ಯುದ್ಧ ಭೂಮಿಯಲ್ಲಿ ಅಪ್ರತಿಮ ಸಾಹಸವನ್ನು ಪ್ರದರ್ಶಿಸಿದ ಸೈನಿಕರಿಗೆ ವೀರ ಚಕ್ರ, ಮಹಾವೀರ ಚಕ್ರ ಮತ್ತು ಪರಮವೀರ ಚಕ್ರ ಪ್ರಶಸ್ತಿಗಳಿಂದ ಗೌರವಿಸಲಾಗುತ್ತದೆ. ಅದರಲ್ಲಿಯೂ ಅಪರೂಪದ ವೀರಾವೇಶದಿಂದ ಹೋರಾಟ ಮಾಡಿ ಶತ್ರುಗಳನ್ನು ಸದೆಬಡಿದ ಕೆಲವೇ ಸೈನಿಕರಿಗೆ, ಬಹುತೇಕ ಮರಣೋತ್ತರವಾಗಿ ಅತ್ಯುನ್ನತ ಪದವಿ ಪರಮವೀರ ಚಕ್ರವನ್ನು ಪ್ರದಾನ ಮಾಡಲಾಗುತ್ತದೆ. ಭಾರತ ಸ್ವಾತಂತ್ರ ಪಡೆದ ನಂತರ ಇಲ್ಲಿಯವರೆಗೆ ಕೇವಲ 21 ಯೋಧರಿಗೆ ಇಂತಹ ಸೈನ್ಯದ ಮಹೋನ್ನತ ಪದವಿ ಪ್ರಾಪ್ತವಾಗಿದೆ. ಒಬ್ಬ ಸೈನಿಕ ಜೀವಂತವಾಗಿರುವಾಗಲೇ ಈ ಪ್ರಶಸ್ತಿಯನ್ನು ಪಡೆದಿರುವುದು ವಿರಳಾತಿವಿರಳ. ಆದರೆ ಬಂದೂಕು ಹಿಡಿಯದೆ, ಒಂದು ಗುಂಡು ಹಾರಿಸದೆ, ಯಾವ ಶತ್ರುವನ್ನೂ ಸಂಹರಿಸದ ಒಬ್ಬ ಸೈನಿಕನಿಗೆ ಅದೂ ಜೀವಂತವಿರುವಾಗಲೇ ಈ ಪರಮವೀರ ಚಕ್ರದಿಂದ ಗೌರವಿಸಲಾಯಿತು ಎಂದರೆ ಆಶ್ಚರ್ಯವಾಗುತ್ತದಲ್ಲವೇ? ಹಾಗಾದರೆ ನಡೆದಿದ್ದಾದರೂ ಏನು ಎಂದು ತಿಳಿಯುವ ಮುನ್ನ ಆ ಅಪ್ರತಿಮ ಸೈನಿಕನ ಹಿನ್ನಲೆಯ ಬಗ್ಗೆ ಒಂದಿಷ್ಟು ಮಾಹಿತಿ,ಇದು ಕರ್ನಾಟಕದ, ಕರಾವಳಿಯ ಹೆಮ್ಮೆಯ ಸುಪುತ್ರನೋರ್ವನ ಮೈನವಿರೇಳಿಸುವ ಸಾಹಸಗಾಥೆ. ಅವರ ಹೆಸರು ಮೇಜರ್ ರಾಮ ರಾಘೋಬಾ ರಾಣೆ. ಈ ವೀರವೃತ್ತಾಂತ ನಡೆದದ್ದು 1947-48 ರ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಪ್ರಥಮ ಕಾಶ್ಮೀರದ ಯುದ್ಧದಲ್ಲಿ.
ಯಾರಿವರು ಪರಮವೀರ ರಾಣೆ?
26 ಜೂನ್ 1918 ರಂದು ಕಾರವಾರದ ಚೆಂಡಿಯಾ ಎನ್ನುವ ಗ್ರಾಮದಲ್ಲಿ ಕೊಂಕಣಿ ಕ್ಷತ್ರಿಯ ಕುಟುಂಬ ಒಂದರಲ್ಲಿ ರಾಮ ರಾಘೋಬ ರಾಣೆಯವರ ಜನನವಾಯಿತು. ಪೋಲಿಸ್ ಸಿಬ್ಬಂದಿಯಾದ ಇವರ ತಂದೆಯವರ ಶಿಸ್ತಿನ ನಡುವಳಿಕೆಯನ್ನು ಇವರೂ ಸಹಾ ತಮ್ಮ ಬಾಲ್ಯದಿಂದಲೇ ಅನುಕರಿಸುತ್ತಾ ಬೆಳೆದು ಬಂದವರು. ದೇಶದ ಹಲವಾರು ಶಾಲೆಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಸಂಪೂರ್ಣಗೊಳಿಸುತ್ತಿದ್ದಾಗಲೇ ಎರಡನೇ ವಿಶ್ವಯುದ್ಧದ ಕಾರ್ಮೋಡಗಳು ದಟ್ಟೈಸುತ್ತಿದ್ದ ಸಮಯವದು, ರಾಣೆಯವರಿಗಾಗಲೇ ಇಪ್ಪತ್ತೆರಡು ವರ್ಷ ವಯಸ್ಸಾಗಿತ್ತು, ಬಾಲ್ಯದಿಂದಲೇ ಕಾಣುತ್ತಿದ್ದ ಕನಸನ್ನು ನನಸಾಗಿಸಿಕೊಳ್ಳುವ ಅವಕಾಶ ದೊರಕಿಬಿಟ್ಟಿತ್ತು ಹಾಗಾಗಿ ಅವರು ಸೈನ್ಯಕ್ಕೆ ಸೇರಿಕೊಂಡರು. ಕೆಲವು ತಿಂಗಳುಗಳ ತರಬೇತಿಯ ನಂತರ ‘ ಸರ್ವೋತ್ತಮ ಸೈನಿಕ ‘ ಪ್ರಶಸ್ತಿ ಪಡೆದುಕೊಂಡು ಜುಲೈ 1940 ರಲ್ಲಿ ಬಾಂಬೆ ತಾಂತ್ರಿಕ ದಳ ಅಥವಾ ಬಾಂಬೆ ಸ್ಯಾಪರ್ಸ್ ಘಟಕದಲ್ಲಿ ಇವರ ಸೈನಿಕ ವೃತ್ತಿಪರ್ವ ಪ್ರಾರಂಭವಾಯಿತು. ಯಾರು ಈ ಸ್ಯಾಪರ್ಸ್ ಎಂದರೆ? ಯುದ್ಧಭೂಮಿಯ ಮಂಚೂಣಿಯಲ್ಲಿದ್ದುಕೊಂಡು ಸೈನ್ಯ ಮುಂದೆ ಸಾಗಲು ಬೇಕಾಗುವ ರಸ್ತೆ, ಸುರಂಗ ಮತ್ತು ಸೇತುವೆಗಳನ್ನು ನಿರ್ಮಿಸುವವರರೇ ಇವರು. ಸೈನ್ಯದ ವಾಹನಗಳು, ಟ್ಯಾಂಕುಗಳು ಮುನ್ನುಗ್ಗಿ ಬಂದರೆ ಭೀಕರವಾಗಿ ಸ್ಪೋಟಗೊಳ್ಳುವ, ಶತ್ರುಪಡೆಯವರು ಹುದುಗಿಸಿಟ್ಟಿರುವ ನೆಲಬಾಂಬುಗಳನ್ನು ನಿಷ್ಕ್ರಿಯೆಗೊಳಿಸುವವರು ಇವರು ಮತ್ತು ಶತ್ರು ಸೈನ್ಯ ಮುಂದುವರೆಯುವ ಹಾದಿಯಲ್ಲಿ ನೆಲಬಾಂಬುಗಳನ್ನು ಹುದುಗಿಸಿಡುವವರೂ ಇವರೇ. ಈ ಸ್ಯಾಪರ್ಸ್ಗಳಿಂದ ಮುಂದಿನ ಹಾದಿ ಸುರಕ್ಷಿತವಾಗಿದೆ ಎನ್ನುವ ಸಂದೇಶ ಬಂದ ಮೇಲೇ ಸೈನ್ಯದ ತೋಪುಗಳು, ಯುದ್ಧಟ್ಯಾಂಕುಗಳು ಮುಂದುವರೆಯುತ್ತವೆ ಹಾಗಾಗಿ ಇವರನ್ನು ಯುದ್ಧದ ಮಾರ್ಗದರ್ಶಕರು ಎಂದು ಸಹಾ ಕರೆಯಲಾಗುತ್ತದೆ. ಇಂತಹ ಮಹತ್ವದ ತಂಡಕ್ಕೆ ಸೇರ್ಪಡೆಗೊಂಡ ಮೇಲೆ ರಾಘೋಬ ರಾಣೆಯವರು ಪ್ರವೇಶಿಸಿದ್ದೇ ಜಪಾನ್ ಮತ್ತು ಬ್ರಿಟಿಷರ ಮಧ್ಯೆ ನಡೆಯುತ್ತಿದ್ದ ಯುದ್ಧಭೂಮಿ ಬರ್ಮಾಕ್ಕೆ.
