ನವದೆಹಲಿ : ಮಹತ್ವದ ಬೆಳವಣಿಗೆಯಲ್ಲಿ ಉಪರಾಷ್ಟ್ರಪತಿ ಚುನಾವಣೆಯ ಮುನ್ನಾ ದಿನವಾದ ಸೋಮವಾರ (ಸೆಪ್ಟೆಂಬರ್ 8) ತೆಲಂಗಾಣದ ಪಕ್ಷ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಹಾಗೂ ಒಡಿಶಾದ ಬಿಜು ಜನತಾ ದಳ (ಬಿಜೆಡಿ) ಸೆಪ್ಟೆಂಬರ್ 9 ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆ ವೇಳೆ ಮತದಾನದಿಂದ ದೂರ ಉಳಿಯಲು ನಿರ್ಧರಿಸಿವೆ. ಈ ನಿರ್ಧಾರ ಎನ್ಡಿಎ ಅಭ್ಯರ್ಥಿಗೆ ಅನುಕೂಲಕರ ಹಾಗೂ ವಿಪಕ್ಷಗಳ ಅಭ್ಯರ್ಥಿಗೆ ಹಿನ್ನಡೆ ಎಂದು ಭಾವಿಸಲಾಗಿದೆ.
ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನೇತೃತ್ವದ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್)ಪಕ್ಷದ ಕಾರ್ಯಕಾರಿ ಅಧ್ಯಕ್ಷ ಕೆ.ಟಿ. ರಾಮ ರಾವ್ ತಮ್ಮ ಪಕ್ಷವು ಮತದಾನದಿಂದ ದೂರ ಉಳಿಯಲಿದೆ ಎಂದು ಘೋಷಣೆ ಮಾಡಿದ್ದಾರೆ. ಸಂಸತ್ತಿನಲ್ಲಿ ಬಿಆರ್ಎಸ್ ನಾಲ್ವರು ಸದಸ್ಯರನ್ನು ಹೊಂದಿದ್ದರೆ ಬಿಜೆಡಿಯು ಏಳು ರಾಜ್ಯಸಭಾ ಸದಸ್ಯರನ್ನು ಹೊಂದಿದೆ.
ರಾಜ್ಯದಲ್ಲಿ ಯೂರಿಯಾ ಕೊರತೆಯ ಬಗ್ಗೆ ‘ದುಃಖ’ ವ್ಯಕ್ತಪಡಿಸಿರುವ ರೈತರನ್ನು ಬೆಂಬಲಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಆರ್ಎಸ್ನ ಕೆ.ಟಿ.ರಾಮರಾವ್ ಹೇಳಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಈ ಸಮಸ್ಯೆಯನ್ನು ಪರಿಹರಿಸಲು ವಿಫಲವಾಗಿವೆ. ಹೀಗಾಗಿ ನಾವು ಮತದಾನದಲ್ಲಿ ಭಾಗವಹಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ ಪಟ್ನಾಯಕ್ ನೇತೃತ್ವದ ಬಿಜು ಜನತಾದಳ (ಬಿಜೆಡಿ) ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿಯುವುದಾಗಿ ಘೋಷಿಸಿದ ಕೆಲವೇ ಗಂಟೆಗಳ ನಂತರ ಬಿಆರ್ಎಸ್ ಪಕ್ಷದಿಂದ ಈ ನಿರ್ಧಾರ ಬಂದಿದೆ.
ಇದಕ್ಕೂ ಮೊದಲು ತಮ್ಮ ಪಕ್ಷದ ನಿರ್ಧಾರವನ್ನು ಪ್ರಕಟಿಸಿದ ಬಿಜೆಡಿ ಸಂಸದ ಸಸ್ಮಿತ್ ಪಾತ್ರ ಅವರು, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದಿಂದ “ಸಮಾನ ಅಂತರ” ಕಾಯ್ದುಕೊಳ್ಳಲು ಪಕ್ಷವು ಮತದಾನದಿಂದ ದೂರ ಉಳಿಯುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
“ಬಿಜೆಡಿ ಅಧ್ಯಕ್ಷ ನವೀನ ಪಟ್ನಾಯಕ್ ಅವರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷದ ಸಂಸದರು ಮತದಾನದಿಂದ ದೂರ ಇರಬೇಕೆಂದು ನಿರ್ಧರಿಸಿದ್ದಾರೆ. ಪಕ್ಷದ ಹಿರಿಯ ನಾಯಕರು, ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಸದಸ್ಯರು ಮತ್ತು ಶಾಸಕರೊಂದಿಗೆ ಸಮಾಲೋಚಿಸಿದ ನಂತರ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ” ಎಂದು ಪಾತ್ರ ಹೇಳಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆಯ ಲೆಕ್ಕಾಚಾರವೇನು..?
