ಮೂಡಲಗಿ: ಶಿಕ್ಷಣ ಎನ್ನುವುದು ಬಹಳ ಮಹತ್ವದ ಸಂಗತಿ ನಾವು ಎಷ್ಟು ಆಸ್ತಿ ಗಳಿಸಿದರು ಕೂಡ ಯಾವುದಾದರೂ ರೂಪದಲ್ಲಿ ಅದನ್ನು ಕಳೆದುಕೊಳ್ಳುತ್ತೇವೆ. ಆದರೆ ಕಲಿತ ವಿದ್ಯೆಯನ್ನು ಸಾಯುವವರೆಗೆ ಕಳೆದುಕೊಳ್ಳಲು ಸಾಧ್ಯವಿಲ್ಲ ಅದನ್ನು ನಾವು ಜೀವನ ಪರ್ಯಂತ ಉಪಯೋಗ ಮಾಡಿಕೊಳ್ಳಬಹುದು ಹೀಗಾಗಿ ಶಿಕ್ಷಣಕ್ಕೆ ಬಹಳ ಮಹತ್ವ ಕೊಡಬೇಕಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಮಂಗಳವಾರ ಆ-26 ರಂದು ಧರ್ಮಟ್ಟಿ ಗ್ರಾಮದ ಧರ್ಮಟ್ಟಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ 10 ಲಕ್ಷ.ಗಳ ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.
ಈಗಿನ ಉದ್ಯೋಗದಲ್ಲಿ ವಿದ್ಯಾರ್ಥಿಗಳು ಯಾವ ರೀತಿ ಮುಂದುವರಿಯಬೇಕು ಎಂಬ ಜ್ಞಾನವನ್ನು ನೀಡಬೇಕಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಮಕ್ಕಳು ಅವರ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಪಡೆಯಬಹುದು. ಇದರಿಂದ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯ. ಹೊಸ ಹೊಸ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಓದುವ ಹವ್ಯಾಸವನ್ನು ಬೆಳೆಸಿದರೆ ಹೊರಗಿನ ಜಗತ್ತು ಅರಿಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ನೌಕರಿಗೋಸ್ಕರ ವಿದ್ಯಾಭ್ಯಾಸ ಮಾಡದೆ ಒಕ್ಕಲುತನದ ಕಡೆಗೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಪ್ರಸಾರಕ ಮಂಡಳಿಯು ಬಹಳ ವರ್ಷಗಳಿಂದ ಧರ್ಮಟ್ಟಿ ಅಂತಹ ಒಂದು ಸಣ್ಣ ಗ್ರಾಮದಲ್ಲಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ನಮ್ಮ ಧರ್ಮಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತಾಪಿ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದು ಆ ಸಂಸ್ಥೆಗೆ ಸುದೈವದಿಂದ ಸಂಸದರ ಅನುದಾನ ನೀಡಿದ್ದೇನೆ ಎಂದರಲ್ಲದೇ ಗ್ರಾಮೀಣ ಪ್ರದೇಶದಲ್ಲಿನ ಶಾಲಾ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಒದಗಿಸಲಾಗುತ್ತಿದೆ.
ಕಳೆದ 5 ವರ್ಷಗಳಲ್ಲಿ ನಾನು ಅರಭಾವಿ ವಿಧಾನಸಭಾ ಕ್ಷೇತ್ರದಲ್ಲಿ 10 ಕೋಟಿಗೂ ಅಧಿಕ ಸಂಸದರ ಅನುದಾನವನ್ನು ವಿನಿಯೋಗ ಮಾಡಿದ್ದೇನೆ. ಮುಂಬರುವ ದಿನಗಳಲ್ಲಿ ಗ್ರಾಮದ ಅಭಿವೃದ್ದಿ ಕಾರ್ಯಗಳಿಗೆ ನನ್ನ ಸಹಕಾರ ಇದ್ದೇ ಇರುತ್ತದೆ ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರಸಾರಕ ಮಂಡಳಿಯ ಅಧ್ಯಕ್ಷರು ಹಾಗೂ ಮಾಜಿ ಸಂಸದರಾದ ಅಮರಸಿಂಹ ಪಾಟೀಲ್ (ಬ್ಯಾರಿಸ್ಟರ್), ಪಿ.ಕೆ.ಪಿ.ಎಸ್ ಅಧ್ಯಕ್ಷ ಸಿಂಧೂರ ಕೊರಕಪೂಜೇರಿ, ಮನೋಹರ ಜೋಶಿ, ಶಿವರುದ್ರಪ್ಪ ಕುಂಬಾರ, ಲಕ್ಷ್ಮಣ ಪೂಜೇರಿ, ಲಕ್ಕಪ್ಪ ಪೂಜೇರಿ, ಕೆಂಚಪ್ಪ ತಿಗಡಿ, ನಿಂಗಪ್ಪ ಸನದಿ, ವಿಠ್ಠಲ ಗೌಡರ, ಲಗಮಪ್ಪ ಗೌಡರ, ಷಣ್ಮುಖ ಕುಂಬಾರ, ಶಿವಾನಂದ ಪಾಟೀಲ, ವಿಠ್ಠಲ ಪೂಜೇರಿ, ಲಕ್ಕಪ್ಪಾ ಬಿ.ಪಾಟೀಲ, ಸಿದ್ದಪ್ಪ ಹಳ್ಳೂರ, ಈರಪ್ಪ ಢವಳೇಶ್ವರ, ಗುರು ಗಂಗಣ್ಣವರ, ಈಶ್ವರ ಗಾಡವಿ, ಪ್ರಾಚಾರ್ಯ ಎಸ್. ಎಸ್ ಚಿಪ್ಪಲಕಟ್ಟಿ ಸೇರಿದಂತೆ ಸ್ಥಳೀಯ ಮುಖಂಡರು, ಗ್ರಾಮಸ್ಥರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಣ ಎನ್ನುವುದು ಅತ್ಯಂತ ಮಹತ್ವದ ಸಂಗತಿ ಈರಣ್ಣ ಕಡಾಡಿ
