ಬೆಂಗಳೂರು : ಬೆಂಗಳೂರು ಮೂಲದ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರವಾದ ನೆಬ್ಲಿಯೊ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನಿಂದ 378 ಕೋಟಿ ರೂ.ಗಳಿಗೂ ಹೆಚ್ಚು ಹಣ ಕಳ್ಳತನವಾಗಿರುವ ಬೃಹತ್ ಸೈಬರ್ ಅಪರಾಧವನ್ನು ಬೆಂಗಳೂರು ಪೊಲೀಸರು ಬಯಲು ಮಾಡಿದ್ದಾರೆ.
ಒಂದೇ ಪ್ರಕರಣದಲ್ಲಿ 378 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಕ್ರಿಪ್ಟೋ ಕರೆನ್ಸಿ ಕಳ್ಳತನ ಮಾಡಿರುವ ಘಟನೆ, ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಒಬ್ಬ ಶಂಕಿತನನ್ನು ಬಂಧಿಸಲಾಗಿದೆ. ವೈಟ್ಫೀಲ್ಡ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಕಂಪನಿಯು ದೂರು ದಾಖಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ನೆಬಿಲೊ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಕ್ರಿಪ್ಟೊ ಕರೆನ್ಸಿ ಎಕ್ಸಚೇಂಜ್ ಮಾಡುವ ಕಂಪನಿಯಾಗಿದೆ. ಎಫ್ಐಆರ್ ಪ್ರಕಾರ, ಹ್ಯಾಕರ್ಗಳು ನೆಬ್ಲಿಯೊ ಟೆಕ್ನಾಲಜೀಸ್ನ ವ್ಯಾಲೆಟ್ಗೆ ಅನಧಿಕೃತ ಪ್ರವೇಶವನ್ನು ಪಡೆದಿದ್ದಾರೆ.ಸೈಬರ್ ವಂಚಕರು ಎರಡು ಬಾರಿ ಸರ್ವರ್ ಹ್ಯಾಕ್ ಮಾಡಿದ್ದಾರೆ. ಇದು ಬುಧವಾರ ಬೆಳಿಗ್ಗೆ 2:37 ಕ್ಕೆ 1 USDT, ಕ್ರಿಪ್ಟೋಕರೆನ್ಸಿಯ ಪರೀಕ್ಷಾ ವರ್ಗಾವಣೆಯಂತೆ ಕಂಡುಬಂದಿತು. ಕೆಲವು ಗಂಟೆಗಳ ನಂತರ, ಬೆಳಿಗ್ಗೆ 9:40 ಕ್ಕೆ, ಮುಖ್ಯ ಹ್ಯಾಕ್ ಅನ್ನು ಕಾರ್ಯಗತಗೊಳಿಸಲಾಯಿತು, 378 ಕೋಟಿ ರೂ.ಗಳಿಗಿಂತ ಹೆಚ್ಚು ಮೌಲ್ಯದ 44 ಮಿಲಿಯನ್ USDT ಅನ್ನು ಮತ್ತೊಂದು ವ್ಯಾಲೆಟ್ಗೆ ವರ್ಗಾಯಿಸಲಾಯಿತು.
ಕಂಪನಿಯ ಆಂತರಿಕ ತನಿಖೆಯು ಅರೆಕಾಲಿಕ ಉದ್ಯೋಗಿ ರಾಹುಲ್ ಅಗರ್ವಾಲಗೆ ನೀಡಲಾದ ಲ್ಯಾಪ್ಟಾಪ್ ಮೂಲಕ ಸಂಭವನೀಯ ಹ್ಯಾಕ್ ನಡೆದಿದೆ ಎಂದು ತೋರಿಸಿದೆ.ರಾಹುಲ್ ಅಗರ್ವಾಲ್ ಅವರು ಕಂಪನಿ ನೀಡಿದ ಲ್ಯಾಪ್ಟಾಟ್ ಬಳಸಿಕೊಂಡು ಮತ್ತೊಂದು ಕಂಪನಿಯಲ್ಲಿ ಪಾರ್ಟ್ಟೈಮ್ ಕೆಲಸ ಮಾಡಿದ್ದರು. ರಾಹುಲ್ ಅಗರ್ವಾಲ್ ಮತ್ತೊಂದು ಕಂಪನಿಯಲ್ಲಿ ಕೆಲಸ ಮಾಡಿ 15 ಲಕ್ಷ ರೂ. ಹಣ ಪಡೆಯುತ್ತಿದ್ದರು. ಬೇರೆ ಕಂಪನಿಯಲ್ಲಿ ಕೆಲಸ ಮಾಡುವ ವೇಳೆ ಸೈಬರ್ ವಂಚಕರು, ಇವರ ಲ್ಯಾಪ್ಟಾಪ್ ಹ್ಯಾಕ್ ಮಾಡಿ ಸರ್ವರ್ಗೆ ಎಂಟ್ರಿಯಾಗಿ, 44 ಮಿಲಿಯನ್ ಡಾಲರ್ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಹ್ಯಾಕರ್ಗಳು ಕಂಪನಿಯ ಸರ್ವರ್ಗಳಿಗೆ ನುಸುಳಲು ರಾಹುಲ್ ಅವರ ಲ್ಯಾಪ್ಟಾಪ್ ಅನ್ನು ಬಳಸಿರಬಹುದು ಎಂದು ತನಿಖಾಧಿಕಾರಿಗಳು ನಂಬಿದ್ದಾರೆ.
ಪೊಲೀಸರು ರಾಹುಲ್ನನ್ನು ಬಂಧಿಸಿದ್ದಾರೆ, ಇದಕ್ಕೆ ಗಣನೀಯ ಸಾಕ್ಷ್ಯಾಧಾರಗಳಿವೆ. ಈತ 5 ರಿಂದ 6 ವರ್ಷಗಳಿಂದ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದಾನೆ.
“ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ಕಂಪನಿ ಕಾಯಿನ್ಬೇಸ್ನಿಂದ ದೂರು ದಾಖಲಾಗಿದೆ. ಕಚೇರಿ ವ್ಯವಸ್ಥೆಯನ್ನು ಬಳಸಿಕೊಂಡು ಉದ್ಯೋಗಿಯೊಬ್ಬರು ಕಂಪನಿಯ ಪ್ರೋಟೋಕಾಲ್ಗಳನ್ನು ಉಲ್ಲಂಘಿಸಿ ಸುಮಾರು 44 ಮಿಲಿಯನ್ ಯುಎಸ್ಡಿ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ” ಎಂದು ಹೆಚ್ಚುವರಿ ಆಯುಕ್ತ ರಮೇಶ ಭಾನೋಟ್ ಹೇಳಿದರು.
“ಕಂಪನಿಯ ವ್ಯವಸ್ಥೆಯನ್ನು ಬಳಸಿಕೊಂಡು ವ್ಯವಹಾರ ನಡೆಸಲಾಗಿದೆ. ಒಬ್ಬ ಶಂಕಿತನನ್ನು ಬಂಧಿಸಲಾಗಿದೆ. ಹಣದ ಮಾರ್ಗ ಮತ್ತು ವರ್ಗಾವಣೆಯ ಹಿಂದಿನ ಜನರ ಬಗ್ಗೆ ನಾವು ಈಗ ತನಿಖೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.