ಬೆಳಗಾವಿಯ ಹಿರೇ ಬಾಗೇವಾಡಿ ಬಳಿ ಕನ್ನಡದ ವೀರ ವನಿತೆ ಹೆಮ್ಮೆಯ ರಾಣಿ ಚನ್ನಮ್ಮಳ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಪ್ರತಿಷ್ಠಿತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೈಜ ಸ್ಥಿತಿಯನ್ನು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿ ಅಧಿವೇಶನದಲ್ಲಿ ಎಳೆ ಎಳೆಯಾಗಿ ತೆರೆದಿಟ್ಟರು. ಅವರ ಮಾತಿಗೆ ಇಡೀ ಸದನವೇ ಒಂದು ಕ್ಷಣ ಮೂಕ ವಿಸ್ಮಿತವಾಯಿತು. ಹೆಬ್ಬಾಳ್ಕರ್ ಅವರು ಸರಕಾರದ ಧೋರಣೆ ವಿರುದ್ಧ ಸಿಡಿದೆದ್ದು ಮಂಗಳಾರತಿ ಮಾಡಿಸಿದರು. ಹೆಬ್ಬಾಳಕರವರ ಮಾತಿನಿಂದ ಸ್ವತಃ ಸರಕಾರ ಮುಖಭಂಗಕ್ಕೆ ಒಳಗಾಯಿತು. ಅಷ್ಟೊಂದು ಗಟ್ಟಿ ಧ್ವನಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಜನರಿಗಾದ ಅನ್ಯಾಯವನ್ನು ಸದನದಲ್ಲಿ ಮಂಡಿಸಿದರು
ಜನಜೀವಾಳ ಸುದ್ದಿಜಾಲ ಬೆಳಗಾವಿ :
ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಹಿರೇಬಾಗೇವಾಡಿ ಬಳಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಿರ್ಮಾಣವಾಗುತ್ತಿದೆ. ರೈತರ ಜಮೀನು ಖರೀದಿ ಮಾಡಿ ವಿಶ್ವವಿದ್ಯಾಲಯ ನಿರ್ಮಿಸಲಾಗುತ್ತಿದೆ ಎಂದು ಮೊದಲಿಗೆ ಹೇಳಿ ರೈತರಿಗೆ ಆಸೆ ತೋರಿಸಲಾಯಿತು.
ಎಕರೆಗೆ 40 ಲಕ್ಷ ರೂಪಾಯಿ ನೀಡಿ ನೂತನ ವಿಶ್ವವಿದ್ಯಾಲಯಕ್ಕೆ ಜಾಗ ಖರೀದಿಸಿ ನೂತನ ವಿಶ್ವವಿದ್ಯಾಲಯ ನಿರ್ಮಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ನಂತರ ಸರಕಾರ ರೈತರ ಜಮೀನು ಖರೀದಿ ಮಾಡದೆ ಸರಕಾರದ್ದೆ ಜಾಗ ಬಳಸಿಕೊಂಡು ಇದೀಗ ನೂತನ ವಿಶ್ವವಿದ್ಯಾಲಯ ನಿರ್ಮಿಸುತ್ತಿದೆ. ಇದರ ವಿರುದ್ಧ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೆಂಡಮಂಡಲವಾಗಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ಮಾತನಾಡಿದ ಅವರು, ಸರಕಾರದ ರೈತ ವಿರೋಧಿ ಧೋರಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅವರ ಮಾತಿಗೆ ಸ್ವತಃ ಉನ್ನತ ಶಿಕ್ಷಣ ಸಚಿವ ಅಶ್ವತ ನಾರಾಯಣ ದಿಗಿಲುಗೊಂಡರು. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಾತಿನ ವರಸೆ ನೋಡಿ ಎಲ್ಲಾ ಸದಸ್ಯರು ಒಂದು ಕ್ಷಣ ಮೂಕವಿಸ್ಮಿತವಾದ ಪ್ರಸಂಗ ನಡೆಯಿತು. ಅವರು ತಮ್ಮ ಮತಕ್ಷೇತ್ರದ ರೈತರಿಗೆ ಆದ ಅನ್ಯಾಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಸರಕಾರದ ದ್ವಿಮುಖ ಧೋರಣೆಯನ್ನು ಕಟುವಾಗಿ ಜರಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಅವರ ಗುಡುಗು ಸಿಡಿಲಿನ ಭಾಷಣ ಹೀಗಿತ್ತು ನೋಡಿ.: ಕ್ಷುಲ್ಲಕ ರಾಜಕಾರಣ ಮಾಡಲು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಹಿರೇ ಬಾಗೇವಾಡಿ ಬಳಿ ನೂತನ ವಿಶ್ವವಿದ್ಯಾಲಯ ನಿರ್ಮಾಣ ಮಾಡಲು ಸರಕಾರ ಮುಂದಾಯಿತೇ ? ಮಾನ್ಯ ಸಚಿವರು ಅಥವಾ ಬೇರೆಯವರ ಮಾತನ್ನು ಕೇಳಿ ಇಲ್ಲಿ ಉದ್ದೇಶಪೂರ್ವಕಾಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿದ್ದಾರೋ ನನಗೆ ಅರ್ಥವಾಗುತ್ತಿಲ್ಲ ? ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲ ಸಚಿವರೇ ಸ್ವತಃ ರೈತರಿಗೆ ವಿಶ್ವವಿದ್ಯಾಲಯಕ್ಕೆ ಅಗತ್ಯವಾದ ಜಮೀನನ್ನು 40 ಲಕ್ಷ ರೂಪಾಯಿಗೆ ಖರೀದಿ ಮಾಡಲಾಗುವುದು ಎಂದು ಪತ್ರವನ್ನೇ ಬರೆದು ಕೊಟ್ಟಿದ್ದರು. ನಂತರದ ದಿನಗಳಲ್ಲಿ ಅದೇ ವಿಶ್ವವಿದ್ಯಾಲಯದ ಕುಲಪತಿಗಳೇ ಇಲ್ಲಿಯ ರೈತರನ್ನು ಗೂಂಡಾಗಳು, ಕುಡುಕರು ಎಂದು ಸ್ವತಃ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಇಲ್ಲಿ ಕೆರೆ ತುಂಬುವ ಯೋಜನೆ ಬೇಡ, ಆದರೆ ವಿಶ್ವವಿದ್ಯಾಲಯ ಸ್ಥಾಪನೆ ಆದರೆ ನಮ್ಮ ಜಮೀನಿಗೆ ಉತ್ತಮ ಬೆಲೆ ಸಿಗಲಿದೆ ಎಂದು 10, 100 ರೈತರನ್ನೇ ನನ್ನ ಮೇಲೆ ಎತ್ತಿ ಕಟ್ಟಲಾಯಿತು. ಶಿಕ್ಷಣ ಸಚಿವರು ಶಿಕ್ಷಣಕ್ಕೆ ಎಷ್ಟು ಆದ್ಯತೆ ನೀಡುತ್ತಾರೋ ನನಗೆ ಗೊತ್ತಿಲ್ಲ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ನನ್ನ ಮತ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನಾನು ಆದ್ಯತೆ ನೀಡಿದ್ದನ್ನು ಎಲ್ಲರೂ ಗಮನಿಸಬಹುದು.
ಕೆರೆ ತುಂಬುವ ಯೋಜನೆಗೆ 100 ಕೋಟಿ ಮೀಸಲಿಡಲಾಗಿತ್ತು. ಇದೀಗ ರೈತರ, ಸಾಮಾನ್ಯ ಜನರ ತೆರಿಗೆ ಹಣವನ್ನು ಏನು ಮಾಡಲಾಗಿದೆ. 100 ಕೋಟಿ ಯೋಜನೆಯನ್ನೇ ಮೊಟಕುಗೊಳಿಸಲಾಯಿತು. ರೈತರು, ಜನ-ಜಾನುವಾರುಗಳಿಗೆ ನೀರು ಬೇಡವೇ ? ನಾನು ಯಾವುದೇ ರಾಜಕಾರಣ ಮಾಡುತ್ತಿಲ್ಲ. ಯೋಜನೆ ಜಾರಿಗೊಂಡರೆ ನನಗೆ ಹೆಸರು ಬರುತ್ತಿತ್ತು, ನನ್ನ ಕ್ಷೇತ್ರ ಅಭಿವೃದ್ಧಿ ಆಗುತ್ತಿತ್ತು. ಆದರೆ ಇಡೀ ಯೋಜನೆಯನ್ನೇ ಈಗ ಮೊಟಕು ಮಾಡಲಾಗಿದೆ. ಆ ಯೋಜನೆಯ ಹಣ ಏನಾಗಿದೆ.
ಸಚಿವರು ರಾಜಕಾರಣ ಮಾಡಿರುವುದಾದರೂ ಯಾಕೆ ? ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸದನದಲ್ಲಿ ಅತ್ಯಂತ ತರ್ಕಬದ್ಧವಾಗಿ ವಾದ ಮಂಡಿಸಿದರು. ಇಲ್ಲಿ ಸರ್ಕಾರ ರಾಜಕಾರಣಕ್ಕೆ ಮುಂದಾಗಿರುವುದು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಾತಿನಿಂದ ಬಹಿರಂಗಗೊಂಡಿತು.
ಹೆಬ್ಬಾಳಕರವರ ಮಾತಿನಿಂದ ಸ್ವತಃ ಸರಕಾರ ಮುಖಭಂಗಕ್ಕೆ ಒಳಗಾಯಿತು. ಅಷ್ಟೊಂದು ಗಟ್ಟಿ ಧ್ವನಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಜನರಿಗಾದ ಅನ್ಯಾಯವನ್ನು ಸದನದಲ್ಲಿ ಮಂಡಿಸಿದರು.