ಹಿಂದೂ ಹಬ್ಬಗಳು ಭಾರತೀಯ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವಿದ್ದಂತೆ. ಅವುಗಳ ಆಚರಣೆಗಳು ಸಹ ವೈವಿಧ್ಯಮಯವಾಗಿವೆ. ಇಲ್ಲಿನ ಪ್ರತಿಯೊಂದು ಹಬ್ಬವು ತನ್ನದೇ ಆದ ವಿಶೇಷತೆ ಮತ್ತು ಮಹತ್ವವನ್ನು ಹೊಂದಿರುತ್ತದೆ. ಅಂತೆಯೇ ನಾಗರ ಪಂಚಮಿ ಕಳೆದು ಶ್ರಾವಣ ಶುದ್ಧ ಪೂರ್ಣಿಮೆಯಂದು ನಡೆಯುವ ಪವಿತ್ರ ಹಬ್ಬ ರಕ್ಷಾಬಂಧನ. ಈ ರಕ್ಷಾಬಂಧನ ಆಚರಣೆ ಅತ್ಯಂತ ಅರ್ಥಪೂರ್ಣ ಮತ್ತು ಸಮಾಜಮುಖಿ ಚಿಂತನೆಯನ್ನು ಸಾರುವಂತದ್ದು. ಸಮಾಜದ ಸ್ತ್ರೀ ಪುರುಷರಲ್ಲಿ ಪರಸ್ಪರ ಸೋದರ ಸೋದರಿಯರ ಪವಿತ್ರ ಸಂಬಂಧವನ್ನು ಭದ್ರಗೊಳಿಸುವ ಸಂಕೇತ ಈ ರಕ್ಷಾ ಬಂಧನ. ಉತ್ತರ ಭಾರತದಲ್ಲಂತೂ ರಕ್ಷಾ ಬಂಧನದ ಆಚರಣೆ ವಿಶೇಷವಾಗಿ ನಡೆಯುತ್ತದೆ. ಅಲ್ಲಿ ರಾಕಿ ಕಾ ತ್ಯೋಹಾರ ಎಂದು ಕರೆಯುತ್ತಾರೆ. ಈ ಹಬ್ಬದಂದು ಸೋದರಿಯರು ಸೋದರರರಿಗೆ ರಾಕಿ ಕಟ್ಟಿ ಸಿಹಿತಿನಿಸಿ ಸಂಭ್ರಮಿಸುತ್ತಾರೆ.
ಪುರಾಣಗಳಲ್ಲಿಯೂ ರಕ್ಷಾ ಬಂಧನದ ಉಲ್ಲೇಖಗಳು ನಮಗೆ ಕಾಣಸಿಗುತ್ತವೆ. ಹಿಂದೆ ದೇವತೆಗಳಿಗೂ ರಾಕ್ಷಸರಿಗೂ ಭಯಂಕರ ಯುದ್ಧಗಳು ಸಂಭವಿಸಿದಾಗ ದೇವರಾಜನಾದ ಇಂದ್ರನು ಸೋತು ಓಡಿ ಹೋಗುವ ಪ್ರಸಂಗ ಎದುರಾಗುತ್ತದೆ. ಆಗ ಇಂದ್ರನ ಪತ್ನಿ ಶಚಿದೇವಿಯು ರಕ್ಷಾಬಂಧನದ ವೃತದಂತೆ ಪತಿಗೆ ರಕ್ಷೆ ಕಟ್ಟಿ ಪುನಃ ಕಳಿಸುತ್ತಾಳೆ. ಪರಿಣಾಮ ಇಂದ್ರನು ಜಯಶಾಲಿಯಾಗಿದ್ದನು ಎಂದು ಹೇಳಲಾಗಿದೆ.
ಮಹಾಭಾರತದಲ್ಲಿ ಕುಂತಿಯು ತನ್ನ ಮಕ್ಕಳು ಯುದ್ಧಕ್ಕೆ ಹೊರಡುವ ಸಂದರ್ಭದಲ್ಲಿ ಅವರಿಗೆ ರಕ್ಷೆ ಕಟ್ಟುವ ಮೂಲಕ ಅವರ ಗೆಲುವಿಗೆ ಕಾರಣಳಾಗುತ್ತಾಳೆ. ಈ ಕಾರಣಕ್ಕಾಗಿ ವಿವಾಹ ಉಪನಯನ ಮೊದಲಾದ ಶುಭ ಸಂದರ್ಭಗಳಲ್ಲಿ ಯಾವುದೇ ತೊಡಕಾಗದಂತೆ ಕಂಕಣ ಕಟ್ಟುವ ಪದ್ಧತಿ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಕೆಲವು ಐತಿಹಾಸಿಕ ಘಟನೆಗಳು ಸಹ ರಕ್ಷಾ ಬಂಧನವನ್ನು ಅದರ ಮಹತ್ವವನ್ನು ಸಾರಿ ಹೇಳುತ್ತವೆ.
