ಬೆಳಗಾವಿ : ಖಾನಾಪುರ ಪಟ್ಟಣದ ಹೊರವಲಯದ ಗಾಂಧಿನಗರ ಬಡಾವಣೆಯ ಮಾರುತಿ ದೇವಸ್ಥಾನದಲ್ಲಿ ಹಿರಿಯರ ಉಪಸ್ಥಿತಿಯಲ್ಲಿ ರವಿವಾರ ಸಂಜೆ ನಡೆಯುತ್ತಿದ್ದ ಸಂಧಾನ ಸಭೆಯಲ್ಲಿ ಹಲಕರ್ಣಿ ಗ್ರಾಮದ ನಿವಾಸಿ ಸುರೇಶ ಭೀಮಪ್ಪ ಬಂಡಿವಡ್ಡರ (36) ಎಂಬುವರನ್ನು ಹತ್ಯೆ ಮಾಡಲಾಗಿದೆ.
ಹಲಕರ್ಣಿಯ ಸುರೇಶ ಬಂಡಿವಡ್ಡರ ಹಾಗೂ ಗಾಂಧಿನಗರದ ಯಲ್ಲಪ್ಪ ಬಂಡೀವಡ್ಡರ ಅವರ ನಡುವೆ ಕಳೆದ ಹಲವು ದಿನಗಳಿಂದ ವೈಷಮ್ಯವಿತ್ತು ಎನ್ನಲಾಗಿದೆ. ಇದನ್ನು ಬಗೆಹರಿಸಲು ಸಂಧಾನ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಸುರೇಶ ಮತ್ತು ಯಲ್ಲಪ್ಪ ಅವರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಹಿರಿಯರು ಇಬ್ಬರನ್ನೂ ಸಮಾಧಾನಪಡಿಸಲು ಯತ್ನಿಸಿದರೂ ಯಲ್ಲಪ್ಪ ತಾವು ತಂದಿದ್ದ ಚಾಕುವಿನಿಂದ ಸುರೇಶ ಅವರ ಹೊಟ್ಟೆಗೆ ತಿವಿದರು. ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ ಸಾಗರ ಅಷ್ಟೇಕರ ಹಾಗೂ ಇತರರ ಮೇಲೂ ಯಲ್ಲಪ್ಪ ಹಲ್ಲೆ ನಡೆಸಿದರು. ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಸುರೇಶ ಅವರನ್ನು ಸ್ಥಳೀಯರು ಖಾನಾಪುರ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು.
ವಿಪರೀತ ರಕ್ತಸ್ರಾವ ಆಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯದಲ್ಲಿ ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.