ಸಂಕೇಶ್ವರ : ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆ, ಹುಕ್ಕೇರಿ ತಾಲೂಕು ವಿದ್ಯುಚ್ಛಕ್ತಿ ಸಹಕಾರಿ ಸಂಘ ಹಾಗೂ ಬಿಡಿಸಿಸಿ ಬ್ಯಾಂಕಿನಲ್ಲಿ ಕತ್ತಿ ಅವರು ಮಾಡಿರುವ ಅವ್ಯವಹಾರಗಳನ್ನು ಶೀಘ್ರವೇ ಜನರ ಮುಂದೆ ಇಟ್ಟು ಸರಕಾರದಿಂದ ತನಿಖೆ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ರವಿವಾರ ಸಂಕೇಶ್ವರದ ನೇಸರಿ ಗಾರ್ಡನಿನಲ್ಲಿ ರವಿವಾರ ನಡೆದ ಹುಕ್ಕೇರಿ ತಾಲೂಕು ಗ್ರಾಮೀಣ ವಿದ್ಯುಚ್ಛಕ್ತಿ ಸಹಕಾರಿ ಸಂಘದ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಬೆಳಗಾವಿ ಜಿಲ್ಲಾ ಕೇಂದ್ರ ಬ್ಯಾಂಕಿನ ಚುನಾವಣೆಯಲ್ಲಿ ರಮೇಶ ಕತ್ತಿ ಅವರಿಗೆ ಕೇವಲ ಒಬ್ಬ ಸಂಚಾಲಕರು ಮಾತ್ರ ಬೆಂಬಲ ನೀಡಿದ್ದರು. ಆದರೆ ನಾವೆಲ್ಲಾ ಸೇರಿ ಅವರನ್ನು ಜಿಲ್ಲಾ ಕೇಂದ್ರ ಬ್ಯಾಂಕಿಗೆ ಅಧ್ಯಕ್ಷರನ್ನಾಗಿ ಮಾಡಿದೆವು. ಅವರ ಆಡಳಿತಾವಧಿಯಲ್ಲಿ ತಾನೊಬ್ಬನೆ ಜಾಣ. ಉಳಿದವರು ಲೆಕ್ಕಕ್ಕಿಲ್ಲ ಎಂಬುವಂತೆ ಸರ್ವಾಧಿಕಾರಿಯಾಗಿ ವರ್ತಿಸಿದಾಗ ಅವರನ್ನು ಅಧ್ಯಕ್ಷಗಿರಿಯಿಂದ ಕೆಳಗಿಳಿಸಬೇಕಾಯಿತು.
ಇಡೀ ದೇಶದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಬೇರೆಯವರಿಗೆ ಮಾರ್ಗದರ್ಶಿಯಾಗಿದ್ದ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆ ಹಾಗೂ ಹುಕ್ಕೇರಿ ತಾಲೂಕು ಗ್ರಾಮೀಣ ವಿದ್ಯುಚ್ಛಕ್ತಿ ಸಹಕಾರಿ ಸಂಘಗಳು ಕಳೆದ 30 ವರ್ಷಗಳಿಂದ ಕತ್ತಿ ಕುಟುಂಬದ ದುರಾಡಳಿತದಿಂದ ತೀವ್ರ ಹಾನಿ ಅನುಭವಿಸಿ ಕೋಟ್ಯಂತರ ರೂಪಾಯಿಗಳ ಸಾಲವನ್ನು ಮಾಡಿಕೊಂಡಿವೆ.
ಹುಕ್ಕೇರಿ ತಾಲೂಕಿನ ಸಹಕಾರಿ ಸಂಸ್ಥೆಗಳಲ್ಲಿ, ಪುರಸಭೆಗಳಲ್ಲಿ, ಸಾರ್ವಜನಿಕವಾಗಿ ಏನೇ ಸಣ್ಣ ಕೆಲಸವಾಗಬೇಕಾದರೂ ವ್ಯಕ್ತಿಯೊಬ್ಬನ ಮನೆಯ ಮುಂದೆ ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಇಂಥ ಪರಿಸ್ಥಿಯಿಂದ ಹೊರ ಬಂದು ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ನೀಡಿದ ಮತಧಿಕಾರ ಬಳಸಿಕೊಂಡು ತಾಲೂಕಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನೆಲೆಸಬೇಕಾದ ಅವಶ್ಯಕತೆ ಇದೆ. ಬರುವ ಹುಕ್ಕೇರಿ ತಾಲೂಕು ಗ್ರಾಮೀಣ ವಿದ್ಯುಚ್ಛಕ್ತಿ ಸಹಕಾರಿ ಸಂಘದ ಚುನಾವಣೆಯಲ್ಲಿ ಇದನ್ನು ಬಳಸಿಕೊಂಡು ಹೊಸ ವ್ಯವಸ್ಥೆಗೆ ನಾಂದಿ ಹಾಡಬೇಕೆಂದು ಮನವಿ ಮಾಡಿದರು.
ಈ ಹಿನ್ನಲೆಯಲ್ಲಿ ಉತ್ತಮ, ಪಾರದರ್ಶಕ ಹಾಗೂ ಕ್ರೀಯಾಶೀಲ ಆಡಳಿತದ ಅವಶ್ಯಕತೆಯಿದ್ದು ಅದಕ್ಕಾಗಿ ಹುಕ್ಕೇರಿ ತಾಲೂಕು ಗ್ರಾಮೀಣ ವಿದ್ಯುಚ್ಛಕ್ತಿ ಸಹಕಾರಿ ಸಂಘದ ಚುನಾವಣೆಯಲ್ಲಿ ಅಪ್ಪಣ್ಣಗೌಡ ಪಾಟೀಲ ಅವರ ಪ್ಯಾನೆಲ್ನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ಸಹಕಾರಿ ಧುರೀಣ ರಿಷಬ್ ಪಾಟೀಲ ಅವರು, ದಿ. ಅಪ್ಪಣ್ಣಗೌಡ ಪಾಟೀಲ, ದಿ. ಬಸಗೌಡ ಪಾಟೀಲ ಅವರಂಥ ಪ್ರಾಮಾಣಿಕರು ಕಟ್ಟಿದ ಸಂಸ್ಥೆಗಳಿಂದ ಇಡೀ ತಾಲೂಕಿನ ಪ್ರತಿಯೊಂದು ಮನೆಯವರು ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ಅವರು ಕಟ್ಟಿದ ಸಹಕಾರಿ ಸಂಘಗಳು ಇಂದು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುತ್ತಿವೆ. ಇದಕ್ಕೆ ಕಾರಣರಾದವರನ್ನು ಮುಂದಿನ ಚುನಾವಣೆಯಲ್ಲಿ ಮನೆಗೆ ಕಳಿಸಬೇಕೆಂದು ಮನವಿ ಮಾಡಿದರು.
ಲಕ್ಷ್ಮಣರಾವ್ ಚಿಂಗಳೆ, ಸಂಕೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಮುಡಸಿ, ಹುಕ್ಕೇರಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವಿಜಯ ರವದಿ, ಬಸವರಾಜ ಮಟಗಾರ, ಜಯಗೌಡ ಪಾಟೀಲ, ಶಶಿರಾಜ ಪಾಟೀಲ, ರವೀಂದ್ರ ಹಿಡಕಲ್, ಅವಿನಾಶ ನಲವಡೆ, ದಿಲೀಪ ಹೊಮನಿ, ಮಹೇಶ ಹಟ್ಟಿಹೊಳಿ ಮುಂತಾದವರು ಉಪಸ್ಥಿತರಿದ್ದರು.