ಜಗದೀಪ ಧನಕರ ಅವರ ಹಠಾತ್ ರಾಜೀನಾಮೆಯ ನಂತರ ತೆರವಾಗಿದ್ದ ಉಪರಾಷ್ಟ್ರಪತಿ ಸ್ಥಾನಕ್ಕೆ ಸೆಪ್ಟೆಂಬರ್ 9 ರಂದು ಮತದಾನ ನಡೆಯಲಿದೆ. ಕೇಂದ್ರದಲ್ಲಿ ಆಡಳಿತಾರೂಢ ಎನ್ಡಿಎ ಮೈತ್ರಿಕೂಟವು ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರನ್ನು ಕಣಕ್ಕಿಳಿಸಿದೆ. ವಿಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ಬಣವು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ್ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ರಾಜ್ಯಸಭೆಯಿಂದ 245 ಮತ್ತು ಲೋಕಸಭೆಯಿಂದ 543 ಸದಸ್ಯರು ರಾಜ್ಯಸಭೆಯ 12 ನಾಮನಿರ್ದೇಶಿತ ಸದಸ್ಯರು ಸೇರಿ ಒಟ್ಟು 788 ಸದಸ್ಯರು ಮತದಾನಕ್ಕೆ ಅರ್ಹರಿದ್ದಾರೆ. ಆದರೆ, ರಾಜ್ಯಸಭೆಯಲ್ಲಿ ಆರು ಸ್ಥಾನಗಳು ಮತ್ತು ಲೋಕಸಭೆಯಲ್ಲಿ ಒಂದು ಸ್ಥಾನಗಳು ಖಾಲಿ ಇರುವುದರಿಂದ ಸಂಸತ್ತಿನ ಪ್ರಸ್ತುತ ಬಲ 781 ಆಗಿದೆ. ಹೀಗಾಗಿ ಬಹುಮತ ಪಡೆಯಲು 391 ಮತಗಳು ಬೇಕಾಗುತ್ತವೆ. ಆದರೆ ಈಗಾಗಲೇ 4 ಸದಸ್ಯರಿರುವ ತೆಲಂಗಾಣದ ಬಿಆರ್ಎಸ್ ಪಕ್ಷ ಹಾಗೂ 7 ಸದಸ್ಯರಿರುವ ಒಡಿಶಾದ ಬಿಜು ಜನತಾ ದಳ ಮತದಾನದಿಂದ ದೂರ ಉಳಿಯುವುದಾಗಿ ಪ್ರಕಟಿಸಿದ್ದರಿಂದ ಒಟ್ಟು ಬಲ ಮತದಾನ ಮಾಡುವವರ ಸಂಖ್ಯೆ 770ಕ್ಕೆ ಇಳಿಯಲಿದೆ. ಆಗ ಅಭ್ಯರ್ಥಿ ಗೆಲುವು ಸಾಧಿಸಲು 336 ಮತಗಳನ್ನು ಪಡೆದರೆ ಸಾಕಾಗುತ್ತದೆ.
ಆಡಳಿತಾರೂಢ ಮೈತ್ರಿಕೂಟ ಎನ್ಡಿಎ (NDA) 425 ಸಂಸದರ ಬಲ ಹೊಂದಿದೆ. ವಿಪಕ್ಷಗಳ ಮೈತ್ರಿಕೂಟ 313 ಸದಸ್ಯರ ಬೆಂಬಲ ಹೊಂದಿದೆ. ಆದರೆ ಎಎಪಿಯ 12 ಸದಸ್ಯರು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಸುದರ್ಶನ ರೆಡ್ಡಿ ಅವರಿಗೆ ಮತ ಚಲಾಯಿಸುವ ಸಾಧ್ಯತೆಯೇ ಹೆಚ್ಚಿದೆ. ಹೀಗಾಗಿ ವಿಪಕ್ಷಗಳ ಒಟ್ಟು ಬಲ 325 ಆಗಲಿದೆ. ಆಂಧ್ರಪ್ರದೇಶದ ಜಗನ್ಮೋಹ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ 11 ಸದಸ್ಯರನ್ನು ಹೊಂದಿದ್ದು, ಈ ಪಕ್ಷದ ನಿರ್ಧಾರ ಏನು ಎಂಬುದು ಖಚಿತವಾಗಿಲ್ಲ. ಆದರೂ ಎನ್ಡಿಎ ಈ ಪಕ್ಷವು ತಮಗೆ ಅನುಕೂಲಕರ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನಿರೀಕ್ಷಿಸುತ್ತಿದೆ.
ಇನ್ನು ಎಎಪಿಯ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಕಳೆದ ವರ್ಷ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ಸಹಾಯಕ ವಿರುದ್ಧ ತಮ್ಮ ಮೇಲೆ ಹಲ್ಲೆ ನಡೆಸಿದ ಆರೋಪ ಮಾಡಿದ ನಂತರ ಪಕ್ಷ ಮತ್ತು ಅವರ ನಡುವಿನ ಸಂಬಂಧ ಮುರಿದುಬಿದ್ದಿದೆ.
ಅವರು ಬಿಜೆಪಿಯನ್ನು ಸೇರುತ್ತಾರೆ ಎಂಬ ವದಂತಿಗಳಿದ್ದವು, ಆದರೆ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಮತ್ತು ಅವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ಅವರ ನಿರ್ಧಾರ ಯಾರ ಕಡೆಗೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಲೋಕಸಭೆಯಲ್ಲಿ ಏಳು ಸ್ವತಂತ್ರ ಸಂಸದರಿದ್ದು, ಅವರ ನಿರ್ಧಾರದ ಬಗ್ಗೆ ಅನಿಶ್ಚಿತತೆ ಇದೆ. ಪಂಜಾಬಿನ ಅಕಾಲಿ ದಳ ಮತ್ತು ಮಿಜೋರಾಂನ ಝಡ್ಪಿಎಂ(ZPM) ಪಕ್ಷದ ನಿರ್ಧಾರದ ಬಗ್ಗೆಯೂ ಅನಿಶ್ಚಿತತೆ ಇದೆ. ಹೀಗಾಗಿ ಮೇಲ್ನೋಟಕ್ಕೆ ಎನ್ಡಿಎಗೆ ಅನುಕೂಲಕರ ಸಂಖ್ಯೆ ಇದ್ದಂತೆ ಕಂಡುಬರುತ್ತಿದೆ.