ಶತ್ರು ರಾಜನ ಮಗಳ ಕೈಯಿಂದ ರಾಕಿ ಕಟ್ಟಿಕೊಳ್ಳುವ ಮೂಲಕ ಅವರ ಸ್ನೆಹ ಬೆಳೆಸಿದಂತ ಅನೇಕ ಘಟನೆಗಳು ಇವೆ. ಇದಲ್ಲದೆ ರಕ್ಷೆ ಕಟ್ಟಿದ ತನ್ನ ಸೋದರಿಯರಿಗಾಗಿ ಪ್ರಾಣ ಬಿಟ್ಟ ಅದೆಷ್ಟೋ ರಾಜರೂ ಇದ್ದಾರೆ. ಕೆಲವು ಬಾರಿ ಅನ್ಯ ಧರ್ಮಿಯ ರಾಜರುಗಳಿಂದ ಆಕ್ರಮಣಗಳು ನಡೆದಾಗ ಅತ್ಯಾಚಾರಕ್ಕೊಳಗಾಗುವ ಭೀತಿಯಿಂದ ಕೆಲವು ಯುವತಿಯರು ಪುರುಷರಿಗೆ ರಕ್ಷೇ ಕಟ್ಟುವ ಮೂಲಕ ಅವರಿಂದ ತಮ್ಮ ರಕ್ಷಣೆ ಬೇಡಿ ತಮ್ಮ ಮಾನ ರಕ್ಷಣೆ ಮಾಡಿಕೊಳ್ಳುತ್ತಿದ್ದರು. ಅಂತ ಪವಿತ್ರ ಸ್ಥಾನ ರಕ್ಷೆಗಿದೆ.
ಸಾಮೂಹಿಕವಾಗಿ ಈ ರಕ್ಷಾಬಂಧನ ಹಬ್ಬವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಮಾತ್ರ ಇಂದಿಗೂ ಒಂದು ವೃತದಂತೆ ಉತ್ಸವದ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇಲ್ಲಿ ಸಹೋದರತೆ ಬಂಧುತ್ವ ಸಹಕಾರದ ಸಂಕೇತವಾಗಿ ಪವಿತ್ರ ಭಗವಾದ್ವಜದ ಅಡಿಯಲ್ಲಿ ಸಂಕಲ್ಪಮಾಡಿ ಪರಸ್ಪರ ರಕ್ಷೇ ಕಟ್ಟಿಕೊಳ್ಳುವ ಮೂಲಕ ದೇಶ ಧರ್ಮ ರಕ್ಷಣೆಯ ಸಂಕಲ್ಪ ಮಾಡಿ ಸಂಭ್ರಮಿಸುತ್ತಾರೆ.
ರಕ್ಷಣೆ, ಸ್ನೇಹ ಸೋದರತೆ ಬಂಧುತ್ವ, ದೇಶಪ್ರೇಮವನ್ನು ಸಾರುವ ಶ್ರೇಷ್ಠ ಮತ್ತು ಪವಿತ್ರ ರಕ್ಷಾ ಬಂಧನವನ್ನು ಮರೆತು ಸ್ನೇಹಿತರ ದಿನ, ಪ್ರೇಮಿಗಳ ದಿನ ಆದಿ ಈ ದಿನ ಎಂದೆಲ್ಲ ಪಾಶ್ಚಿಮಾತ್ಯರ ಕಡೆಗೆ ,ಸಮಾಜದ ಸ್ವಾಸ್ಥ್ಯ ಹಾಳುಗೆಡುವವರ ಕಡೆ ಮುಗಿಬೀಳುವವರು ರಕ್ಷಾಬಂಧನದ ಮಹತ್ವ ಅರಿಯದಿರುವುದು ನೋವಿನ ಸಂಗತಿಯಾಗಿದೆ. ಭಾರತೀಯ ಸಂಸ್ಕೃತಿ ಆಚರಣೆಯ ಅರಿವಿದ್ದು, ತಮ್ಮ ಅರಿವಿಗೆ ತಾವೇ ಬಂಧನಮಾಡಿಕೊಂಡು ಯಾವುದೋ ಆಸೆ ಲೋಭದಿಂದ ನಮ್ಮ ತನವನ್ನೇ ಮರೆಯುವುದು ಎಷ್ಟು ಸರಿ. ಇದು ನನ್ನ ದೇಶ ಧರ್ಮ ಈ ನೆಲಕ್ಕೆ ಮಾಡಿದ ಅಪಚಾರವಲ್ಲವೆ.
