ವಿಧಾನಸೌಧ (ವಿಧಾನ ಪರಿಷತ್) : ಫೇಸ್ ರೆಕಗ್ನೀಷನ್ ಸಿಸ್ಟಮ್ (ಎಫ್ ಆರ್ ಎಸ್) ಜಾರಿಯಿಂದ ನಕಲಿ ಫಲಾನುಭವಿಗಳ ತಡೆಗೆ ಸಹಕಾರಿಯಾಗಲಿದೆ ಎಂದು ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸೋಮವಾರದಿಂದ ಆರಂಭಗೊಂಡ ಮಳೆಗಾಲದ ಅಧಿವೇಶನದ ವಿಧಾನ ಪರಿಷತ್ತಿನ ಕಲಾಪದ ಶೂನ್ಯ ವೇಳೆಯಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಕೇಳಿದ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಗರ್ಭಿಣಿ, ಬಾಣಂತಿಯರು, ಕಿಶೋರಿಯರು ಹಾಗೂ 6 ವರ್ಷದೊಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಕೆ ಸೇರಿದಂತೆ ಆರೋಗ್ಯದ ಮೇಲೆ ನಿಗಾ ವಹಿಸಲು ಫಲಾನುಭವಿಗಳಿಗೆ ಫೇಸ್ ಕ್ಯಾಪ್ಚರ್ ಮೂಲಕ ಸರಬರಾಜು ಮಾಡುವಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಕರ್ನಾಟಕದಲ್ಲಿ ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ. ಪಾರದರ್ಶಕತೆ ತರಲು ಇದು ಸಹಕಾರಿಯಾಗಲಿದೆ ಎಂದರು.
ಈ ತಂತ್ರಾಂಶದ ಜಾರಿಗೊಳಿಸಿದ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯ, ಪ್ರಸ್ತುತ ಶೇಕಡ 94.2 ರಷ್ಟು ಫಲಾನುಭವಿಗಳನ್ನು ಎಫ್ ಆರ್ಎಸ್ ಮೂಲಕ ನೋಂದಣಿ ಮಾಡುವ ಮೂಲಕ ಇಡೀ ದೇಶಕ್ಕೆ 2ನೇ ಸ್ಥಾನದಲ್ಲಿದೆ ಎಂದು ಸಚಿವರು ಉತ್ತರಿಸಿದರು.
ರಾಜ್ಯದ ಅಂಗನವಾಡಿ ಕೇಂದ್ರಗಳಿಂದ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಪೂರೈಕೆಯಾಗುತ್ತಿರುವ ಆಹಾರ ವ್ಯವಸ್ಥೆಗೆ ಮತ್ತಷ್ಟು ಪಾರದರ್ಶಕತೆ ತರಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಎಫ್ಆರ್ಎಸ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದರು.
ಎಫ್ಆರ್ಎಸ್ ಜಾರಿಯಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಕೆಲಸದ ಒತ್ತಡ ಜಾಸ್ತಿಯಾಗುತ್ತಿದೆ. ಹೀಗಾಗಿ ಅವರಿಗೆ ಚುನಾವಣೆ ಕೆಲಸಗಳಿಂದ ವಿನಾಯಿತಿ ನೀಡಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉತ್ತರಿಸಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಕಳೆದ ವರ್ಷ ಹೊಸ ಮೊಬೈಲ್ ಕೊಡಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜಂಟಿ ನಿರ್ದೇಶನದ ಮೇಲೆ ಎಫ್ಆರ್ಎಸ್ ಮೂಲಕ ಫಲಾನುಭವಿಗಳನ್ನು ಗುರುತಿಸಬೇಕು. ಎಫ್ಆರ್ಎಸ್ ಮೂಲಕ ಮೊಬೈಲ್ ಸಂಖ್ಯೆಯನ್ನು ಆಧಾರ್ ಸಂಖ್ಯೆಗೆ ಜೋಡಣೆ ಮಾಡದಿದ್ದರೆ, ಕೇಂದ್ರ ಸರ್ಕಾರದಿಂದ ಐಸಿಡಿಎಸ್ ಕಾರ್ಯಕ್ರಮಗಳಿಗೆ ಆಹಾರ ಪದಾರ್ಥಗಳು ಬರುವುದು ನಿಲ್ಲುತ್ತದೆ. ಹೀಗಾಗಿ ಫಲಾನುಭವಿಗಳಿಗೆ ಪಾರದರ್ಶಕವಾಗಿ ಆಹಾರ ತಲುಪಿಸುವ ಸಲುವಾಗಿ ಎಫ್ಆರ್ಎಸ್ ಜಾರಿ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಫ್ಆರ್ಎಸ್ ತಂತ್ರಜ್ಞಾನವನ್ನು ಮತ್ತಷ್ಟು ಸರಳಿಕರಿಸಲಾಗುವುದು ಎಂದರು.