ಬೈಲಹೊಂಗಲ (ಬೆಳಗಾವಿ): “ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಬದುಕಿಗೆ ಆಸರೆಯಾಗಿದ್ದು, ರಾಜ್ಯದ ತಲಾದಾಯವನ್ನು ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ದಿವೆ. ಇದು ನಮ್ಮ ಸರ್ಕಾರದ ಬದ್ಧತೆಗೆ ಸಾಕ್ಷಿಯಾಗಿದೆ,” ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ (ಕೆಪಿವೈಸಿಸಿ) ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ಅವರು ಹೇಳಿದರು.
ಪಟ್ಟಣದ ಬಿ.ಬಿ. ಗಣಾಚಾರಿ ಕಲ್ಯಾಣ ಮಂಟಪದಲ್ಲಿ ನಡೆದ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಜನಪರ ಯೋಜನೆಗಳನ್ನು ಶ್ಲಾಘಿಸುತ್ತಲೇ, ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಗ್ಯಾರಂಟಿಗಳ ಯಶಸ್ಸು ಮತ್ತು ಆರ್ಥಿಕ ಪ್ರಗತಿ
“ನಿಮ್ಮಂತಹ ಕಾರ್ಯಕರ್ತರ ಶ್ರಮದಿಂದ 2023ರಲ್ಲಿ ಕಾಂಗ್ರೆಸ್ ಐತಿಹಾಸಿಕ ಗೆಲುವು ಸಾಧಿಸಿತು. ನಾವು ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಈಡೇರಿಸುವ ಮೂಲಕ ಸರ್ಕಾರ ನಿಮ್ಮ ಗೌರವವನ್ನು ಉಳಿಸಿದೆ,” ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಚ್ಚುಗೆ ವ್ಯಕ್ತಪಡಿಸಿದರು.
“ನಾವು ಗ್ಯಾರಂಟಿಗಳನ್ನು ಘೋಷಿಸಿದಾಗ ಬಿಜೆಪಿ, ಜೆಡಿಎಸ್ನವರು ಇದು ಅಸಾಧ್ಯ, ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. ಆದರೆ ಇಂದು ಅದೇ ಗ್ಯಾರಂಟಿಗಳಿಂದ ರಾಜ್ಯದ ತಲಾದಾಯ ₹2 ಲಕ್ಷಕ್ಕೆ ತಲುಪಿದ್ದು, ದೇಶದಲ್ಲೇ ನಂಬರ್ ಒನ್ ಆಗಿದೆ. ವಿಶ್ವಸಂಸ್ಥೆಯ ಅಧ್ಯಕ್ಷರು ಮತ್ತು ಜಾಗತಿಕ ಆರ್ಥಿಕ ತಜ್ಞರೇ ನಮ್ಮ ಯೋಜನೆಗಳನ್ನು ಕೊಂಡಾಡಿದ್ದಾರೆ,” ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು.
ಬಡವರ ಬದುಕಿಗೆ ಆಸರೆಯಾದ ಯೋಜನೆಗಳು
ಅಂಕಿ-ಅಂಶಗಳನ್ನು ಮುಂದಿಟ್ಟ ಅವರು, “ಶಕ್ತಿ ಯೋಜನೆಯಡಿ ಮಹಿಳೆಯರು 500 ಕೋಟಿಗೂ ಹೆಚ್ಚು ಬಾರಿ ಉಚಿತ ಪ್ರಯಾಣ ಮಾಡಿದ್ದಾರೆ. ಗೃಹಲಕ್ಷ್ಮೀ ಯೋಜನೆ ಅಡಿ ₹55,000 ಕೋಟಿ ಹಣವನ್ನು ನೇರವಾಗಿ ಮಹಿಳೆಯರ ಖಾತೆಗೆ ಜಮೆ ಮಾಡಲಾಗಿದೆ. ಈವರೆಗೆ ಗ್ಯಾರಂಟಿಗಳಿಗಾಗಿಯೇ ಸರ್ಕಾರ ₹80,000 ಕೋಟಿ ಖರ್ಚು ಮಾಡಿದೆ,” ಎಂದು ವಿವರಿಸಿದರು.
ಬೆಳಗಾವಿ ಜಿಲ್ಲೆಯ ಉದಾಹರಣೆಗಳನ್ನು ನೀಡುತ್ತಾ, “ಇದೇ ಜಿಲ್ಲೆಯ ಸಂಗೊಳ್ಳಿ ಗ್ರಾಮದ ನಿಂಗವ್ವ ಅವರು ಬಸ್ಸಿನ ಮೆಟ್ಟಿಲಿಗೆ ನಮಸ್ಕರಿಸಿದ್ದು, ರಾಯಬಾಗದ ಅಕ್ಕತಾಯಿ ಅಜ್ಜಿ ಗೃಹಲಕ್ಷ್ಮಿ ಹಣದಲ್ಲಿ ಊರಿಗೆ ಹೋಳಿಗೆ ಊಟ ಹಾಕಿಸಿದ್ದು, ಮಂಟೂರು ಗ್ರಾಮದ ಮಲ್ಲವ್ವ ಮೇಟಿ ಗ್ರಂಥಾಲಯ ನಿರ್ಮಿಸಿದ್ದು ನಮ್ಮ ಗ್ಯಾರಂಟಿಗಳ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ,” ಎಂದು ಭಾವನಾತ್ಮಕವಾಗಿ ನುಡಿದರು.
ಕೇಂದ್ರದ ವಿರುದ್ಧ ಹೋರಾಟಕ್ಕೆ ಕರೆ
“ನಮ್ಮನ್ನು ಟೀಕಿಸುವ ಬಿಜೆಪಿಯೇ ಇಂದು ತನ್ನ ಆಡಳಿತವಿರುವ ರಾಜ್ಯಗಳಲ್ಲಿ ನಮ್ಮ ಗ್ಯಾರಂಟಿಗಳನ್ನು ಅನುಕರಿಸುತ್ತಿದೆ. ಬಿಹಾರದಲ್ಲಿ 125 ಯೂನಿಟ್ ಉಚಿತ ವಿದ್ಯುತ್ ಘೋಷಿಸಿರುವುದೇ ಇದಕ್ಕೆ ಸಾಕ್ಷಿ,” ಎಂದು ಅವರು ಹೇಳಿದರು. ಕೇಂದ್ರ ಸರ್ಕಾರವು ಬೆಲೆ ಏರಿಕೆ ಮತ್ತು ಅನುದಾನದಲ್ಲಿ ತಾರತಮ್ಯ ಮಾಡುವ ಮೂಲಕ ರಾಜ್ಯಕ್ಕೆ ನಿರಂತರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಇದರ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಕಾರ್ಯಕರ್ತರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಹಾಗೂ ಬೆಳಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಬೆಳಗಾವಿ ನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಾಗರ ಗೋ ದೀವಟಿಗೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ಲಾ ದೇಸಾಯಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ತಲಾದಾಯ ದೇಶದಲ್ಲೇ ಗರಿಷ್ಠ: ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ
