ಬೆಳ್ತಂಗಡಿ: ಧರ್ಮಸ್ಥಳ ಗ್ರಾಮ ದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿದ್ದ “ಬುರುಡೆ’ ಪ್ರಕರಣದ ಪ್ರಮುಖ ಪಾತ್ರಧಾರಿ ಚಿನ್ನಯ್ಯನ ಮೇಲೆಯೇ ಸೂತ್ರ ಧಾರಿಗಳು ಹಲ್ಲೆ ನಡೆಸಿದ್ದರು ಎಂಬ ವಿಷಯ ಎಸ್ಐಟಿ ತನಿಖೆ ವೇಳೆ ಬಹಿರಂಗವಾಗಿದೆ ಎನ್ನ ಲಾಗಿದೆ. ತಮಗೆ ಬೇಕಾದ ರೀತಿಯಲ್ಲಿ ಪಾತ್ರಧಾರಿಯ ಪಾತ್ರ ಸಾಗುತ್ತಿಲ್ಲ ಎಂಬುದೇ ಹಲ್ಲೆ ನಡೆಸಲು ಕಾರಣ ಎನ್ನಲಾಗುತ್ತಿದೆ.
ಆ. 22ರಂದು ಬೆಳಗ್ಗೆ ಎಸ್ಐಟಿ ತಂಡ ವಿಚಾ ರಣೆಗೆ ವಶಕ್ಕೆ ಪಡೆದು ಚಿನ್ನಯ್ಯನ ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ಬೆನ್ನು, ಕುತ್ತಿಗೆ ನೋವಿನ ಬಗ್ಗೆ ತಿಳಿಸಿದ್ದ. ಅನಂತರ ವಿಚಾರಣೆ ಸಂದರ್ಭ ಈ ವಿಷಯವನ್ನು ಎಸ್ಐಟಿ ತಂಡ ಕೆದಕಿದಾಗ ಒಂದೊಂದೇ ವಿಷಯ ಬಹಿರಂಗಪಡಿಸಿದ್ದ.
ಹಿಂದಿನ ದಿನ ಅಂದರೆ ಆ. 21ರ ರಾತ್ರಿ ತಿಮರೋಡಿಯ ಮನೆಯಲ್ಲಿ ಚಿನ್ನಯ್ಯನ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ಆತ ತೀವ್ರವಾಗಿ ನೊಂದಿದ್ದ. ಬದುಕುವುದಕ್ಕೆ ಬೇರೆ ದಾರಿ ಕಾಣದೆ ತಾನು ಪಾತ್ರಧಾರಿ ಯಾಗಿರುವ ವಿಷಯವನ್ನು ಎಸ್ಐಟಿ ಮುಂದೆ ಹೇಳಿದ್ದ. ಆದರೂ ಆ ದಿನ ಎಸ್ಐಟಿ ತಂಡವು ಚಿನ್ನಯ್ಯನನ್ನು ವಿಚಾರಣೆ ನಡೆಸಿ ವಾಪಸ್ ಬಿಟ್ಟಿತ್ತು. ಆ. 22ರಂದು ಕೂಡ ತೀವ್ರ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿ ಆ. 23ರಂದು ಬಂಧಿಸಿತ್ತು.
ಮಂಗಳವಾರ ಶೋಧ ನಡೆಸಿದ್ದ ಎಸ್ಐಟಿ, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಸಹೋದರ ಮೋಹನ್ ಶೆಟ್ಟಿ ಮನೆಯಿಂದ ಮಹತ್ವದ ದಾಖಲೆಗಳು ಮತ್ತು ಮಾರ ಕಾಸ್ತ್ರ ವಶಪಡಿಸಿಕೊಂಡಿದೆ. 2 ತಲವಾರು ಮತ್ತು ಒಂದು ಗನ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಹಲವರಿಗೆ ನಡುಕ
ಧರ್ಮಸ್ಥಳ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ವಿಚಾರಣೆಯನ್ನು ತೀವ್ರಗೊಳಿಸಿದೆ. ಬುಧವಾರ ಮತ್ತು ಗುರುವಾರ ಎರಡೂ ದಿನ ಚಿನ್ನಯ್ಯ ಹಾಗೂ ಸುಜಾತಾ ಭಟ್ ಅವರನ್ನು ತೀವ್ರ ವಿಚಾರಣೆ ನಡೆಸಿದ್ದು, ಹಲವಾರು ವಿಷಯಗಳು ಬಹಿರಂಗವಾಗಿವೆ ಎಂದು ತಿಳಿದುಬಂದಿದೆ. ಸಮರ್ಪಕವಾದ ದಾಖಲೆ ಇರಿಸಿಕೊಂಡು ಮುಂದಿನ ಹಂತದ ಕಾರ್ಯಾಚರಣೆಗೆ ಎಸ್ಐಟಿ ರೂಪುರೇಷೆ ಸಿದ್ಧಪಡಿಸುತ್ತಿದೆ.
ಚಿನ್ನಯ್ಯ ಹಲವಾರು ವಿಷಯಗಳನ್ನು ಬಾಯಿ ಬಿಟ್ಟ ಬಳಿಕ ಹಲವರಿಗೆ ನಡುಕ ಆರಂಭವಾಗಿದೆ. ಜೈಲಿಗೆ ಹೋಗಲೂ ಸಿದ್ಧ ಎಂದಿದ್ದ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಸಹಿತ ಹಲವರು ಪ್ರಸ್ತುತ ಬೇರೆಡೆಗೆ ಹೋಗಿರುವ ಕುರಿತು ಮಾಹಿತಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ತನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳದಲ್ಲಿ ನಾಪತ್ತೆ ಯಾಗಿದ್ದಾರೆಂದು ಹೇಳಿ ಕೊಂಡಿದ್ದ ಸುಜಾತಾ ಭಟ್ ಅವ ರನ್ನು ಕೂಡ ಎರಡು ದಿನಗಳಲ್ಲಿ ಎಸ್ಐಟಿ ತಂಡ ತೀವ್ರ ವಿಚಾ ರಣೆ ನಡೆಸಿದ್ದು, ಹಲವಾರು ಮಾಹಿತಿಗಳನ್ನು ಕಲೆ ಹಾಕಿದ್ದಾರೆ.ಮಾತ್ರ ವಲ್ಲದೆ ಚಿನ್ನಯ್ಯ ಎಂಬ ಪಾತ್ರ ಸೃಷ್ಟಿಸುವ ಸಲುವಾಗಿ ಸಿದ್ಧಪಡಿಸಿದ್ದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ತಿಮರೋಡಿ ಮಹೇಶ್ ಶೆಟ್ಟಿ ಮನೆಯಲ್ಲಿ ಹೋರಾಟಕ್ಕಾಗಿ ಸಂಗ್ರಹಿಸಿಟ್ಟ ದಾಖಲೆ ಪತ್ರಗಳು, ಧರ್ಮಸ್ಥಳಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳು, ಸಿಸಿಟಿವಿ ಹಾರ್ಡ್ಡಿಸ್ಕ್, ಮಹೇಶ್ ಶೆಟ್ಟಿ ಪತ್ನಿ ಮತ್ತು ಇಬ್ಬರು ಮಕ್ಕಳ ಮೊಬೈಲ್ ಫೋನ್ಗಳನ್ನು ಎಸ್ಐಟಿ ವಶಕ್ಕೆ ಪಡೆದಿದೆ. ಸಹೋದರ ಮೋಹನ್ ಶೆಟ್ಟಿ ಮನೆಯಿಂದಲೂ ಲ್ಯಾಪ್ಟಾಪ್, ಹಾರ್ಡ್ ಡಿಸ್ಕ್, ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ದಾಖಲೆಗಳನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದೆ. ಶೀಘ್ರದಲ್ಲೇ ಇಬ್ಬರಿಗೂ ವಿಚಾರಣೆಗೆ ಹಾಜರಾಗಲು ಎಸ್ಐಟಿ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದೆ.