ಬೆಳಗಾವಿ: ಬೆಳಗಾವಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಬೆಳಗಾವಿಯಿಂದ ಬೆಂಗಳೂರಿಗೆ ವಂದೇ ಭಾರತ್ ರೈಲು ಆರಂಭಿಸಲು ಶತ ಪ್ರಯತ್ನ ನಡೆಸಿದ್ದರು. ಕೊನೆಗೂ ಅದಕ್ಕೆ ದಿನ ನಿಗದಿಯಾಗಿದೆ. ಈ ಬಗ್ಗೆ ಜಗದೀಶ್ ಶೆಟ್ಟರ್ ಹಾಗೂ ಈರಣ್ಣ ಕಡಾಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 10ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ದಕ್ಷಿಣ ಬೆಂಗಳೂರನ್ನು (ಎಲೆಕ್ಟ್ರಾನಿಕ್ ಸಿಟಿ) ನಗರದ ಕೇಂದ್ರಕ್ಕೆ ಸಂಪರ್ಕಿಸುವ ನಮ್ಮ ಮೆಟ್ರೊ ಹಳದಿ ಮಾರ್ಗಕ್ಕೆ (ಆರ್.ವಿ. ರಸ್ತೆ-ಬೊಮ್ಮಸಂದ್ರ) ಚಾಲನೆ ನೀಡಲಿದ್ದಾರೆ. ಇದೇ ವೇಳೆ ಮೂರು ವಂದೇ ಭಾರತ್ ರೈಲುಗಳಿಗೂ ಹಸಿರು ನಿಶಾನೆ ತೋರಲಿದ್ದಾರೆ.
ಕರ್ನಾಟಕ ಪ್ರವಾಸದಂದು ಮೋದಿ ಅವರು ಬೆಂಗಳೂರು-ಬೆಳಗಾವಿ, ನಾಗ್ಪುರದ ಅಜ್ನಿ-ಪುಣೆ ಹಾಗೂ ಅಮೃತಸರ-ಶ್ರೀ ಮಾತಾ ವೈಷ್ಣವೊ ದೇವಿ ಕಟ್ರಾ ಮಧ್ಯೆ ಸಂಚರಿಸಲಿರುವ ನೂತನ ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಈ ಹಿಂದೆ ನಾನು ಸಲ್ಲಿಸಿದ ಕೋರಿಕೆಯ ಮೇರೆಗೆ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿಗೆ ಅನುಮೋದನೆ ನೀಡಲಾಗಿತ್ತು. ಬೆಳಗಾವಿಯಿಂದ ಬೆಳಗ್ಗೆ 5.20ಕ್ಕೆ ಹೊರಟು ಬೆಂಗಳೂರಿಗೆ ಮಧ್ಯಾಹ್ನ 1.50ಕ್ಕೆ ಆಗಮಿಸಲಿದೆ. ಹಾಗೂ ಬೆಂಗಳೂರಿನಿಂದ ವಾಪಸ್ಸು ಮಧ್ಯಾಹ್ನ 2.20ಕ್ಕೆ ಹೊರಟು ರಾತ್ರಿ 10.40ಕ್ಕೆ ಬೆಳಗಾವಿಗೆ ತಲುಪಲಿದೆ. ಈ ಮೂಲಕ ಬೆಂಗಳೂರು, ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿಯ ನಡುವೆ ಸಂಪರ್ಕ ಹೆಚ್ಚಿಸಲಿದೆ’ ಎಂದು ಜೋಶಿ ತಿಳಿಸಿದ್ದಾರೆ.
ರೈಲು ಯೋಜನೆ ಜಾರಿಗೆ ಸಹಕರಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಧನ್ಯವಾದ ಎಂದು ಜೋಶಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.