ಇಷ್ಟಕ್ಕೂ ರಕ್ಷೆ ಕಟ್ಟಿಕೊಳ್ಳುವುದರಿಂದ ಆಗುವ ನಷ್ಟವಾದರೂ ಏನು? ಯಾವುದೇ ಹಾನಿಯಿಲ್ಲದ ಮನೋವಿಕಾಶದ ಸೋದರತೆಯನ್ನು ಗಟ್ಟಿಗೊಳಿಸುವ ಪರಸ್ಪರ ವಿಶ್ವಾಸ ವೃದ್ಧಿಸುವ ಈ ರಕ್ಷಾಬಂಧನ ಆಚರಣೆ ಮತ್ತು ಅದರ ಮಹತ್ವ ತಿಳಿಸುವ ಕಾರ್ಯ ಪ್ರತಿ ಶಾಲಾ ಕಾಲೇಜುಗಳಲ್ಲಿ ಒಂದು ರಾಷ್ಟ್ರೀಯ ಹಬ್ಬ ಉತ್ಸವದ ರೀತಿಯಲ್ಲಿ ನಡೆಯಬೇಕಾದ ಅನಿವಾರ್ಯತೆ ಇದೆ. ಇವುಗಳನ್ನು ಪ್ರತಿಯೊಬ್ಬ ಪಾಲಕರು ಶಿಕ್ಷಕರು ತಿಳಿದುಕೊಂಡರೆ ಒಂದಷ್ಟು ಪರಿವರ್ತನೆ ನಮ್ಮಿಂದ ಸಾಧ್ಯ ಅನ್ನಿಸುತ್ತದೆ.
ಅಂತೆಯೇ ಜಾತಿ , ಭಾಷೆ ಪ್ರಾಂತಗಳ ಹೆಸರಿನಲ್ಲಿ ಸದಾ ಕಚ್ಚಾಡುವ, ಕ್ರೌರ್ಯವೇ ರಾರಾಜಿಸುತ್ತಿರುವ ವಿಕೃತಿಗಳ ನಡುವೆ, ಸಮಾಜದ ಏಕತೆ ನೆಮ್ಮದಿ ನುಚ್ಚು ನೂರಾಗುತ್ತಿರುವ ಇಂತಹ ಸಂಧಿಗ್ಥತೆಯ ಸಂಕೀರ್ಣತೆಯ ಸಂದರ್ಭದಲ್ಲಿ ದೇಶದಲ್ಲಿ ಅಷ್ಟೇ ಅಲ್ಲ, ಜಗತ್ತಿನಲ್ಲಿಯೇ ಪುನಃ ಶಾಂತಿ, ಸಹಕಾರ, ನಂಬಿಕೆ ನವೀನತೆಗಾಗಿ ಬಂದುತ್ವಕ್ಕಾಗಿ ಪಣ ತೊಡುವ ಸಂಕಲ್ಪ ಮಾಡಬೇಕಿದೆ. ಸ್ತ್ರೀಯರಿಗೆ ಅತ್ಯಂತ ಮಹತ್ವದ ಗೌರವ ನೀಡುವ ,ಸ್ನೇಹ ಸಂಜೀವಿನಿ ಮಂತ್ರದ ಸಂಕೇತವಾದ ಈ ರಕ್ಷಾ ಬಂಧನವನ್ನು ಧರ್ಮವೂ ಮೀರಿ ಎಲ್ಲೆಡೆಯೂ ಆಚರಿಸುವಂತೆ ಮಾಡೋಣ. ಮಾನವೀಯ ಮೌಲ್ಯ ಸಾರುವ ಈ ಪವಿತ್ರ ರಕ್ಷಾ ಬಂಧನವನ್ನ ರಾಷ್ಟ್ರೀಯ ಹಬ್ಬವಾಗಿ ಆಚರಿಸೋಣ.
ಲೇಖನ- ಉಮೇಶ ಮುಂಡಳ್ಳಿ ಭಟ್ಕಳ