ಬೆಳಗಾವಿ : ಮಹದಾಯಿ ನದಿ ನೀರನ್ನು ತಿರುಗಿಸುವ ಉದ್ದೇಶದಿಂದ ಕರ್ನಾಟಕ ನಡೆಸುತ್ತಿರುವ ಚಟುವಟಿಕೆಗಳನ್ನು ಆಕ್ಷೇಪಿಸಿ ಸುಪ್ರೀಂಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ ಗೋವಾ ಸರ್ಕಾರ ಹೇಳಿದೆ.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಮಂಗಳವಾರ ಗೋವಾ ವಿಧಾನಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಪಕ್ಷೇತರ ಸದಸ್ಯ ಅಲೆಕ್ಸಿಯೊ ರೆಜಿನಾಲ್ಲೋ ಲಾರೆನ್ನೋ ಅವರು ಕೇಳಿದ ಪ್ರಶ್ನೆಗೆ ಸಾವಂತ್ ಪ್ರತಿಕ್ರಿಯಿಸಿದ್ದಾರೆ. ‘ಮಹದಾಯಿ ನದಿ ನೀರನ್ನು ತಿರುಗಿಸುವ ಚಟುವಟಿಕೆಯಲ್ಲಿ ಕರ್ನಾಟಕ ನಿರಂತರವಾಗಿ ತೊಡಗಿದೆ. ಕರ್ನಾಟಕದ ಗಡಿಭಾಗದ ಒಳಗೆ ಕಾಮಗಾರಿ ನಡೆಸುತ್ತಿರುವ ಕಾರಣದಿಂದ ತಡೆಯಲು ನಮಗೆ ಸಾಧ್ಯವಾಗುತ್ತಿಲ್ಲ. ಆದರೆ,
ನದಿ ನೀರನ್ನು ತಿರುಗಿಸಲು ಕರ್ನಾಟಕ ಮಾಡುವ ಪ್ರತಿ ಪ್ರಯತ್ನಕ್ಕೂ ತಡೆಯೊಡ್ಡುವ ಯತ್ನ ಮಾಡುತ್ತಿದ್ದೇವೆ’ ಎಂದಿದ್ದಾರೆ.
‘ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ನಾನು ಖುದ್ದು ಭೇಟಿಯಾಗಿ, ಈ ವಿಚಾರದ ಕುರಿತು ಚರ್ಚಿಸಿದ್ದೇನೆ. ನದಿ ನೀರು ತಿರುಗಿಸುವ ಚಟುವಟಿಕೆಗಳನ್ನು ನಡೆಸಲು ಕರ್ನಾಟಕಕ್ಕೆ ಅನುಮತಿ ನೀಡುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.
ಸುಪ್ರೀಂಕೋರ್ಟ್ನಲ್ಲಿಯೂ ಕರ್ನಾಟಕದ ವಿರುದ್ಧ ಅರ್ಜಿ ಸಲ್ಲಿಸಲಾಗುವುದು’ ಎಂದು ಸಾವಂತ್ ತಿಳಿಸಿದ್ದಾರೆ.