ಬೆಳಗಾವಿ : ಪಿಯುಸಿ ಓದು ವಿದ್ಯಾರ್ಥಿ ಜೀವನದ ಅತ್ಯಮೂಲ್ಯ ಹಂತ. ಈ ಅವಧಿಯಲ್ಲಿ ಕಠಿಣ ಪರಿಶ್ರಮದಿಂದ ಓದಿದರೆ ಇಡೀ ಜೀವನವೇ ಸುಖಮಯವಾಗಲು ಸಾಧ್ಯ ಎಂದು ಬೆಳಗಾವಿ ಎಂಎನ್ ಆರ್ ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ನಿರ್ಮಲಾ ಬಟ್ಟಲ ಹೇಳಿದರು.
ಬೆಳಗಾವಿ ಕೆಎಲ್ ಇ ಸಂಸ್ಥೆಯ ಜಿಎ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ 2025-26 ನೇ ಸಾಲಿನ ಕಾಲೇಜು ಒಕ್ಕೂಟ,ಎನ್ ಎಸ್ ಎಸ್ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಪಾಲಿಗೆ ಹದಿಹರೆಯ ಅತ್ಯಂತ ಒತ್ತಡದ ಕಾಲ. ತಂದೆ-ತಾಯಿ, ವಿದ್ಯಾ ಗುರುಗಳು ಹೇಳಿದ ಮಾತುಗಳನ್ನು ಚಾಚೂ ತಪ್ಪದೇ ಪಾಲಿಸುವ ಮೂಲಕ ಜೀವನವನ್ನು ಸುಖಮಯವಾಗಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಯುವಶಕ್ತಿ ದೇಶಕ್ಕೆ ಶ್ರೇಷ್ಠ ಕೊಡುಗೆ ನೀಡಬೇಕು. ನಿಮ್ಮಲ್ಲಿ ಈ ಹಂತದಲ್ಲಿ ಅದಮ್ಯ ಉತ್ಸಾಹ, ಸಾಧಿಸುವ ಛಲ ಇರುತ್ತದೆ. ಈ ದಿಸೆಯಲ್ಲಿ ದೊಡ್ಡ ದೊಡ್ಡ ಕನಸುಗಳನ್ನು ಕಂಡು ದೇಶಕ್ಕೆ ಮಹಾನ್ ಕೊಡುಗೆಯನ್ನು ನೀಡಬೇಕು. ಇತಿಹಾಸದಲ್ಲಿ ಆಗಿ ಹೋದ ಬಹುತೇಕರು ಯುವಕರಿದ್ದಾಗಲೇ ಸಾಧನೆ ಮಾಡಿರುವುದನ್ನು ಕಾಣಬಹುದು. ಈ ನಿಟ್ಟಿನಲ್ಲಿ ನಮ್ಮ ಆಲೋಚನೆ ಸಾಗಬೇಕು. ಈ ಹಂತದಲ್ಲೇ ನಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬೇಕು. ವೀರ ಸಿಂಧೂರ ಲಕ್ಷ್ಮಣ, ಬೆಳವಡಿ ಮಲ್ಲಮ್ಮ, ಕಿತ್ತೂರು ಚನ್ನಮ್ಮ ಅವರಂತಹ ದೇಶಪ್ರೇಮಿಗಳ ಆದರ್ಶಗಳನ್ನು ಮುಂದಿಟ್ಟುಕೊಂಡು ಜೀವನ ರೂಪಿಸಿಕೊಳ್ಳಬೇಕು. ಇಂದಿನ ಆಧುನಿಕ ಸಂದರ್ಭದಲ್ಲಿ ನಾವು ಇಟ್ಟ ಗುರಿಯತ್ತ ಸದಾ ಗಮನ ಹರಿಸಬೇಕು. ತಾಳ್ಮೆ, ಅಪೂರ್ವ ಚಿಂತನಾ ಲಹರಿಯಿಂದ ಯೋಜನಾ ಬದ್ಧವಾದ ಗುರಿ ಹಾಕಿಕೊಂಡು ಸಾಧಕರಾದರೆ ಯಾವುದು ಅಸಾಧ್ಯವಲ್ಲ ಎಂದು ಹೇಳಿದರು.
ತರುಣ ಸಾಗರ ಮುನಿಗಳು ಹೇಳಿದಂತೆ, ಪಿಯುಸಿ ಓದಿನ ಸಂದರ್ಭದಲ್ಲಿ ಕಷ್ಟಪಟ್ಟು ಓದಿದರೆ ಅವರ ಜೀವನ ನೆಮ್ಮದಿಯ ತಾಣವಾಗುತ್ತದೆ ಎನ್ನುವುದು ಅಕ್ಷರಶಃ ಸತ್ಯ. ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಹೊಸ ಸವಾಲು ಹಾಗೂ ಸಮಸ್ಯೆಗೆ ಒಡ್ಡಿಕೊಳ್ಳುವ ಸಂದರ್ಭವನ್ನು ಬಳಸಿಕೊಳ್ಳಬೇಕು. ಇಂದಿನ ಸಂದರ್ಭದಲ್ಲಿ ಮೊಬೈಲ್ ನ್ನು ನಮ್ಮ ಅತ್ಯಂತ ಅವಶ್ಯಕತೆಗಳಿಗೆ ಮಾತ್ರ ಬಳಸಿಕೊಳ್ಳಬೇಕು. ಉನ್ನತ ಶಿಕ್ಷಣದ ಬುನಾದಿಯಾಗಿರುವ ಈ ಹಂತದಲ್ಲಿ ಉತ್ತಮವಾಗಿ ಓದಿ ಕೆಎಎಸ್, ಐಎಎಸ್ ಮುಂತಾದ ದೊಡ್ಡ ಕನಸನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಎ ಪಿಯು ಕಾಲೇಜು ಪ್ರಾಚಾರ್ಯ ಡಿ.ಎಸ್. ಪವಾರ ಮಾತನಾಡಿ, ವಿದ್ಯಾರ್ಥಿಗಳ ಓದಿಗೆ ಪೂರಕವಾದ ಎಲ್ಲಾ ಸೌಲಭ್ಯಗಳನ್ನು ಕಾಲೇಜು ಒದಗಿಸುತ್ತಿದೆ ಇದರ ಪೂರ್ಣ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಉಪ ಪ್ರಾಚಾರ್ಯ ಸಿ.ಪಿ. ದೇವರುಷಿ, ಒಕ್ಕೂಟದ ಅಧ್ಯಕ್ಷ ಸೋಮಲಿಂಗಪ್ಪ ಮಡಿವಾಳರ, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಹಿತೇಶ ಸಹಾನಿ, ಸಹ ಕಾರ್ಯದರ್ಶಿ ಕವಿತಾ ಖನಗಾವಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಚೈತ್ರಾ, ಅಂಕಿತಾ ಕಂಗ್ರಾಳಕರ, ಪೂಜಾ,
ಅಂಕಿತಾ ಪಾಟೀಲ ಅನಿಸಿಕೆ ವ್ಯಕ್ತಪಡಿಸಿದರು.
ಈಶ್ವರಿ ದೊಡ್ಡಶ್ಯಾನಟ್ಟಿ ಪ್ರಾರ್ಥಿಸಿದರು. ಜಯಶ್ರೀ ಹಳ್ಳಿ ಮತ್ತು ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಟಿ.ಪಿ.ಬಾನಕರೆ ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಫ್.ದೇವಲಾಪುರ ಪರಿಚಯಿಸಿದರು. ಎಸ್.ಆರ್.ಗುಮ್ಮಗೋಳ ವರದಿ ವಾಚಿಸಿದರು. ಶ್ರೀದೇವಿ ಗಂಗಾಪುರ ವಂದಿಸಿದರು. ಶೃತಿ ನೀರಲಗಿ ಹಿರೇಮಠ ಮತ್ತು ದಿವ್ಯಾ ಪಾಲಭಾವಿ ನಿರೂಪಿಸಿದರು.
ಪಿಯುಸಿ ವಿದ್ಯಾಭ್ಯಾಸ ಜೀವನದಲ್ಲೇ ಅತ್ಯಮೂಲ್ಯ : ಈ ಹಂತದಲ್ಲಿ ಕಠಿಣ ಪರಿಶ್ರಮದಿಂದ ಓದಿದರೆ ಇಡೀ ಜೀವನವೇ ಸುಂದರವಾಗಲು ಸಾಧ್ಯ ; ನಿರ್ಮಲಾ ಬಟ್ಟಲ ಅಭಿಮತ
