ಕನೌಜ್ : ಉತ್ತರ ಪ್ರದೇಶದ ಕನೌಜ್ ನಲ್ಲಿ ನಡೆದ ಅಸಾಮಾನ್ಯ ವಿದ್ಯಮಾನವೊಂದರಲ್ಲಿ, ವಿವಾಹಿತ ವ್ಯಕ್ತಿಯೊಬ್ಬ ತನ್ನ ಪತ್ನಿಯ ತಂಗಿಯನ್ನು ಮದುವೆಯಾಗುವಂತೆ ಒತ್ತಾಯಿಸಿ ವಿದ್ಯುತ್ ಗೋಪುರ ಏರಿ ಗದ್ದಲ ಎಬ್ಬಿಸಿದ ಆರೋಪಿತ ಘಟನೆ ನಡೆದಿದೆ ಎಂದು ವರದಿಯಾಗಿದೆ.
ರಾಜ್ ಸಕ್ಸೇನಾ ಎಂಬಾತ 2021 ರಲ್ಲಿ ಒಬ್ಬ ಮಹಿಳೆಯನ್ನು ವಿವಾಹವಾಗಿದ್ದ. ಆದರೆ ಮದುವೆಯಾಗಿ ಒಂದು ವರ್ಷದ ನಂತರ ಅವಳು ಅನಾರೋಗ್ಯದಿಂದ ಮೃತಪಟ್ಟಳು. ಅದರ ನಂತರ ಆತ ತನ್ನ ಮೃತ ಪತ್ನಿಯ ಸಹೋದರಿಯನ್ನೇ ವಿವಾಹವಾಗಿದ್ದಾನೆ. ಎರಡು ವರ್ಷಗಳ ನಂತರ, ಆತ ಅವಳ ಎರಡನೇ ಸಹೋದರಿಯನ್ನು ತನಗೆ ಮದುವೆ ಮಾಡಿಕೊಡುವಂತೆ ಒತ್ತಾಯಿಸಿದ್ದಾನೆ.
ಗುರುವಾರ ಬೆಳಿಗ್ಗೆ, ಆತ ತನ್ನ ಹೆಂಡತಿಗೆ ಆಕೆಯ ಸಹೋದರಿಯನ್ನು ಮದುವೆಯಾಗಲು ಬಯಸುವುದಾಗಿ ಹೇಳಿದ್ದಾನೆ. ಆಕೆ ಈ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ ರಾಜ ಸಕ್ಸೇನಾ ಬಾಲಿವುಡ್ ಚಿತ್ರ “ಶೋಲೆ” ಸಿನೆಮಾದ ದೃಶ್ಯದಂತೆ ವಿದ್ಯುತ್ ಟವರ್ ಹತ್ತಿ ಆಕೆಯನ್ನು ಮದುವೆಯಾಗುವುದಾಗಿ ಕೂಗಲು ಪ್ರಾರಂಭಿಸಿದ್ದಾನೆ. ನಂತರ ಮಾಹಿತಿ ತಿಳಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಆತನ ಕುಟುಂಬ ಸದಸ್ಯರು ಅಲ್ಲಿಗೆ ಬಂದಿದ್ದಾರೆ. ಅವರು ಆತನಿಗೆ ವಿದ್ಯುತ್ ಟವರ್ನಿಂದ ಕೆಳಗಿಳಿಯುವಂತೆ ಮನವೊಲಿಸಲು ಪ್ರಯತ್ನಿಸಿದರು. ಸುಮಾರು ಏಳು ಗಂಟೆಗಳ ಸತತ ಪ್ರಯತ್ನದ ನಂತರ ಆತನ ಜೊತೆ ಪತ್ನಿಯ ಸಹೋದರಿಯನ್ನು ಮದುವೆ ಮಾಡುವುದಾಗಿ ಭರವಸೆ ನೀಡಿದ ನಂತರ ಆತ ಟವರ್ನಿಂದ ಕೆಳಗೆ ಇಳಿದಿದ್ದಾನೆ ಎಂದು ಹೇಳಲಾಗಿದೆ.