ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಹೂಳುವಿಕೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸಲು ಸಿದ್ಧತೆ ನಡೆಸಿದೆ. ಈ ಪ್ರಕರಣದ ದಾಖಲೆಗಳನ್ನು ಪೊಲೀಸರು ಈಗಾಗಲೇ ಇಡಿಗೆ ಹಸ್ತಾಂತರಿಸಿದ್ದಾರೆ. ವಿಶೇಷವಾಗಿ, ಒಡನಾಡಿ ಮತ್ತು ಸಂವಾದ ಎಂಬ ಎರಡು ಎನ್ ಜಿಒಗಳು ವಿದೇಶಿ ನಿಧಿ ದುರ್ಬಳಕೆ ಆರೋಪದಡಿ ಇಡಿ ಸ್ಕ್ಯಾನರ್ಗೆ ಒಳಪಟ್ಟಿವೆ ಎಂದು ಪ್ರಖ್ಯಾತ ಆಂಗ್ಲ ವಾಹಿನಿ INDIA TODAY ವಾರ್ತಾ ವಾಹಿನಿ ತನ್ನ ವರದಿಯಲ್ಲಿ ತಿಳಿಸಿದೆ.
ಎಫ್ಇಎಂಎ ಅಡಿಯಲ್ಲಿ ಪ್ರಕರಣ ದಾಖಲು:
ಇಡಿ ಮೂಲಗಳ ಪ್ರಕಾರ, ಧರ್ಮಸ್ಥಳ ಸಾಮೂಹಿಕ ಹೂಳುವಿಕೆ ಪ್ರಕರಣಕ್ಕೆ ಸಂಬಂಧಿಸಿದ ಎರಡು ದೂರುಗಳ ಆಧಾರದ ಮೇಲೆ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಎಸ್ಟಿಒಗಳು ವಿದೇಶದಿಂದ ಕಾನೂನುಬಾಹಿರವಾಗಿ ಹಣ ಪಡೆದಿರಬಹುದು ಮತ್ತು ಈ ಹಣವನ್ನು ಧರ್ಮಸ್ಥಳದ ವಿರುದ್ಧದ ಪ್ರಚಾರ ಅಥವಾ ಚಟುವಟಿಕೆಗಳಿಗೆ ಬಳಸಿಕೊಂಡಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಇಡಿ ಈ ಸಂಸ್ಥೆಗಳ ಹಣಕಾಸು ವ್ಯವಹಾರಗಳನ್ನು ಕೂಲಂಕಷವಾಗಿ ಪರಿಶೀಲಿಸಲಿದೆ.
ತನಿಖೆಯ ಭಾಗವಾಗಿ, ಎಸ್ ಬಿಐ ಸೇರಿದಂತೆ ವಿವಿಧ ಬ್ಯಾಂಕುಗಳಿಗೆ ಪತ್ರ ಬರೆದು, ಎನ್ ಜಿಒಗಳಿಗೆ ಸಂಬಂಧಿಸಿದ ಪ್ಯಾನ್ ವಿವರಗಳು, ಖಾತೆ ಮಾಹಿತಿ ಮತ್ತು ಕಳೆದ ಐದು ವರ್ಷಗಳ ವಹಿವಾಟು ದಾಖಲೆಗಳನ್ನು ಒದಗಿಸುವಂತೆ ಕೇಳಲಾಗಿದೆ.
ಪ್ರಕರಣದ ಹಿನ್ನೆಲೆ:
ಈ ವಿವಾದವು ಮಾಜಿ ನೈರ್ಮಲ್ಯ ಕಾರ್ಮಿಕ ಸಿ.ಎನ್. ಚಿನ್ನಯ್ಯ ಅವರ ಆರೋಪಗಳಿಂದ ಹುಟ್ಟಿಕೊಂಡಿತು. ಅವರು ಕಳೆದ ಎರಡು ದಶಕಗಳಲ್ಲಿ ಧರ್ಮಸ್ಥಳದಲ್ಲಿ ಹಲವಾರು ಮೃತದೇಹಗಳನ್ನು, ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರ ದೇಹಗಳೂ ಸೇರಿ, ಸಾಮೂಹಿಕವಾಗಿ ಹೂಳಲಾಗಿದೆ ಎಂದು ಆರೋಪಿಸಿದ್ದರು. ನಂತರ ಚಿನ್ನಯ್ಯನನ್ನು ಸುಳ್ಳು ಸಾಕ್ಷ್ಯ ನೀಡಿದ ಆರೋಪದ ಮೇಲೆ ಬಂಧಿಸಲಾಯಿತು. ರಾಜ್ಯ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡ (SIT) ನೇತ್ರಾವತಿ ನದಿ ದಡದಲ್ಲಿ ಹಲವಾರು ಸ್ಥಳಗಳಲ್ಲಿ ಉತ್ಪನನ ನಡೆಸಿದ್ದು, ಎರಡು ಸ್ಥಳಗಳಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ.