ಬೆಳಗಾವಿ : ಲೋಕಾಪುರದಿಂದ ರಾಮದುರ್ಗಕ್ಕೆ
ರೈಲ್ವೆ ಮಾರ್ಗ ಆಗಬೇಕು ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ರಾಮದುರ್ಗ ತಾಲ್ಲೂಕು ರೈಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಸಮಿತಿಯಿಂದ ಮನವಿ ಸಲ್ಲಿಸಿ ಕೇಂದ್ರ ಸಚಿವರ ನಿರ್ದೇಶನದಂತೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ಲೋಕಾಪುರ-ಧಾರವಾಡ ರೈಲ್ವೆ ಯೋಜನೆಗಳನ್ನು ಜಾರಿಗೆ ತರಬೇಕು. 20 ವರ್ಷಗಳಿಂದ ಹೋರಾಟ ನಡೆದು ಬಾಗಲಕೋಟೆಯಿಂದ ಕುಡಚಿಯವರೆಗೆ ರೈಲ್ವೆ ಮಾರ್ಗ ಮಂಜೂರಾಗಿದೆ. ಇದೇ ಯೋಜನೆಯನ್ನು ವಿಸ್ತರಿಸಿ ಲೋಕಾಪುರ-ಧಾರವಾಡ ರೈಲು ಮಾರ್ಗ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ರಾಮದುರ್ಗ ಜನತೆಯ ಹೋರಾಟದ ಭಾಗವಾಗಿ 2019ರಲ್ಲಿ ಸರ್ವೆಯೂ ನಡೆದಿದೆ. ಆದರೆ ಆ ಸಮಯದಲ್ಲಿ ಕೋವಿಡ್ ಕಾರಣದಿಂದ ಸಮೀಕ್ಷೆ ಸರಿಯಾಗಿ ನಡೆದಿಲ್ಲ. 2024ರ ನವೆಂಬರ್ನಲ್ಲಿ ಬೃಹತ್ ಹೋರಾಟ ನಡೆಸಿ ಬೆಳಗಾವಿ ಜಿಲ್ಲೆಯ ಎಲ್ಲ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಕೇಂದ್ರ-ರಾಜ್ಯ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಬೆಳಗಾವಿ ಕ್ಷೇತ್ರದ ಸಂಸದ ಜಗದೀಶ ಶೆಟ್ಟರ್ ಅವರಿಗೆ ಲೋಕಾಪುರದಿಂದ ಧಾರವಾಡಕ್ಕೆ ಏಕೆ ರೈಲ್ವೆ ಮಾರ್ಗ ಮಾಡಬೇಕು ಎಂದು ವಿವರವಾದ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಬೆಳಗಾವಿ ಕ್ಷೇತ್ರದ ಸಂಸದ ಜಗದೀಶ ಶೆಟ್ಟರ್ ಅವರಿಗೆ ಲೋಕಾಪುರದಿಂದ ಧಾರವಾಡಕ್ಕೆ ಏಕೆ ರೈಲ್ವೆ ಮಾರ್ಗ ಮಾಡಬೇಕು ಎಂದು ವಿವರವಾದ ಮಾಹಿತಿ ನೀಡಿ ಗಮನ ಸೆಳೆದಾಗ ಸಂಸದರು, ರಾಜ್ಯ ರೈಲ್ವೆ ಸಚಿವರಿಗೆ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನು ಕರೆದುಕೊಂಡು ಕೇಂದ್ರ ರೈಲ್ವೆ ಸಚಿವರಿಗೆ ಭೇಟಿಯಾಗಿ ಬೆಳಗಾವಿ ಜಿಲ್ಲೆಯ ರಾಮದುರ್ಗ, ಶಿರಸಂಗಿ, ಸವದತ್ತಿ ಯಲ್ಲಮ್ಮ ದೇವಸ್ಥಾನಗಳಿಗೆ ಬರುವ ಜನರ ಹಾಗೂ ಪ್ರವಾಸಿ ತಾಣದ ಬಗ್ಗೆ ಪ್ರಮುಖವಾಗಿ ಶಬರಿಕೊಳ್ಳದ ಕುರಿತು ಮಾಹಿತಿ ನೀಡಲಾಗಿದೆ. ಆಗ ಕೇಂದ್ರ ರೈಲ್ವೆ ಸಚಿವರು ಸಾಮಾನ್ಯ ಸಮೀಕ್ಷೆಗೆ ಪುನರ್ ಪರಿಶೀಲನೆ ಮಾಡಬೇಕು ಎಂದು ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು.
ಲೋಕಾಪುರದಿಂದ ಧಾರವಾಡದ ವರೆಗಿನ ರೈಲ್ವೆ ಮಾರ್ಗದ ಕುರಿತು ಪುನರ್ ಪರಿಶೀಲನೆ ಮಾಡಿ ಸಮೀಕ್ಷೆ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಮನವಿ ಸ್ವೀಕರಿಸಿದ ಮುಖ್ಯ ವ್ಯವಸ್ಥಾಪಕರು ಮನವಿ ಮೇರೆಗೆ ಪರಿಶೀಲಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೋರಾಟಗಾರರು ತಿಳಿಸಿದರು.
ಮನವಿ ನೀಡುವ ನಿಯೋಗದಲ್ಲಿ ಹೋರಾಟ ಸಮಿತಿಯ ಮುಖಂಡ ಕುತುಬುದ್ದಿನ್ ಖಾಜಿ, ಜಿ.ಎಂ.ಜೈನೆಖಾನ್, ಮಹೆಬೂಬ ಯಾದವಾಡ, ಎಸ್.ಜಿ.ಚಿಕ್ಕನರಗುಂದ, ಶಶಿಕಾಂತ ನೆಲ್ಲೂರ, ಡಿ.ಎಫ್.ಹಾಜಿ, ದಾದಾಪೀರ ಕೆರೂರ, ಸವದತ್ತಿ ಹೋರಾಟ ಸಮಿತಿಯ ಬಸವರಾಜ ಕಪ್ಪನ್ನವರ, ಶಂಕರಪ್ಪ ತೊರಗಲ್ ಉಪಸ್ಥಿತರಿದ್ದರು.