ಬೆಳಗಾವಿ : ಶ್ರೀ ಕ್ಷೇತ್ರ ಧರ್ಮಸ್ಥಳದ ಅಪಪ್ರಚಾರ, ಷಡ್ಯಂತ್ರ ದೂರವಾಗಿ, ಕ್ಷೇತ್ರದ ಶ್ರದ್ಧೆ ಭಕ್ತಿ ಹೆಚ್ಚಾಗಲಿ ಎಂಬ ಸಂಕಲ್ಪದೊಂದಿಗೆ ಸಾಮೂಹಿಕ ಶಿವಪಂಚಾಕ್ಷರಿ ಓಂ ನಮಃ ಶಿವಾಯ ನಾಮ ಜಪ ಪಠಿಸಲು ವಿಶ್ವ ಹಿಂದೂ ಪರಿಷತ್ ಕರೆ ನೀಡಿದೆ.
ಧರ್ಮಸ್ಥಳದ ಶ್ರೀ ಮಂಜುನಾಥನ ಶ್ರೀ ಕ್ಷೇತ್ರ ಕಳೆದ ಹಲವು ದಶಕಗಳಿಂದ ಸಹಸ್ರಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ, ನೂರಾರು ಧಾರ್ಮಿಕ ಕ್ಷೇತ್ರಗಳನ್ನು ಜೀರ್ಣೋದ್ದಾರಗೊಳಿಸುವ ಪವಿತ್ರ ಕಾರ್ಯವನ್ನು ಮಾಡಿಕೊಂಡು ಬಂದಿದೆ. ಜೊತೆಗೆ ಕ್ಷೇತ್ರದಲ್ಲಿ ನಿರಂತರ ಅನ್ನದಾನದ ಪುಣ್ಯ ಕಾರ್ಯ ಮಾಡುತ್ತಿದೆ. ರಾಜ್ಯ, ದೇಶ- ವಿದೇಶಗಳಿಂದ ಕೋಟ್ಯಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶಿವನ ದರ್ಶನ ಪಡೆದು ಧನ್ಯರಾಗುತ್ತಾರೆ. ನೂರಾರು ವರ್ಷಗಳ ಪರಂಪರೆ ಇರುವ ಒಂದು ನಂಬಿಕೆ ಶ್ರದ್ಧಾಕೇಂದ್ರವನ್ನು ಇವತ್ತು ಧರ್ಮ ವಿರೋಧಿ ಶಕ್ತಿಗಳು ವ್ಯಾಪಕವಾಗಿ ಷಡ್ಯಂತ್ರ ಮಾಡಿ ಅಪಪ್ರಚಾರವೆಸಗುವ ಮೂಲಕ ಕ್ಷೇತ್ರಕ್ಕೆ ಕೆಟ್ಟ ಹೆಸರು ತರುವ ಸಂಚು ನಡೆಸುತ್ತಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಪವಿತ್ರ ಶ್ರದ್ಧಾಕೇಂದ್ರವು ಧರ್ಮ ವಿರೋಧಿ ಶಕ್ತಿಗಳ ಷಡ್ಯಂತ್ರದಿಂದ ವ್ಯಾಪಕವಾಗಿ ಅಪಪ್ರಚಾರಕ್ಕೆ ಗುರಿಯಾಗಿದೆ. ಇಂತಹ ಷಡ್ಯಂತ್ರಗಳಿಗೆ ಸೋಲುಂಟಾಗಲು ಮತ್ತು ಆಪಪ್ರಚಾರ ಕೊನೆಯಾಗಿ ಕ್ಷೇತ್ರದಲ್ಲಿ ಶ್ರದ್ಧೆಭಕ್ತಿ ಬೆಳಗಿ ಶಾಂತಿ ನೆಲಸಲಿ ಎಂಬ ಸಂಕಲ್ಪದೊಂದಿಗೆ ಆ.18 ರ ಸೋಮವಾರದಿಂದ ಒಂದು ವಾರದ ಕಾಲ ಸಾಮೂಹಿಕ ಶಿವಪಂಚಾಕ್ಷರಿ ಓ ನಮಃ ಶಿವಾಯ ಜಪ ಅನುಷ್ಠಾನಕ್ಕೆ ಎಲ್ಲ ಭಕ್ತರಿಗೆ ವಿಶ್ವ ಹಿಂದೂ ಪರಿಷದ್ ಕರೆ ನೀಡಿದೆ. ರಾಜ್ಯದ ಎಲ್ಲಾ ಹಿಂದೂ ಸಂಘಟನೆಗಳು, ಧಾರ್ಮಿಕ ಸಂಘ ಸಂಸ್ಥೆಗಳು ಹಾಗೂ ಮತ ಮಂದಿರ, ಭಜನಾ ಮಂದಿರ, ದೇವಸ್ಥಾನ, ದೈವಸ್ಥಾನಗಳಲ್ಲಿ ಸಾಮೂಹಿಕವಾಗಿಯೂ ಮತ್ತು ಮನೆ ಮನೆಗಳಲ್ಲಿ ವೈಯಕ್ತಿಕವಾಗಿಯೂ ಶಿವಪಂಚಾಕ್ಷರಿ ಮಂತ್ರದ ಓಂ ನಮಃ ಶಿವಾಯ ನಾಮಜಪ ಮಾಡುವಂತೆ ಸರ್ವರಲ್ಲಿ ವಿನಂತಿ ಮಾಡುತ್ತಿದ್ದೇವೆ ಎಂದು ವಿಎಚ್ ಪಿಯ ಸಾಮಾಜಿಕ ಸಾಮರಸ್ಯ ಪ್ರಮುಖ ಕೃಷ್ಣ ಭಟ್, ಪ್ರಾಂತ ಉಪಾಧ್ಯಕ್ಷ ಶ್ರೀಕಾಂತ ಕದಂ, ಜಿಲ್ಲಾ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಜಿಲ್ಲಾ ಕಾರ್ಯದರ್ಶಿ
ಆನಂದ ಕರಲಿಂಗನ್ನವರ, ಜಿಲ್ಲಾ ಉಪಾಧ್ಯಕ್ಷ ಮುನಿಸ್ವಾಮಿ ಭಂಡಾರಿ, ನಗರ ಅಧ್ಯಕ್ಷ ಡಾ. ಬಸವರಾಜ ಬಾಗೋಜಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.