ಕಾಕತಿ ಪೊಲೀಸರ ವಿರುಧ್ಧ ಸಿಡಿದೆದ್ದ ಹಳೆ ಹೊಸೂರ ಗ್ರಾಮಸ್ಥರು..!
ಕೊಂದವರನ್ನು ಬಿಟ್ಟು ನೊಂದವರಿಗೆ ಕಿರುಕುಳ ನೀಡುತ್ತಿರುವ ಪೊಲೀಸಪ್ಪನ ಅಮಾನತ್ತಿಗೆ ಆಗ್ರಹ..!
ಕೊಲೆಗಾರರನ್ನು ಬಂಧಿಸುವಂತೆ DC, ಕಮೀಷನರ್ ಗೆ ಮನವಿ..!
ಬೆಳಗಾವಿ : ಡಿಸೆಂಬರ್ 24 ರಂದು ಕಾಕತಿ ಪೊಲೀಸ್ ಠಾಣೆಯ ಹೊಸ ವಂಟಮೂರಿ ಗ್ರಾಮದಲ್ಲಿ 3 ತಿಂಗಳ ಗರ್ಭಿಣಿ ಮಹಿಳೆಯನ್ನು ಗಂಡನ ಮನೆಯವರು ಚಿತ್ರಹಿಂಸೆ ನೀಡಿ ನೇಣಿಗೆ ಹಾಕಿ ಕೊಲೆ ಮಾಡಿ ರಾಜಾರೋಷವಾಗಿ ತಿರುಗಾಡುತ್ತಿರುವ ಕೊಲೆಗಡುಕ ಆರೋಪಿಗಳನ್ನು ಕಾಕತಿ ಪೊಲೀಸರು ಬಂಧಿಸದೆ ಮಗಳ ಸಾವಿನ ನ್ಯಾಯ ಕೇಳಲು ಬಂದವರ ಮೇಲೆಯೇ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಇದರಿಂದ ಕಂಗಾಲಾದ ದೂರುದಾರರು ಕಾಕತಿ ಪೊಲೀಸರಿಂದ ನ್ಯಾಯ ಸಿಗದ ಕಾರಣ ಸಿಡಿದೆದ್ದ ಗ್ರಾಮಸ್ಥರು ಇಂದು (ಶುಕ್ರವಾರ ಡಿ 30) ನೂರಾರು ಸಂಖ್ಯೆಯಲ್ಲಿ ಬೆಳಗಾವಿಗೆ ಬಂದು ಪ್ರತಿಭಟನೆ ನಡೆಸಿ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಕಮಿಷನರ್ ಅವರಿಗೆ ಭೇಟಿ ಆಗಿ ಗರ್ಭಿಣಿ ಮಹಿಳೆಯನ್ನು ಕೊಂದಿರುವ ಕ್ರೂರ ಪಾಪಿಗಳನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ಕಾಕತಿ ಪೊಲೀಸ್ ಇನ್ಸ್ಪೆಕ್ಟರ್ ವಿಜಯ ಶಿನ್ನೂರ ಅವರನ್ನು ತಕ್ಷಣ ಅಮಾನತ್ತು ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಡಿ 24 ರಂದು ಹೊಸ ವಟಮೂರಿ ಗ್ರಾಮದಲ್ಲಿ ಮೂರು ತಿಂಗಳ ಗರ್ಭಿಣಿಯಾಗಿದ್ದ 22 ವರ್ಷದ ಗೌರಮ್ಮಾ ಮಂಜು ಕೊಣ್ಣೂರಿ ಎಂಬ ಮಹಿಳೆಯನ್ನು ಆಕೆ ಪತಿ ಮಂಜು, ಮಾವ ಯಲ್ಪಪ್ಪಾ ಹಾಗೂ ಅತ್ತೆ ರೇಣುಕಾ ಕೊಣ್ಣೂರಿ ಸೇರಿಕೊಂಡು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಅವಳನ್ನು ನೇಣು ಹಾಕಿ ಕೊಲೆ ಮಾಡಿದ್ದರು.
ಕೊಲೆಯಾಗಿ ನಾಲ್ಕು ದಿನಗಳು ಕಳೆದರು ದೂರುದಾರರಿಗೆ ಕಾಕತಿ ಪೊಲೀಸರು FIR ಪ್ರತಿ ನೀಡದೆ, ಕೊಲೆ ಆರೋಪಿಗಳನ್ನು ಬಂಧಿಸದೇ, ಹಣಕ್ಕಾಗಿ ಕೊಲೆಗಾರನನ್ನು ಬಚಾವ ಮಾಡಲು ಅವರ ಆಪ್ತರೊಂದಿಗೆ ಡೀಲ್ ಮಾಡುತ್ತಿದ್ದ ಪೊಲೀಸರ ಮನಸ್ಥಿತಿಯನ್ನು ಕಂಡ ಮಹಿಳೆ ಕಡೆಯವರು ಸಹಾಯಕ್ಕಾಗಿ ಕೆಲ ಸಾಮಾಜಿಕ ಕಾರ್ಯಕರ್ತರನ್ನು ಹಾಗೂ ಪತ್ರಕರ್ತರನ್ನು ಸಂಪರ್ಕಿಸಿದ್ದರು.
ಘಟನೆ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿ “ಜನಜೀವಾಳ” ದಿನಪತ್ರಿಕೆ ಗರ್ಭಿಣಿ ಮಹಿಳೆಯನ್ನು ಕೊಂದ ಪಾಪಿಗಳು ಹಾಗೂ ಕಾಕತಿ ಪೊಲೀಸರ ನಿರ್ಲಕ್ಷ್ಯತನದ ಬಗ್ಗೆ ವಿಸ್ತೃತ ವರದಿ ಬಿತ್ತರಿಸಿತ್ತು. ವರದಿ ಪ್ರಕಟವಾಗುತ್ತಿದ್ದಂತೆ ಕಾಕತಿ ಪೊಲೀಸರು ದೂರುದಾರರನ್ನು ಕರೆದು FIR ಪ್ರತಿ ನೀಡಿ ಸಮಜಾಯಿಸಿ ಮಾಡಿ ಪ್ರಕರಣಕ್ಕೆ ಎಳ್ಳು ನೀರು ಬಿಡುವ ಪ್ರಯತ್ನ ನಡೆಸಿದ್ದರು. ಆದರೆ ಇತ್ತ ವರದಿಯಿಂದಾಗಿ ಹಿರಿಯ ಪೊಲೀಸ ಅಧಿಕಾರಿಗಳ ಮಧ್ಯೆ ಪ್ರವೇಶದಿಂದ ಕಾಕತಿ ಪೊಲೀಸಪ್ಪನ ಆಟ ನಡೆಯಲಿಲ್ಲ.
ಇಷ್ಟಾದರೂ ಆ ಪೊಲೀಸಪ್ಪ ಆರೋಪಿಗಳನ್ನು ಬಂಧಿಸುವಂತೆ ಠಾಣೆಗೆ ಬಂದು ಮನವಿ ಮಾಡುತ್ತಿದ್ದ ದೂರುದಾರಿಗೆ ಬೆದರಿಕೆ ಹಾಕಿ ನಿಮ್ಮ ಮೇಲೆ ಪ್ರತಿದೂರು ದಾಖಲು ಮಾಡಿ ಜೈಲಿಗಟ್ಟುತ್ತೇನೆ ಎಂದು ಹೆದರಿಸಿದ್ದಾನೆ.
ಇದರಿಂದ ಕಾಕತಿ ಪೊಲೀಸಪ್ಪನ ವಿರುದ್ಧ ಮತ್ತಷ್ಟು ಕೆರಳಿದ ಮಹಿಳೆ ಕುಟುಂಬದವರು ಹಾಗೂ ಗ್ರಾಮಸ್ಥರು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಇಂದು ನಗರಕ್ಕೆ ಬಂದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಕೊಲೆ ಪ್ರಕರದಲ್ಲಿ ಆರೋಪಿಗಳನ್ನು ಪೊಲೀಸರು ರಕ್ಷಣೆ ಮಾಡುತ್ತಿದ್ದಾರೆ. ಕೊಲೆಯಾದ ಮಹಿಳೆ ಕುಟುಂಬದವರನ್ನು ಹೆದರಿಸಿ, ಬೆದರಿಸಿ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ನಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಹಣಕ್ಕಾಗಿ ಆರೋಪಿಗಳನ್ನು ಬಧಿಸದೆ ರಾಜಾರೋಷವಾಗಿ ಬಿಟ್ಟಿದ್ದಾರೆ. ಮತ್ತು ಠಾಣೆಯಲ್ಲಿ ಡೀಲ್ ಗಳ ಮೇಲೆ ಡೀಲ್ ನಡೆಸಲಾಗುತ್ತಿದೆ ಎಂದರು.
ಗಭೀರ ಆರೋಪ..?
ಕೊಲೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಆರೋಪಿಗಳು ತಮ್ಮ ಮನೆಗೆ ತಾವೇ ಬೆಂಕಿ ಹಚ್ಚಿ ಸಾಕ್ಷಿ ನಾಶ ಪಡಿಸಲು ಹಾಗೂ ಆ ಆರೋಪವನ್ನು ದೂರುದಾರರ ಮೇಲೆ ಹಾಕಿ ನಂತರ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಲು ಮುಂಚಿತವಾಗಿಯೇ ಪ್ಲ್ಯಾನ್ ಮಾಡಿದ್ದು,ಇದರ ಹಿಂದೆ ಪೊಲೀಸಪ್ಪನ ಕೈವಾಡವಿದೆ ಎಂದು ದೂರುದಾರರು ಗಂಭೀರವಾಗಿ ಆರೋಪಿಸಿದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಪೊಲೀಸ್ ಕಮೀಷನರ್ ಬೋರಲಿಂಗಯ್ಯ ಅವರಿಗೆ ಮನವಿ ಸಲ್ಲಿಸಿ ಕಾಕತಿ ಪೊಲೀಸಪ್ಪನ ಕರ್ಮಕಾಂಡದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟು ಮನವರಿಕೆ ಮಾಡಿದರು.
ಇಷ್ಟಾದರೂ ಒಂದು ವೇಳೆ ಅಮಾನತ್ತು ಆಗದಿದ್ದರೆ ಆ ಪೊಲೀಸಪ್ಪ ಲಕ್ಷಾಂತರ ರೂ ಡೀಲ್ ಆಸೆ ಬಿಟ್ಟು ಗರ್ಭಿಣಿಯನ್ನು ಕೊಂದವರನ್ನು ಬಂಧಿಸಿ, ನೊಂದವರಿಗೆ ನ್ಯಾಯ ಕೊಡಿಸ್ತಾರಾ ಎಂದು ಕಾದು ನೋಡಬೇಕು.