ಮಂಡಿ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ, ಸ್ಟಾಫ್ ನರ್ಸ್ ಒಬ್ಬರು ಪ್ರವಾಹ ಪೀಡಿತ ಪ್ರದೇಶದ ಅನಾರೋಗ್ಯ ಪೀಡಿತ ಎರಡು ತಿಂಗಳ ಶಿಶುವಿನ ಜೀವ ಉಳಿಸಲು ಉಕ್ಕಿ ಹರಿಯುತ್ತಿದ್ದ ಹೊಳೆ ದಾಟಲು ಜೋವದ ಹಂಗು ತೊರೆದು ತೋರಿದ ಧೈರ್ಯದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.
ಮಂಡಿ ಜಿಲ್ಲೆಯ ಸುಧಾರ ಪಂಚಾಯತ ವ್ಯಾಪ್ತಿಯ ಚೌಹರ್ಘಾಟಿಯಲ್ಲಿ ಈ ಘಟನೆ ಸಂಭವಿಸಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಂಚೂಣಿಯಲ್ಲಿರುವ ಕಾರ್ಮಿಕರು ಎದುರಿಸುತ್ತಿರುವ ಅಪಾಯಗಳ ಬಗ್ಗೆ ಇದು ಆತಂಕ ವ್ಯಕ್ತಪಡಿಸಿದ್ದರ ಜೊತೆಗೆ ಅವರ ಅದಮ್ಯ ಮನೋಭಾವಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.
ಟಿಕ್ಕರ್ ಗ್ರಾಮದ ನಿವಾಸಿ ಸ್ಟಾಫ್ ನರ್ಸ್ ಕಮಲಾ ಎಂಬವರು ಉಕ್ಕಿ ಹರಿಯುವ ಗರ್ ನಾಲಾದ ಬಂಡೆಗೆ ಒಂದು ತುದಿಯಿಂದ ಜಿಗಿದು ನೀರಿನಲ್ಲಿ ಮುಳುಗಿರುವ ಕಲ್ಲುಗಳ ಮೇಲೆ ಎಚ್ಚರಿಕೆಯಿಂದ ದಾಟಲು ಸಮತೋಲನ ಸಾಧಿಸಿದ್ದನ್ನು ವೀಡಿಯೊ ತೋರಿಸಿದೆ. ಹೊಳೆ ಉಕ್ಕಿ ಹರಿಯುತ್ತಿತ್ತು, ನೀರು ಯಾರನ್ನಾದರೂ ಕೊಚ್ಚಿ ಹೋಗಬಹುದಾದ ವೇಗದಲ್ಲಿ ಹರಿಯುತ್ತಿತ್ತು. ಇಂಥ ಸನ್ನಿವೇಶದಲ್ಲಿ ಅವರು ಜೀವದ ಹಂಗು ತೊರೆದು ಧೈರ್ಯ ತೋರಿದ್ದಾರೆ.
ಎರಡು ತಿಂಗಳ ಮಗುವಿಗೆ ಜೀವ ಉಳಿಸುವ ಇಂಜೆಕ್ಷನ್ ನೀಡಲು ಸುಧಾರ ಸಮುದಾಯ ಆರೋಗ್ಯ ಕೇಂದ್ರಕ್ಕೆ ತುರ್ತು ಕರೆ ಬಂದಾಗ ಅಪಾಯದ ಹೊರತಾಗಿಯೂ, ಕಮಲಾ ಅವರು ಅಪಾಯಕಾರಿಯಾಗಿ ತುಂಬಿ ಹರಿಯುತ್ತಿದ್ದ ಹೊಳೆಯನ್ನು ದಾಟಿ , ಮಗುವಿಗೆ ನಿರ್ಣಾಯಕ ಇಂಜೆಕ್ಷನ್ ನೀಡಿದರು. ಹಾಗೂ ನಂತರ ಅದೇ ದಾರಿಯಲ್ಲಿ ಆರೋಗ್ಯ ಕೇಂದ್ರಕ್ಕೆ ಮತ್ತೆ ವಾಪಸ್ಸಾದರು. ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಈ ಪ್ರದೇಶದಲ್ಲಿ ಪಾದಚಾರಿ ಸೇತುವೆಗಳು ಕೊಚ್ಚಿ ಹೋಗಿದ್ದರಿಂದ, ತನ್ನ ಕರ್ತವ್ಯಕ್ಕಾಗಿ ಹೋಗುವುದು ಅವರಿಗೆ ದೈನಂದಿನ ಹೋರಾಟವಾಗಿದೆ,
ಆದಾಗ್ಯೂ, ಆಕೆಯ ಕ್ರಮಗಳು ಅಪಾಯದಿಂದ ಮುಕ್ತವಾಗಿರಲಿಲ್ಲ, ಏಕೆಂದರೆ ಇದೇ ರೀತಿಯ ಪ್ರಯತ್ನಗಳು ಈ ಹಿಂದೆ ದುರಂತವಾಗಿದ್ದವು.
ಇತ್ತೀಚೆಗೆ, ಸೆರಾಜ್ನಲ್ಲಿ, ಇದೇ ರೀತಿಯ ಹೊಳೆಯನ್ನು ದಾಟುವಾಗ ಒಬ್ಬ ಪುರುಷ ಮತ್ತು ಮಹಿಳೆ ಕೊಚ್ಚಿಹೋದರು, ಆದರೆ ನಂತರ ಅವರನ್ನು ರಕ್ಷಿಸಲಾಯಿತು. ಮತ್ತೊಂದು ಘಟನೆಯಲ್ಲಿ, ಉಕ್ಕಿ ಹರಿಯುವ ನೀರಿನಲ್ಲಿ ಕೊಚ್ಚಿ ಹೋಗಿ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದರು.
ಪದ್ದಾರ್ ಉಪವಿಭಾಗದ ಅಡಿಯಲ್ಲಿರುವ ಚೌಹರ್ ಕಣಿವೆ ಮಂಡಿಯಲ್ಲಿ ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿದೆ. ಭಾರೀ ಮಳೆಯಿಂದಾಗಿ ವ್ಯಾಪಕ ನಾಶವಾಗಿದ್ದು, ಸಿಲ್ಬುಧಾನಿ ಮತ್ತು ತಾರ್ಸ್ವಾನ್ ಪಂಚಾಯತ್ಗಳಲ್ಲಿ ರಸ್ತೆಗಳು ಮತ್ತು ಪಾದಚಾರಿ ಸೇತುವೆಗಳು ಕೊಚ್ಚಿಹೋಗಿವೆ, ನಿವಾಸಿಗಳು ಮತ್ತು ಅಗತ್ಯ ಕಾರ್ಮಿಕರಿಗೆ ದೈನದಿಂದನ ಕೆಲಸ ಕಾರ್ಯಗಳಿಗೆ ಹೋಗಲು ಸುರಕ್ಷಿತ ಮಾರ್ಗಗಳಿಲ್ಲದಂತಾಗಿದೆ.
ಕಮಲಾ ಅವರ ಧೈರ್ಯ ಆನ್ಲೈನ್ನಲ್ಲಿ ಮೆಚ್ಚುಗೆ ಗಳಿಸಿದ್ದರೂ, ವೈರಲ್ ವೀಡಿಯೊವು ಮುಂಚೂಣಿ ಕಾರ್ಮಿಕರಿಗೆ ಮೂಲಸೌಕರ್ಯ ಮತ್ತು ಸುರಕ್ಷತೆಯ ಕೊರತೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದೆ.