ಮಂಡ್ಯ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದಾಗಿ ಹೇಳಿದ್ದ ಅನಾಮಿಕ ವ್ಯಕ್ತಿಯನ್ನು ಎಸ್ಐಟಿ ಅ ಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಈ ನಡುವೆ ಆತನ ಸ್ವಗ್ರಾಮ ಮಂಡ್ಯ ತಾಲೂಕಿನ ಚಿಕ್ಕಬಳ್ಳಿ ಗ್ರಾಮಸ್ಥರು ಸಂಭ್ರಮ ವ್ಯಕ್ತಪಡಿಸಿದರು. ಅನಾಮಿಕ ವ್ಯಕ್ತಿ ಚಿಕ್ಕಬಳ್ಳಿಯ ಸಿ.ಎನ್.ಚಿನ್ನಯ್ಯ ಎಂಬುದು ಬಹಿರಂಗಗೊಂಡಿದ್ದು, ಆತನಿಗೆ ಶಿಕ್ಷೆ ಆಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹಣಕ್ಕಾಗಿ ಈ ರೀತಿ ಕೆಲಸ ಮಾಡಿದ್ದಾನೆ. ಧರ್ಮಸ್ಥಳ ವಿರುದ್ಧ ಪಿತೂರಿ ನಡೆಸಿದವರಿಗೂ ಶಿಕ್ಷೆ ಆಗಲಿ ಎಂದಿದ್ದಾರೆ. ಗ್ರಾಮ ಬಿಟ್ಟು ಹೋದ ಮೇಲೆ ಆತ ಧರ್ಮಸ್ಥಳದಲ್ಲಿ ಕೆಲಸಕ್ಕೆ ಸೇರಿದ್ದ. ದುಡ್ಡಿನ ದುರಾಸೆಯಿಂದ ಕಳ್ಳತನ ಮಾಡುತ್ತಿದ್ದ. ಅಲ್ಲಿಂದ ಬಟ್ಟೆ ತೆಗೆದುಕೊಂಡು ಬಂದು ಗ್ರಾಮಸ್ಥರಿಗೆ ಕೊಟ್ಟು ಸ್ವಾಮಿಯವರು ಕೊಟ್ಟಿದ್ದಾರೆ ಎನ್ನುತ್ತಿದ್ದ. ಈತನ ಎಲ್ಲ ಆರೋಪಗಳು ಶುದ್ಧ ಸುಳ್ಳು. ಈತನ ಹಿಂದೆ ಯಾರೋ ಇದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಮೂಲತಃ ತಮಿಳುನಾಡಿನವನಾಗಿರುವ ಈತನ ಹೆತ್ತವರು 60 ವರ್ಷ ಗಳ ಹಿಂದೆಯೇ ಇಲ್ಲಿಗೆ ಬಂದು ನೆಲೆಸಿದ್ದರು ಎಂದು ತಿಳಿಸಿದ್ದಾರೆ.
ಶನಿವಾರ ಮುಸುಕುಧಾರಿಯ ಭಾವಚಿತ್ರವೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
‘ಧರ್ಮಧ ಮೇಲೆ ಆಪಾದನೆ ಮಾಡಲು ಹೋದವನಿಗೆ ತಕ್ಕ ಶಾಸ್ತಿಯಾಗಿದೆ. ಅದರಲ್ಲೂ ಮಂಜುನಾಥಸ್ವಾಮಿ ಮತ್ತು ಖಾವಂದರಿಗೆ ಕಳಂಕ ತರಲು ಹೊರಟ್ಟಿದ್ದ ಚಿನ್ನಯ್ಯ ತಾನೇ ಸೃಷ್ಟಿಸಿದ ಬಲೆಗೆ ಬಿದ್ದಿದ್ದಾನೆ’ ಎಂದು ಗ್ರಾಮಸ್ಥರು ಪ್ರತಿಕ್ರಿಯಿಸಿದರು.
ಇದೇ ರೀತಿ ಈತನ ಹಿಂದೆ ಇದ್ದು ಷಡ್ಯಂತ್ರ ರೂಪಿಸಿದವರಿಗೂ ತಕ್ಕ ಶಿಕ್ಷೆ ಆಗಬೇಕು. ಮನೆ-ಮನೆಯಲ್ಲೂ ಮಂಜುನಾಥಸ್ವಾಮಿಯ ಭಕ್ತರಿದ್ದಾರೆ. ಅವರ ಭಾವನೆಗೆ ಧಕ್ಕೆ ತಂದಿದ್ದಾನೆ. ಈತನ ಬಂಧನ ನಮ್ಮೆಲ್ಲರಿಗೂ ಸಂತಸ ತಂದಿದೆ ಎಂದು ಹೇಳಿದ್ದಾರೆ.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ‘ನಮಗೆಲ್ಲರಿಗೂ ನಿಜವಾಗಿ ಮಂಜುನಾಥನ ಮೇಲೆ ದೈವಭಕ್ತಿ ಇದೆ. ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಯಾರೋ ಒಬ ಅನಾಮಿಕ ಮಾಡಿದ ದೂರಿಗೆ ಸರ್ಕಾರ ತನಿಖೆ ನಡೆಸಲು ಎಸ್ಐಟಿ ರಚನೆ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.