ನವದೆಹಲಿ: “ಸ್ಲೀಪಿಂಗ್ ಪ್ರಿನ್ಸ್” ಎಂದು ವ್ಯಾಪಕವಾಗಿ ಕರೆಯಲ್ಪಡುವ ಸೌದಿ ರಾಜಮನೆತನದ ಪ್ರಿನ್ಸ್ ಅಲ್ ವಲೀದ್ ಬಿನ್ ಖಲೀದ್ ಬಿನ್ ತಲಾಲ್ ಅಲ್ ಸೌದ್ ಕೋಮಾಕ್ಕೆ ಜಾರಿದ ಸುಮಾರು 20 ವರ್ಷಗಳ ನಂತರ ನಿಧನರಾಗಿದ್ದಾರೆ. ಅವರಿಗೆ 36 ವರ್ಷ ವಯಸ್ಸಾಗಿತ್ತು.
ಏಪ್ರಿಲ್ 1990 ರಲ್ಲಿ ಜನಿಸಿದ ಪ್ರಿನ್ಸ್ ಅಲ್ ವಲೀದ್, ಪ್ರಮುಖ ಸೌದಿ ರಾಜಮನೆತನದವರೂ ಮತ್ತು ಬಿಲಿಯನೇರ್ ಪ್ರಿನ್ಸ್ ಅಲ್ ವಲೀದ್ ಬಿನ್ ತಲಾಲ್ ಅವರ ಸೋದರಳಿಯ ಪ್ರಿನ್ಸ್ ಖಲೀದ್ ಬಿನ್ ತಲಾಲ್ ಅಲ್ ಸೌದ್ ಅವರ ಹಿರಿಯ ಮಗ. 18ನೇ ವಯಸ್ಸಿನಲ್ಲಿ, ಯುಕೆಯ ಮಿಲಿಟರಿ ಕಾಲೇಜಿನಲ್ಲಿ ಓದುತ್ತಿದ್ದಾಗ, ಇವರು ರಸ್ತೆ ಅಪಘಾತಕ್ಕೆ ಒಳಗಾಗಿ ಅವರಿಗೆ ತೀವ್ರವಾದ ಮಿದುಳಿನ ಗಾಯಗಳು ಮತ್ತು ಆಂತರಿಕ ರಕ್ತಸ್ರಾವವಾಯಿತು. ತುರ್ತು ವೈದ್ಯಕೀಯ ಚಿಕಿತ್ಸೆ ಮತ್ತು ಅಮೆರಿಕ ಹಾಗೂ ಸ್ಪೇನ್ನ ವಿಶೇಷ ವೈದ್ಯರ ಚಿಕಿತ್ಸೆಗಳಹೊರತಾಗಿಯೂ, ಅವರು ಎಂದಿಗೂ ಕೋಮಾದಿಂದ ಹೊರಬರಲಿಲ್ಲ ಹಾಗೂ ಪೂರ್ಣ ಪ್ರಜ್ಞೆಯನ್ನು ಮರಳಿ ಪಡೆಯಲಿಲ್ಲ.
ಅಪಘಾತದ ನಂತರ, ಅವರನ್ನು ರಿಯಾದ್ನಲ್ಲಿರುವ ಕಿಂಗ್ ಅಬ್ದುಲಜೀಜ್ ವೈದ್ಯಕೀಯ ನಗರಕ್ಕೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರು ಸುಮಾರು ಇಪ್ಪತ್ತು ವರ್ಷಗಳ ಕಾಲ ನಿರಂತರ ವೈದ್ಯಕೀಯ ಆರೈಕೆಯಡಿಯಲ್ಲಿದ್ದರು. ಅವರ ತಂದೆ, ಪ್ರಿನ್ಸ್ ಖಲೀದ್ ಬಿನ್ ತಲಾಲ್, ದೈವಿಕ ಗುಣಪಡಿಸುವಿಕೆಯ ಭರವಸೆಯನ್ನು ಇಟ್ಟುಕೊಂಡು ಅವರಿಗೆ ನೀಡಲಾಗಿದ್ದ ಲೈಪ್ ಸಪೋರ್ಟ್ ತೆಗೆಯುವ ಎಲ್ಲಾ ಸಲಹೆಗಳನ್ನು ಸಾರ್ವಜನಿಕವಾಗಿ ವಿರೋಧಿಸಿದ್ದರು.
ಗ್ಲೋಬಲ್ ಇಮಾಮ್ಸ್ ಕೌನ್ಸಿಲ್ ಅವರ ನಿಧನಕ್ಕೆ ತನ್ನ ಅಧಿಕೃತ ಹೇಳಿಕೆಯಲ್ಲಿ, ಪ್ರಿನ್ಸ್ ಅಲ್ ವಲೀದ್ ಬಿನ್ ಖಲೀದ್ ಬಿನ್ ತಲಾಲ್ ಅಲ್ ಸೌದ್ ನಿಧನಕ್ಕೆ ಸಂತಾಪ ಸೂಚಿಸಿದೆ. “ಈ ಗಂಭೀರ ಸಂದರ್ಭದಲ್ಲಿ ಅವರ ತಂದೆ ಪ್ರಿನ್ಸ್ ಖಲೀದ್ ಬಿನ್ ತಲಾಲ್ ಮತ್ತು ಅವರ ಕುಟುಂಬವು ಪ್ರದರ್ಶಿಸಿದ ತಾಳ್ಮೆ ಮತ್ತು ದೃಢತೆಯನ್ನು ನಾವು ಗೌರವದಿಂದ ನೆನಪಿಸಿಕೊಳ್ಳುತ್ತೇವೆ – ಇದು ಅಲ್ಲಾಹನ ಇಚ್ಛೆ. ಸರ್ವಶಕ್ತನಾದ ಅಲ್ಲಾಹನು ದಿವಂಗತ ರಾಜಕುಮಾರನನ್ನು ತನ್ನ ಅಪಾರ ಕರುಣೆಯಿಂದ ಆವರಿಸಲಿ, ಅವನ ಶಾಶ್ವತ ಸ್ವರ್ಗದಲ್ಲಿ ಅವನಿಗೆ ಸ್ಥಾನ ನೀಡಲಿ ಮತ್ತು ಅವನ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ತಾಳ್ಮೆ ಮತ್ತು ಸಾಂತ್ವನವನ್ನು ನೀಡಲಿ ಎಂದು ನಾವು ಪ್ರಾರ್ಥಿಸುತ್ತೇವೆ” ಎಂದು ಸಂತಾಪ ಸೂಚಕ ಸಂದೇಶ ಹೇಳಿದೆ.