ಬರ್ಮಾದಲ್ಲಿ ಸಾಹಸ
ಜೂನ್ 1943 ರ ಹೊತ್ತಿಗೆ ಬರ್ಮಾದಲ್ಲಿ ಜಪಾನೀ ಸೈನ್ಯ ರಭಸವಾಗಿ ಮುನ್ನುಗ್ಗಲಾರಂಭಿಸಿದ ಮೇಲೆ, ಅರಕಾನ್ ಪ್ರದೇಶದಲ್ಲಿದ್ದ ಬ್ರಿಟಿಷ್ ಭಾರತೀಯ ಸೈನ್ಯವನ್ನು ಅಲ್ಲಿಂದ ಹಿಂಪಡೆಯಲಾಯಿತು. ಈ ಸಮಯದಲ್ಲಿ ಜಪಾನಿಯರ ಕೈಗೆ ಬ್ರಿಟಿಷರ ಯುದ್ಧಸಾಮಗ್ರಿಗಳಾಗಲೀ ಅಥವಾ ಇಂಧನ ಶೇಖರಿಸಿದ ಟ್ಯಾಂಕುಗಳಾಗಲಿ ಸಿಗಬಾರದು ಎನ್ನುವ ಉದ್ದೇಶದಿಂದ ಅವುಗಳನ್ನೆಲ್ಲಾ ಸ್ಪೋಟಿಸಲಾಗುತ್ತಿತ್ತು. ಮಾಯು ನದಿಯ ದಂಡೆಯ ಮೇಲಿದ್ದ ಬುತಿಯಾದುಂಗ್ ಪಟ್ಟಣದಿಂದ ತನ್ನ ಸೈನ್ಯವನ್ನು ಹಿಂಪಡೆಯು ನಿರ್ಧಾರ
ಮಾಡಿದಾಗ ರಾಣೆಯವರ ತಂಡಕ್ಕೆ ಈ ಪ್ರಮುಖ ಭಾಗವನ್ನು ಸ್ಪೋಟಿಸುವ ಜವಾಬ್ದಾರಿಯನ್ನು ಕೊಡಲಾಗಿತ್ತು. ಸ್ಪೋಟದ ನಂತರ ನೌಕಾದಳದ ದೋಣಿಗಳು ಇವರನ್ನು ಸುರಕ್ಷಿತವಾಗಿ ಅವರ ಘಟಕಕ್ಕೆ ಮರುತರುವ ಯೋಜನೆ ರೂಪುಗೊಂಡಿತ್ತು. ರಾಣೆಯವರ ತಂಡವೇನೋ ಅವರಿಗೆ ವಹಿಸಿದ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದರು ಆದರೆ ಅವರನ್ನು ರಕ್ಷಿಸಲು ಬರಬೇಕಾಗಿದ್ದ ನೌಕಾಪಡೆಯ ದೋಣಿಗಳೇ ಬರಲಿಲ್ಲ. ಇತ್ತ ಜಪಾನೀ ಸೈನ್ಯ ಆ ನಗರವನ್ನಾಗಲೇ ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದರು. ಕೂಡಲೇ ರಾಣೆ ಮತ್ತು ಅವರ ತಂಡದವರು ನದಿಗೆ ಧುಮಿಕಿ ಜಪಾನೀ ಸೈನಿಕರ ಹಾರಿಸಿದ ಗುಂಡುಗಳಿಂದ ತಪ್ಪಿಸಿಕೊಳ್ಳುತ್ತಾ ಹಲವಾರು ಮೈಲಿಗಳಷ್ಟು ದೂರ ಈಜಿಕೊಂಡು ಸುರಕ್ಷಿತವಾಗಿ ತಮ್ಮ ಘಟಕವನ್ನು ಸೇರಿಕೊಂಡರು. ಇನ್ನೇನು ರಾಣೆಯವರ ತಂಡವನ್ನು ಜಪಾನಿ ಸೈನಿಕರು ಕೊಂದು ಮುಗಿಸಿಬಿಟ್ಟಿರುತ್ತಾರೆ ಎಂದು ಖಿನ್ನವಾಗಿದ್ದ ಬ್ರಿಟಿಷ್ ಅಧಿಕಾರಿಗಳು ಇವರು ನದಿಯಿಂದ ಮೇಲೆದ್ದು ಬಂದಿದ್ದನ್ನು ನೋಡಿ ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡುಬಿಟ್ಟರಂತೆ ಮತ್ತೆ ಕೂಡಲೇ ಇವರಿಗೆ ಹವಾಲ್ದಾರ್ ಆಗಿ ಬಡ್ತಿಯನ್ನೂ ಕೊಟ್ಟುಬಿಟ್ಟರಂತೆ.
ಸ್ವತಂತ್ರ ಪೂರ್ವಭಾರತ
1947 ರ ದೇಶ ವಿಭಜನೆಯಾದ ಸಮಯದಲ್ಲಿ ಮೊಹಮ್ಮದಾಲಿ ಜಿನ್ನಾನಿಗೆ ಕಾಶ್ಮೀರ ಪಾಕಿಸ್ತಾನದ ತೆಕ್ಕೆಗೆ ಮಾಗಿದ ಸೇಬಿನಂತೆ ಬೀಳುತ್ತದೆ ಎನ್ನುವ ನಂಬಿಕೆ ಇತ್ತು. ಪಾಕಿಸ್ತಾನಕ್ಕೆ ಸ್ವಾತಂತ್ರ ದೊರೆತ ದಿನದಿಂದಲೇ ನೂತನವಾಗಿ ರೂಪುಗೊಂಡ ಸೈನ್ಯದ ಕೆಲವು ಅಧಿಕಾರಿಗಳು ಕಾಶ್ಮೀರವನ್ನು ತನ್ನ ವಶಕ್ಕೆ ಸೆಳೆದುಕೊಳ್ಳುವ ಹುನ್ನಾರವನ್ನಾಗಲೇ ನಡೆಸಿದ್ದರು. ಆಗಿನ್ನೂ ಪಾಕಿಸ್ತಾನಿ ಸೈನ್ಯ ಬ್ರಿಟಿಷ್ ಸೈನ್ಯಾಧಿಕಾರಿಗಳ ನಿಯಂತ್ರಣದಲ್ಲಿತ್ತು. ಬ್ರಿಟಿಷ್ ಜನರಲ್ ಡಗ್ಲಾಸ್ ಗ್ರೇಸಿ ಸೈನ್ಯದ ಅಧಿಕಾರವಹಿಸಿದ್ದರು ಹಾಗಾಗಿ ಕಾಶ್ಮೀರದ ಮೇಲೆ ಸೈನ್ಯದ ಕಾರ್ಯಾಚರಣೆ ನಡೆಸುವ ಅನುಮತಿ ಸಿಗಲಾರದು ಎಂದು ಗ್ರಹಿಸಿ ಖೈಬರ್ ಪ್ರಾಂತ್ಯದ ಪಶ್ತೂನಿ, ಜಝೀರಿ ಅಫ್ರೀದಿ ಬುಡಕಟ್ಟು ಜನಾಂಗದ ಯುವಕರನ್ನು ತಲಾ ಮೂರು ಸಾವಿರ ರೂಪಾಯಿಗಳಿಗೆ ಒಂದು ಆಳಿನಂತೆ ಗುತ್ತಿಗೆಗೆ ಪಡೆದು ಅವರಿಗೆ ತುರ್ತಾಗಿ ಒಂದಿಷ್ಟು ಸೈನ್ಯದ ತರಬೇತಿ ಕೊಡಲಾಯಿತು. ಎರಡನೇ ವಿಶ್ವಯುದ್ಧದ ನಂತರ ಪಂಜಾಬಿನ ಪ್ರಾಂತ್ಯದ ಮಾಜಿ ಸೈನಿಕರ ಬಳಿ ಇದ್ದ ಬಂದೂಕುಗಳು ಮತ್ತು ಪೋಲೀಸರ ವಶದಲ್ಲಿದ್ದ ಸುಮಾರು ನಾಲ್ಕು ಸಾವಿರ ಬಂದೂಕುಗಳನ್ನು ಇವರಿಗೆ ಕೊಡಲಾಯಿತು. ಇವರಿಗೆ ಯಾವ ಮಟ್ಟದ ಲಾಲಸೆ ನೀಡಿದ್ದರೆಂದರೆ, ಕಾಶ್ಮೀರದಲ್ಲಿ ಲೂಟಿಹೊಡೆದ ಸಂಪತ್ತೆಲ್ಲಾ ನಿಮ್ಮದು, ಅಲ್ಲಿಯ ