಿಗೆ, ಬರುವ ಪ್ರವಾಸಿಗರಿಗೆ ವಸತಿ ಸೌಕರ್ಯ, ವಾಣಿಜ್ಯ ಮಳಿಗೆಗಳು, ಕೆಲವು ಕಾರ್ಖಾನೆಗಳನ್ನು ನಿರ್ಮಿಸಲು ಎರಡು ಗ್ರೀನ್ ಫೀಲ್ಡ್ ನಗರಗಳನ್ನು ಹಂತ ಹಂತವಾಗಿ ನಿರ್ಮಿಸುವ ಯೋಜನೆ ಇದೆ. ಈ ನಗರಗಳಿಗೆ ಬೇಕಾಗುವ ವಿದ್ಯುತ್ ಶಕ್ತಿಯನ್ನು ಸೋಲಾರ್, ಗ್ಯಾಸ್ ಮತ್ತು ಡೀಸಲ್ ಮೂಲಗಳಿಂದ, ಅತಿ ಕಡಿಮೆ ಇಂಗಾಲಾಂಶದ ಹೆಜ್ಜೆಗುರುತನ್ನು ಗಮನದಲ್ಲಿಟ್ಟುಕೊಂಡು ಉತ್ಪಾದಿಸಲಾಗುತ್ತದೆ. ಮೂರನೇ ಹಂತದಲ್ಲಿ ಅಂತರಾಷ್ಟ್ರೀಯ ಮಟ್ಟದ, ಅಂದರೆ ಏರ್ ಬಸ್-380 ಯಂತಹ ಬೃಹತ್ ಗಾತ್ರದ ವಿಮಾನದ ನಿರ್ವಹಣೆ ಮತ್ತು ಒಮ್ಮೆಲೇ 4000 ಪ್ರಯಾಣಿಕರ ಆಗಮನ-ನಿರ್ಗಮನವನ್ನು ನಿರ್ವಹಿಸುವ ಕ್ಷಮತೆ ಇರುವ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುವುದು.
ಈ ಬೃಹತ್ ಮಹತ್ವಾಕಾಂಕ್ಷಿ ಯೋಜನೆಗೆ ಸರ್ಕಾರ ಈಗಾಗಲೇ 72,000 ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ಮೀಸಲಿಟ್ಟಿದೆ. 1970 ರಲ್ಲೇ ಇಂತಹಾ ಒಂದು ಯೋಜನೆಯ ಬಗ್ಗೆ ಆಲೋಚನೆ ನಡೆಸಲಾಗಿತ್ತು. ಪರ್ಯಾವರಣ ವಿನಾಶದ ಆತಂಕ ಮತ್ತು ಇತರೆ ಅಡಕು ತೊಡಕುಗಳನ್ನು ಪರಿಹರಿಸಿಕೊಂಡು ಗ್ರೇಟ್ ನಿಕೋಬಾರ್ ಅಭಿವೃದ್ಧಿಯತ್ತ ಧಾಪುಗಾಲಿಕ್ಕಿದೆ.ಈ ಯೋಜನೆಯಲ್ಲಿ ಕಡಿಯಲಾಗುವ ಮರಗಳ ಸಮಾನ ಸಂಖ್ಯೆಯಲ್ಲಿ ಹರಿಯಾಣದ ನಿರ್ದಿಷ್ಟ ಪ್ರದೇಶಗಲ್ಲಿ ಬೆಳೆಸುವ ಸಮಗ್ರ ಯೋಜನೆಯೂ ಇದೆ. ಹೀಗೆ ಪ್ರಕೃತಿ ಮತ್ತು ಪ್ರಗತಿಯ ಸಮತೋಲನದ ಈ ಯೋಜನೆಯಿಂದಾಗಿ ಭವಿಷ್ಯತ್ತಿನಲ್ಲಿ ಭಾರತದಲ್ಲೇ ಒಂದು ಸಿಂಗಪುರ ಅಥವಾ ಹಾಂಗಕಾಂಗಿನಂತಹ ಪ್ರಮುಖ ವಾಣಿಜ್ಯ ಕೇಂದ್ರ ಒಂದು ನಿರ್ಮಾಣವಾಗಲಿದೆ.
✍️…ವಿಂಗ್ ಕಮಾಂಡರ್ ಸುದರ್ಶನ