ಬೆಳಗಾವಿ : ಚನ್ನಮ್ಮನ ಕಿತ್ತೂರು ರಾಷ್ಟ್ರೀಯ ಹೆದ್ದಾರಿ ಮೇಲಿರುವ ಬಚ್ಚನಕೇರಿ ಬಳಿ ಚಿಕ್ಕ ಸೇತುವೆ ಸಮೀಪದ ಚರಂಡಿಗೆ ಕಾರು ಉರುಳಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಭಾನುವಾರ ಸಂಭವಿಸಿದೆ.
ಧಾರವಾಡ ಜಿಲ್ಲೆಯ ಕಲಘಟಗಿಯ ಶ್ರೀದೇವಿ ಟೆಂಗಿನಕಾಯಿ (38) ಮೃತರು. ಅವರ ಪತಿ, ಚಾಲಕ ಈಶ್ವರ ಟೆಂಗಿನಕಾಯಿ (45) ಅವರಿಗೆ ಗಾಯಗಳಾಗಿವೆ.
ಶ್ರೀದೇವಿ ಅವರು ಬೆಳಗಾವಿ ಜಿಲ್ಲೆಯ ಸಂಕೇಶ್ವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಫಾರ್ಮಾಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಕಲಘಟಗಿಗೆ ವರ್ಗವಾದ ಹಿನ್ನೆಲೆಯಲ್ಲಿ ದಂಪತಿ ಅಲ್ಲಿಗೆ ತೆರಳುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು.
ಎಸ್ಐ ಪ್ರವೀಣ ಗಂಗೋಳ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಚನ್ನಮ್ಮನ ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.