ನವದೆಹಲಿ: ಖಾಸಗಿ ವಲಯದ ಕರ್ಣಾಟಕ ಬ್ಯಾಂಕ್ನ ಮಧ್ಯಂತರ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ರಾಘವೇಂದ್ರ ಶ್ರೀನಿವಾಸ ಭಟ್ ಅವರನ್ನು ಬ್ಯಾಂಕ್ ಸೋಮವಾರ ನೇಮಿಸಿದೆ.
ಜುಲೈ 16ಕ್ಕೆ ಇವರ ಅಧಿಕಾರಾವಧಿ ಆರಂಭವಾಗಲಿದ್ದು, ಕಾಯಂ ಎಂಡಿ ಹಾಗೂ ಸಿಇಒ ನೇಮಕವಾಗುವ ಮೂರು ತಿಂಗಳವರೆಗೂ ರಾಘವೇಂದ್ರ ಭಟ್ ಅವರು ಈ ಹುದ್ದೆಯಲ್ಲಿರಲಿದ್ದಾರೆ ಎಂದು ಷೇರು ಮಾರುಕಟ್ಟೆಗೆ ಬ್ಯಾಂಕ್ ಮಾಹಿತಿ ನೀಡಿದೆ.
ಕರ್ಣಾಟಕ ಬ್ಯಾಂಕ್ನ ಹಾಲಿ ಎಂಡಿ ಮತ್ತು ಸಿಇಒ ಶ್ರೀಕೃಷ್ಣ ಹರಿಹರ ಶರ್ಮಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಮಧ್ಯಂತರ ಅಧಿಕಾರಿಯಾಗಿ ರಾಘವೇಂದ್ರ ಭಟ್ ನಿಯೋಜನೆಗೊಂಡಿದ್ದಾರೆ. ಶರ್ಮ ಅವರು ಮುಂಬೈಗೆ ತೆರಳಲು ಸಾಧ್ಯವಾಗದ ಹಾಗೂ ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ಸಲ್ಲಿಸಿದ್ದರು. ಜತೆಗೆ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಅವರು ಮಂಗಳೂರಿಗೆ ಹೋಗಲು ನಿರಾಕರಿಸಿ ಅವರೂ ರಾಜೀನಾಮೆ ಸಲ್ಲಿಸಿದ್ದರು.
ರಾಘವೇಂದ್ರ ಭಟ್ ಅವರು 1981ರಲ್ಲಿ ಸಹಾಯಕರಾಗಿ ತಮ್ಮ ಬ್ಯಾಂಕ್ ವೃತ್ತಿಯನ್ನು ಆರಂಭಿಸಿದವರು. ಜುಲೈ 2ರಂದು ಸಿಒಒ ಆಗಿ ಅಧಿಕಾರ ವಹಿಸಿಕೊಂಡಿದ್ದರು. ‘ಕರ್ಣಾಟಕ ಬ್ಯಾಂಕ್ನ ಎಂಡಿ ಮತ್ತು ಸಿಇಒ ಆಗಿ ನೇಮಕಗೊಂಡಿದ್ದಕ್ಕೆ ಹೆಮ್ಮೆ ಎನಿಸಿದೆ. ಶತಮಾನಗಳ ನಂಬಿಕೆ ಹಾಗೂ ಅಭಿಮಾನವನ್ನು ಗಳಿಸಿರುವ ಬ್ಯಾಂಕ್ನ ಎಲ್ಲಾ ಪಾಲುದಾರರೊಂದಿಗೆ ಜತೆಗೂಡಿ ಬ್ಯಾಂಕ್ ಅನ್ನು ಇನ್ನಷ್ಟು ಬಲಿಷ್ಠಗೊಳಿಸುವ ಗುರಿ ಹೊಂದಿದ್ದೇನೆ’ ಎಂದಿದ್ದಾರೆ.
ಜುಲೈ 16 ರಿಂದ ರಾಘವೇಂದ್ರ ಶ್ರೀನಿವಾಸ್ ಭಟ್ ಅವರನ್ನು ಬ್ಯಾಂಕಿನ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸೆಬಿ ಅಥವಾ ಯಾವುದೇ ಇತರ ಪ್ರಾಧಿಕಾರವು ಹೊರಡಿಸಿದ ಯಾವುದೇ ಆದೇಶದಿಂದ ಭಟ್ ಅವರನ್ನು ನಿರ್ದೇಶಕರ ಹುದ್ದೆಯನ್ನು ಅಲಂಕರಿಸಲು ನಿಷೇಧಿಸಲಾಗಿಲ್ಲ ಎಂದು ಬ್ಯಾಂಕ್ ದೃಢಪಡಿಸಿದೆ. ಬ್ಯಾಂಕ್ನ ಇತರ ಯಾವುದೇ ನಿರ್ದೇಶಕರೊಂದಿಗೆ ಅವರು ಸಂಬಂಧ ಹೊಂದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಟ್ ಅವರು 1981 ರಲ್ಲಿ ಕರ್ಣಾಟಕ ಬ್ಯಾಂಕಿನಲ್ಲಿ ಗುಮಾಸ್ತರಾಗಿ ಕೆಲಸ ಆರಂಭಿಸಿದ್ದರು. ಬ್ಯಾಂಕ್ನೊಂದಿಗೆ 38 ವರ್ಷಗಳ ಕಾಲ ಸಂಬಂಧ ಹೊಂದಿದ್ದಾರೆ. 2019 ರಲ್ಲಿ ಅವರು ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆಗಿದ್ದರು.
ಮೇ ತಿಂಗಳಲ್ಲಿ, ಬ್ಯಾಂಕಿನ ಲೆಕ್ಕಪರಿಶೋಧಕರು ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪೂರ್ಣಾವಧಿ ನಿರ್ದೇಶಕರು ಮಾಡಿದ ಕೆಲವು ಖರ್ಚುಗಳನ್ನು ಬ್ಯಾಂಕ್ನ ಗಮನಕ್ಕೆ ತಂದಿದ್ದರು. ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಅವರು ಮಂಗಳೂರಿಗೆ ಸ್ಥಳಾಂತರಗೊಳ್ಳಲು ಸಮಸ್ಯೆ ಮತ್ತು ಇತರ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದರು. ಅವರ ರಾಜೀನಾಮೆಯನ್ನು ಮಂಡಳಿಯು ಅಂಗೀಕರಿಸಿದೆ ಮತ್ತು ಜುಲೈ 31 ರಿಂದ ಜಾರಿಗೆ ಬರಲಿದೆ. ಸಿಇಒ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಗುರುತಿಸಲು ಬ್ಯಾಂಕ್ ಶೋಧ ಸಮಿತಿಯನ್ನು ರಚಿಸಿದೆ.