ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಗೆ ಒಂದು ತಿಂಗಳಿಗಿಂತ ಕಡಿಮೆ ಸಮಯ ಇರುವಾಗ, ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಮತ್ತು ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕರ್ನಾಟಕ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಸೇರಿದಂತೆ ಸಂಭಾವ್ಯ ಆಯ್ಕೆಗಳ ಕುರಿತು ಚರ್ಚೆಗಳು ಆರಂಭವಾಗಿದೆ.
ಮೂಲಗಳ ಪ್ರಕಾರ, ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ, ಸಿಕ್ಕಿಂ ರಾಜ್ಯಪಾಲ ಓಂ ಮಾಥುರ್ ಮತ್ತು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ ಸಿನ್ಹಾ ಕೂಡ ಉಪರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಗಳಲ್ಲಿ ಸೇರಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಶೇಷಾದ್ರಿ ಚಾರಿ ಅವರ ಉಮೇದುವಾರಿಕೆಯೂ ಚರ್ಚೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.ಚುನಾವಣೆ ಸೆಪ್ಟೆಂಬರ್ 9 ರಂದು ನಡೆಯಲಿದೆ.
ಮುಂದಿನ ಉಪರಾಷ್ಟ್ರಪತಿ ಅಭ್ಯರ್ಥಿ ತಮ್ಮ ಪಕ್ಷದಿಂದ ಹಾಗೂ ಪಕ್ಷ ಮತ್ತು ಆರ್ಎಸ್ಎಸ್ನ ಸಿದ್ಧಾಂತದೊಂದಿಗೆ ಬಲವಾಗಿ ಸಂಬಂಧ ಹೊಂದಿರುವ ಯಾರಾದರೂ ಆಗಿರುತ್ತಾರೆ ಎಂದು ಬಿಜೆಪಿ ನಾಯಕರು ಈ ಹಿಂದೆ ಸ್ಪಷ್ಟಪಡಿಸಿದ್ದರೂ ಸಹ, ಮುಂಬರುವ ಬಿಹಾರ ಚುನಾವಣೆಗಳನ್ನು ಪರಿಗಣಿಸಿ ಪ್ರಸ್ತುತ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ ಅವರನ್ನು ನಾಮನಿರ್ದೇಶಿತರನ್ನಾಗಿ ಪರಿಗಣಿಸಲಾಗುತ್ತಿದೆ.
ಕಳೆದ ಒಂದು ತಿಂಗಳಲ್ಲಿ ಹಲವಾರು ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್ಗಳು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜುಲೈ 21 ರಂದು ಜಗದೀಪ ಧನಕರ ಅವರು ಆರೋಗ್ಯ ಕಾರಣಗಳನ್ನು ನೀಡಿ ಅನಿರೀಕ್ಷಿತ ರಾಜೀನಾಮೆ ನೀಡಿದ ನಂತರ ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ಅನಿವಾರ್ಯವಾಯಿತು. ಧನಕರ ಅವರ ಅವಧಿ ಆಗಸ್ಟ್ 2027 ರಲ್ಲಿ ಕೊನೆಗೊಳ್ಳಬೇಕಿತ್ತು.
ಧನಕರ ಅವರ ಹಠಾತ್ ರಾಜೀನಾಮೆ ನಂತರ ಬಿಜೆಪಿ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿದೆ, ಏಕೆಂದರೆ ಪಕ್ಷ ಮತ್ತು ಮಾಜಿ ಉಪರಾಷ್ಟ್ರಪತಿಗಳ ನಡುವೆ ಸೃಷ್ಟಿಯಾಗಿದ್ದ ಅಪನಂಬಿಕೆ ಪುನರಾವರ್ತನೆಯಾಗಬೇಕೆಂದು ಅದು ಬಯಸುತ್ತಿಲ್ಲ. ಈ ಕಾರಣದಿಂದ ಅದು ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದೆ. ಉಪರಾಷ್ಟ್ರಪತಿಗಳಿಗೆ ಹೆಚ್ಚಿನ ಅಧಿಕಾರವಿಲ್ಲದಿರಬಹುದು ಆದರೆ ರಾಜ್ಯಸಭೆಯಲ್ಲಿನ ಕಾರ್ಯಕಲಾಪಗಳಿಗೆ ಸಂಬಂಧಿಸಿದ ಮೇಲ್ವಿಚಾರಣೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಹೊಣೆಗಾರಿಕೆ ಇರುತ್ತದೆ.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಆಡಳಿತ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ಅಧಿಕಾರ ನೀಡಿದೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅನುಕೂಲಕರ ಮುನ್ನಡೆ ಹೊಂದಿದ್ದರೂ, ಮುಂದಿನ ವಾರ ಬಿಜೆಪಿ ತನ್ನ ಉನ್ನತ ನಾಯಕರು ಮತ್ತು ನಿಕಟ ಮಿತ್ರಪಕ್ಷಗಳ ಬೃಹತ್ ಸಭೆಯನ್ನು ನಡೆಸಲು ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.ಮಳೆಗಾಲದ ಎರಡನೇ ಹಂತದ ಅಧಿವೇಶನ ಪುನರಾರಂಭವಾಗುವ ಮಂಗಳವಾರ ಸಂಸದೀಯ ಪಕ್ಷದ ಸಭೆಗೆ ಎಲ್ಲಾ ಎನ್ಡಿಎ ಸಂಸದರನ್ನು ಕರೆಯಲಾಗಿದೆ. ಪ್ರಧಾನಿ ಮೋದಿ ಸಂಸತ್ತಿನ ಸಭಾಂಗಣದಲ್ಲಿ ಶಾಸಕರನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಉಪರಾಷ್ಟ್ರಪತಿಗಳನ್ನು ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಆಯ್ಕೆ ಮಾಡುತ್ತಾರೆ, ಮೇಲ್ಮನೆಯ ನಾಮನಿರ್ದೇಶಿತ ಸದಸ್ಯರು ಸಹ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ಸಾಂವಿಧಾನಿಕ ನಿಬಂಧನೆಗಳ ಪ್ರಕಾರ, ಭಾರತದ ಪ್ರಜೆಯಾಗಿರದಿದ್ದರೆ, 35 ವರ್ಷ ವಯಸ್ಸನ್ನು ಪೂರ್ಣಗೊಳಿಸದಿದ್ದರೆ ಮತ್ತು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಲು ಅರ್ಹತೆ ಹೊಂದಿರದಿದ್ದರೆ ಒಬ್ಬ ವ್ಯಕ್ತಿಯನ್ನು ಉಪರಾಷ್ಟ್ರಪತಿಯಾಗಿ ಆಯ್ಕೆ ಮಾಡಲು ಸಾಧ್ಯವಿಲ್ಲ. ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಯಾವುದೇ ಅಧೀನ ಸ್ಥಳೀಯ ಪ್ರಾಧಿಕಾರದ ಅಡಿಯಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿದ್ದರೆ ಅವರು ಅರ್ಹರಲ್ಲ.