ಮೈಸೂರು: ಮನೆ ಬಳಿ ರಸ್ತೆಯಲ್ಲಿ ಬಿದ್ದಿದ್ದ ಸಿಡಿಮದ್ದನ್ನು ಅಡಕೆ ಎಂದು ಭಾವಿಸಿ ಚೂರು ಮಾಡಲು ಕಲ್ಲಿನಿಂದ ಜಜ್ಜಿದಾಗ ಅದು ಸ್ಫೋಟಗೊಂಡು ಮಹಿಳೆಯೊಬ್ಬರು ತೀವ್ರ ಗಾಯಗೊಂಡ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹುಲ್ಯಾಳು ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಗ್ರಾಮದ ಕಮಲಮ್ಮ (55) ಎಂಬವರು ಗಾಯಗೊಂಡವರು. ಶುಕ್ರವಾರ ಬೆಳಗ್ಗೆ ಜಮೀನಿನಿಂದ ಮನೆಗೆ ಬರುತ್ತಿದ್ದ ವೇಳೆ ರಸ್ತೆಯಲ್ಲಿ ಬಿದ್ದಿದ್ದ ವಸ್ತುವನ್ನು ಅಡಕೆ ಎಂದು ಭಾವಿಸಿ ಹೆಕ್ಕಿ ತಂದು ಮನೆ ಮುಂದೆಯೇ ಕಲ್ಲಿನಿಂದ ಜಜ್ಜುತ್ತಿದ್ದಂತೆ ಸಿಡಿಮದ್ದು ಸ್ಫೋಟಗೊಂಡಿದೆ. ಸಿಡಿಮದ್ದು ಸ್ಫೋಟದ ತೀವ್ರತೆಗೆ ಮುಖ, ಕೈ, ಹೊಟ್ಟೆಗೆ ತೀವ್ರ ಪೆಟ್ಟು ಬಿದ್ದು ಅಸ್ವಸ್ಥಗೊಂಡಿದ್ದಾರೆ.
ಭಾರಿ ಶಬ್ದ ಕೇಳಿ ಅಕ್ಕಪಕ್ಕದವರು ತಕ್ಷಣ ಓಡಿಬಂದಿದ್ದಾರೆ. ಗಾಯಗೊಂಡಿದ್ದ ಕಮಲಮ್ಮ ಅವರನ್ನು ತಕ್ಷಣವೇ ಒಯ್ದು ಕೆ.ಆರ್.ನಗರ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದ ತೀವ್ರತೆಗೆ ಮನೆಯ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿವೆ ಎಂದು ಹೇಳಲಾಗಿದೆ. ಭಾರಿ ಸ್ಫೋಟದ ಶಬ್ದಕೇಳಿದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಸೋಕಲ್ ಟೀಮ್, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎಸ್.ಪಿ. ವಿಷ್ಣುವರ್ಧನ್, ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ಭೇಟಿ ನೀಡಿ ಮಾಹಿತಿ ಪಡೆದರು.