ಮುಂಬೈ; ಬಾಲಿವುಡ್ನಲ್ಲಿ ಸ್ಮರಣೀಯ ಪೋಷಕ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಹಿರಿಯ ನಟ ಆಶಿಶ್ ವಾರಂಗ್ ಶುಕ್ರವಾರ (ಸೆಪ್ಟೆಂಬರ್ 5) ತಮ್ಮ 55 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಅವರ ಸಾವಿಗೆ ಅಧಿಕೃತವಾಗಿ ಕಾರಣವನ್ನು ದೃಢಪಡಿಸಲಾಗಿಲ್ಲವಾದರೂ, ಅವರು ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿಗಳು ಸೂಚಿಸುತ್ತವೆ. ಆಶಿಶ್ ಅವರು ಚಿತ್ರರಂಗಕ್ಕೆ ಕಾಲಿಡುವ ಮೊದಲು, ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದರು. ಅವರು ಪ್ರಮುಖ ಪಾತ್ರಗಳಲ್ಲಿ ಹೆಚ್ಚು ಕೆಲಸ ಮಾಡದಿದ್ದರೂ, ಅವರು ಅನೇಕ ದೊಡ್ಡ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಪೋಷಕ ಪಾತ್ರಗಳ ಮೂಲಕ ಜನಪ್ರಿಯರಾಗಿದ್ದರು.
ಸೂರ್ಯವಂಶಿ, ಮರ್ದಾನಿ, ಸಿಂಬಾ, ಸರ್ಕಸ್ ಮತ್ತು ಏಕ್ ವಿಲನ್ ರಿಟರ್ನ್ಸ್ ಸೇರಿದಂತೆ ಹಲವಾರು ಹೈ ಪ್ರೊಫೈಲ್ ಹಿಂದಿ ಚಲನಚಿತ್ರಗಳಲ್ಲಿನ ನಟನೆಗಾಗಿ ವಾರಂಗ್ ಹೆಸರು ಮಾಡಿದ್ದರು. ಪೊಲೀಸ್ ಅಧಿಕಾರಿಗಳ ಅವರ ಪಾತ್ರವನ್ನು ಪ್ರೇಕ್ಷಕರು ವಿಶೇಷವಾಗಿ ಮೆಚ್ಚಿದರು, ಚಲನಚಿತ್ರ ಕೆಲಸದ ಜೊತೆಗೆ, ವಾರಂಗ್ ಮರಾಠಿ ದೂರದರ್ಶನ ಮತ್ತು ವಾಣಿಜ್ಯ ಯೋಜನೆಗಳಲ್ಲಿಯೂ ಸಕ್ರಿಯರಾಗಿದ್ದರು.
ತಮ್ಮ ವೃತ್ತಿಜೀವನದುದ್ದಕ್ಕೂ ಅವರು, ಅಮಿತಾಬ ಬಚ್ಚನ್, ಅಮೀರ್ ಖಾನ್, ರಾಣಿ ಮುಖರ್ಜಿ, ಅಜಯ ದೇವಗನ್, ಅಕ್ಷಯಕುಮಾರ, ಕತ್ರಿನಾ ಕೈಫ್, ರಣವೀರಸಿಂಗ್, ಅಶುತೋಷ ರಾಣಾ, ಜಾನ್ ಅಬ್ರಹಾಂ ಮತ್ತು ಚಲನಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ಸೇರಿದಂತೆ ಭಾರತೀಯ ಚಿತ್ರರಂಗದ ಕೆಲವು ದೊಡ್ಡ ಹೆಸರುಗಳೊಂದಿಗೆ ಕೆಲಸ ಮಾಡಿದ್ದರು. ಅವರು ಮನೋಜ್ ಬಾಜಪೇಯಿ ಅವರ ದಿ ಫ್ಯಾಮಿಲಿ ಮ್ಯಾನ್ (2019) ನ ಮೊದಲ ಸೀಸನ್ನಲ್ಲಿಯೂ ನಟಿಸಿದ್ದರು. ಅವರ ಹಠಾತ್ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.