ಬೆಂಗಳೂರು :
ವಿಜಯಪುರದಲ್ಲಿ ನಡೆಯಲಿರುವ 37ನೇ ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸುವುದಾಗಿ ತಿಳಿಸಿದ್ದಾರೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗ ವಿಧಾನಸೌಧದಲ್ಲಿ ಭೇಟಿ ಮಾಡಿದಾಗ ಸಿಎಂ ಈ ಭರವಸೆ ನೀಡಿದ್ದಾರೆ.
ಡಿಸೆಂಬರ್ ಅಂತ್ಯದವರೆಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಡಿಸೆಂಬರಿನಲ್ಲಿ ಸಮ್ಮೇಳನ ಮಾಡುವುದು ಗಡಿಬಿಡಿಯಾಗುತ್ತದೆ.
ಆದ್ದರಿಂದ 2023ರ ಜನವರಿ ಮೊದಲ ವಾರದಲ್ಲಿ ಸಮ್ಮೇಳನದ ದಿನಾಂಕ ನಿಗದಿ ಮಾಡಿ, ಉದ್ಘಾಟನೆಗೆ ಆಗಮಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಮುಖ್ಯಮಂತ್ರಿಗಳ ಸಲಹೆಗೆ ನಿಯೋಗವು ಸಮ್ಮತಿ ವ್ಯಕ್ತಪಡಿಸಿತು.
ಗಡಿಭಾಗ ಜಿಲ್ಲೆಯಾದ ವಿಜಯಪುರದಲ್ಲಿ ಅಚ್ಚುಕಟ್ಟಾಗಿ ಸಮ್ಮೇಳನವನ್ನು ಸಂಘಟಿಸಲು ತಿಳಿಸಿ, ಶುಭ ಹಾರೈಸಿದರು.
ಐಎಫ್ ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಭೀ ಬಾಳೋಜಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ, ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಪ್ರಧಾನ ಕಾರ್ಯದರ್ಶಿ ಮೋಹನ ಪಿ. ಕುಲಕರ್ಣಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಡಿ. ಬಿ. ವಡವಡಗಿ, ವಾಸುದೇವ ಹೊಳ್ಳ, ಮುನಿರಾಜು, ಸೋಮಶೇಖರ ಗಾಂಧಿ,
ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ವಿ. ಶಟಗಾರ, ಚನ್ನವೀರ ಸಗರನಾಳ ಮತ್ತಿತರರು ಹಾಜರಿದ್ದರು.
ರಾಜ್ಯಪಾಲರಿಗೆ ಆಹ್ವಾನ:
ರಾಜ್ಯಪಾಲ ಥಾವರಚಂದ ಗೆಹ್ಲೋಟರವರನ್ನು ಇದೇ ನಿಯೋಗ ಭೇಟಿ ಮಾಡಿ ಸಮ್ಮೇಳನಕ್ಕೆ ಆಗಮಿಸಲು ಆಹ್ವಾನಿಸಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸುವ ಪತ್ರಕರ್ತರ ಸಮ್ಮೇಳನ ಬಗ್ಗೆ ಮಾಹಿತಿ ಪಡೆದ ರಾಜ್ಯಪಾಲರು ಸಮ್ಮೇಳನದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.