ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ರೈತರಿಗಾಗಿ ಸರಕಾರದ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಉಚಗಾಂವ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಆರ್.ಐ.ಡಿ.ಎಫ್-30 ರ ಯೋಜನೆಯಡಿಯಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಪಶು ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಸುಮಾರು 50 ಲಕ್ಷ ರೂ,ಗಳ ವೆಚ್ಚದಲ್ಲಿ ಪಶು ಆಸ್ಪತ್ರೆಯ ಕಟ್ಟಡ ನಿರ್ಮಾಣಗೊಳ್ಳಲಿದೆ. ಪಶು ಸಂಗೋಪನೆಗೆ ಅನುಕೂಲವಾಗುವಂತೆ ನಮ್ಮ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪಶು ವೈದ್ಯಕೀಯ ಇಲಾಖೆಯಿಂದ ಗ್ರಾಮ ಪಂಚಾಯಿತಿಗಳ ಮೂಲಕ ಯೋಜನೆಗಳು ಜಾರಿಗೊಳ್ಳುತ್ತಿದ್ದು, ರೈತರ ಶ್ರೇಯೋಭಿವೃದ್ಧಿಗಾಗಿನ ಯೋಜನೆಗಳು ಎಲ್ಲ ರೈತರಿಗೆ ತಲುಪಬೇಕೆನ್ನುವುದೇ ನನ್ನ ಉದ್ದೇಶ ಎಂದರು.
ಗ್ರಾಮೀಣ ಕ್ಷೇತ್ರದಲ್ಲಿ ಸರಕಾರದ ಎಲ್ಲ ಯೋಜನೆಗಳೂ ಸಮರ್ಪಕವಾಗಿ ಜಾರಿಯಾಗುತ್ತಿದೆ. ಇಲ್ಲಿನ ಜನರಿಗೆ ಅಭಿವೃದ್ಧಿ ಎಂದರೆ ಏನೆನ್ನುವುದು ಕಳದ 7 ವರ್ಷಗಳಿಂದ ಅರ್ಥವಾಗುತ್ತಿದೆ. ಹಿಂದೆಲ್ಲ ಯಾವುದೇ ಯೋಜನೆಗಳು ಮನೆಬಾಗಿಲಿಗೆ ತಲುಪುತ್ತಿರಲಿಲ್ಲ ಎಂದೂ ಅವರು ತಿಳಿಸಿದರು.
ಇದೇ ವೇಳೆ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪಶುಸಖಿಯರ ಕುಕ್ಕುಟ ಸಂಜೀವಿನಿ ಕಾರ್ಯಕ್ರಮದ ಅನುಷ್ಟಾನದ ಕುರಿತಾದ ತರಬೇತಿ ಮತ್ತು ಸಮವಸ್ತ್ರ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು, ಸಮವಸ್ತ್ರ, ಹಾಲಿನ ಕ್ಯಾನ್, ಬ್ಯಾಗ್, ಪ್ರಮಾಣ ಪತ್ರ ಮುಂತಾದ ಸೌಕರ್ಯಗಳನ್ನು ವಿತರಿಸಲಾಯಿತು.
ಈ ಸಮಯದಲ್ಲಿ ಪಶುಪಾಲನಾ ಮತ್ತು ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ.ರವಿ ಸಾಲಿಗೌಡರ್, ಯುವರಾಜ ಕದಂ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಶಂಕರಗೌಡ ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಥುರಾ ತೇರಸೆ, ಉಪಾಧ್ಯಕ್ಷರಾದ ಬಾಳಕೃಷ್ಣ ತೇರಸೆ, ಗ್ರಾಮ ಪಂಚಾಯತಿಯ ಸದಸ್ಯರು, ಪಶು ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.