ಕಠ್ಮಂಡು: ನೇಪಾಳದಲ್ಲಿ ಹೆಚ್ಚಿದ ದಂಗೆಯ ನಡುವೆ ಇದೀಗ ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರು ರಾಜೀನಾಮೆ ನೀಡಿದ ಕೆಲವು ಗಂಟೆಗಳಲ್ಲಿ ಪೌಡೆಲ್ ಕೂಡಾ ರಾಜೀನಾಮೆ ಸಲ್ಲಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ರಾಷ್ಟ್ರವ್ಯಾಪಿ ಜೆನ್ ಜಿ ಪ್ರತಿಭಟನೆಗಳು ಮಂಗಳವಾರ ಎರಡನೇ ದಿನವೂ ಮುಂದುವರಿದಿದೆ. ಹಿಮಾಲಯನ್ ದೇಶದಲ್ಲಿ ರಾಜಕೀಯ ಪ್ರಕ್ಷುಬ್ಧತೆಗೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳ ನಿಷೇಧ, ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಕಾರಣದಿಂದ ದೇಶದ ಯುವ ಜನತೆ ದಂಗೆ ಎದ್ದಿದ್ದರು. ಕಳೆದ ವಾರ ಓಲಿ ಸರ್ಕಾರವು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ವಿವಾದಾತ್ಮಕ ನಿಷೇಧದಿಂದ ಅಶಾಂತಿ ಭುಗಿಲೆದ್ದಿತು, ಪ್ರತಿಭಟನೆಗಳು ಮಾರಕವಾದ ನಂತರ ಮಂಗಳವಾರ ಬೆಳಗಿನ ಜಾವ ಆ ಆದೇಶವನ್ನು ಹಿಂದಕ್ಕೆ ಪಡೆಯಲಾಯಿತು.
ಗಲಭೆಯಲ್ಲಿ ಇದುವರೆಗೆ 22 ಮಂದಿ ಅಸುನೀಗಿದ್ದಾರೆ, ನೂರಾರು ಜನರು ಗಾಯಗೊಂಡಿದ್ದಾರೆ.
ನೇಪಾಳದಲ್ಲಿ ತುರ್ತು ಪರಿಸ್ಥಿತಿ: ದೆಹಲಿಯಿಂದ ಕಠ್ಮಂಡುಗೆ ತೆರಳಬೇಕಿದ್ದ ವಿಮಾನ ಹಾರಾಟ ಬಂದ್ :
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ನಿರ್ಧಾರದಿಂದ ಭುಗಿಲೆದ್ದಿರುವ ಸಂಘರ್ಷ ತಾರಕಕ್ಕೇರಿದ್ದು, ತಿಭಟನಕಾರರು ಪ್ರಧಾನಿ ಕೆಪಿ ಒಲಿ ಶರ್ಮಾ ಮನೆಗೆ ನುಗ್ಗಿದ್ದಾರೆ. ಪ್ರಧಾನಿ ಮನೆಗೆ ಬೆಂಕಿ ಹಚ್ಚಿದ್ದಾರೆ.
ಈಗಾಗಲೇ ರಾಜೀನಾಮೆ ನೀಡಿರುವ ಕೆಪಿ ಒಲಿ ಶರ್ಮಾ ಪಲಾಯನ ಮಾಡುವ ಸಾಧ್ಯತೆ ಇದೆ.ಇತ್ತ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ನೇಪಾಲದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ನೇಪಾಳ ಸಂಸತ್ತಿಗೂ ಪ್ರತಿಭಟನಕಾರರು ದಾಳಿ ಮಾಡಿದ್ದಾರೆ. ಕಟ್ಟಡದ ಕೆಲ ಭಾಗದಲ್ಲಿ ಬೆಂಕಿ ಹಚ್ಚಿದ್ದಾರೆ.
ಈ ಹಿನ್ನಲೆಯಲ್ಲಿ ದೆಹಲಿಯಿಂದ ಕಠ್ಮಂಡುಗೆ ತೆರಳಬೇಕಿದ್ದ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಏರ್ ಇಂಡಿಯಾ, ಇಂಡಿಗೋ ವಿಮಾನಗಳ ಹಾರಾಟ ಬಂದ್ ಮಾಡಲಾಗಿದೆ. ಅಲ್ಲದೇ ನೇಪಾಳದಲ್ಲಿರುವ ಭಾರತೀಯರಿಗೆ ಹೆಲ್ಪ್ ಲೈನ್ ನಂಬರ್ ಕೂಡ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.