ಸಕ್ಕರೆ ಖಾಯಿಲೆ ತಡೆಯಲು ಏನು ಮಾಡಬೇಕು ಎಂದು ಎಲ್ಲರಿಗೂ ಪ್ರಶ್ನೆಯಿದೆ. ಇದಕ್ಕೆ ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ ಹಿಂದೊಮ್ಮೆ ಸಂವಾದ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಲಹೆ ನೀಡಿದ್ದಾರೆ. ಅವರು ಮೂರು ಅಭ್ಯಾಸಗಳಿದ್ದರೆ ಔಷಧವಿಲ್ಲದೇ ಸಕ್ಕರೆ ಖಾಯಿಲೆ ದೂರ ಮಾಡಬಹುದು ಎಂದಿದ್ದಾರೆ. ಅವುಗಳು ಯಾವುವು ನೋಡಿ.
ಡಾ ಸಿಎನ್ ಮಂಜುನಾಥ ಅವರ ಪ್ರಕಾರ, ಸಕ್ಕರೆ ಖಾಯಿಲೆ ಇರುವವರ ಸಂಖ್ಯೆ 7 ಕೋಟಿಗೂ ಅಧಿಕ. ಸಕ್ಕರೆ ಖಾಯಿಲೆಯ ಗಡಿಯಲ್ಲಿರುವವರ ಸಂಖ್ಯೆಯೂ ಇಷ್ಟೇ ಇದೆ. ಹೀಗಾಗಿ ಸಕ್ಕರೆ ಖಾಯಿಲೆ ಬರದಂತೆ ನಾವು ತಡೆಯಬೇಕಾಗಿರುವುದು ತುಂಬಾ ಮುಖ್ಯ.
ನಾವು ಸಾಮಾನ್ಯವಾಗಿ ಔಷಧಿ ಎಂದರೆ ವೈದ್ಯರ ಬಳಿ ಹೋಗಿ ಬಾಟಲಿಯಲ್ಲಿ ಸಿಗುವುದೇ ಔಷಧಿ ಎಂದುಕೊಳ್ಳುತ್ತೇವೆ. ಯಾವುದಾದರೂ ಖಾಯಿಲೆ ಬಂದಾಗ ವೈದ್ಯರು ಔಷಧಿ ಕೊಡುತ್ತಾರೆ. ಆದರೆ ಅದು ನಿಜವಾದ ಔಷಧಿಯಲ್ಲ. ಖಾಯಿಲೆ ಬರದಂತೆ ನಾವು ನೋಡಿಕೊಳ್ಳುವುದು ಮತ್ತು ಅಂತಹ ಜೀವನ ಶೈಲಿ ರೂಢಿಸಿಕೊಳ್ಳುವುದೇ ನಿಜವಾದ ಔಷಧಿ.
ವಿಶೇಷವಾಗಿ ಸಕ್ಕರೆ ಖಾಯಿಲೆ ಬರದಂತೆ ನಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳುವುದು ತುಂಬಾ ಮುಖ್ಯ. ಸಕ್ಕರೆ ಖಾಯಿಲೆ ಬರದಂತೆ ತಡೆಯಬೇಕೆಂದರೆ ಮುಖ್ಯವಾಗಿ ಮೂರು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಮೊದಲನೆಯದಾಗಿ ವಾಕಿಂಗ್. ಪ್ರತಿನಿತ್ಯ ನಿಯಮಿತವಾಗಿ ಒಂದಷ್ಟು ಹೊತ್ತು ವಾಕಿಂಗ್ ಮಾಡುವುದು ಸಕ್ಕರೆ ಖಾಯಿಲೆಯನ್ನು ದೂರ ಮಾಡುತ್ತದೆ. ಎರಡನೆಯದ್ದು ಸುಖವಾದ ನಿದ್ರೆ. ಆರೋಗ್ಯಕರವಾದ ನಿದ್ರೆ ಯಾವುದೇ ಖಾಯಿಲೆಯನ್ನು ದೂರ ಮಾಡಬಹುದು. ಮೂರನೆಯದ್ದು ಉಪವಾಸ. ಅಪರೂಪಕ್ಕೆ ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಊಟ ಬಿಡುವುದು ಆರೋಗ್ಯಕ್ಕೆ ಉತ್ತಮ. ಈ ಮೂರು ಅಭ್ಯಾಸಗಳಿಂದ ಸಕ್ಕರೆ ಖಾಯಿಲೆ ದೂರಮಾಡಬಹುದು ಎನ್ನುತ್ತಾರೆ ಡಾ. ಮಂಜುನಾಥ.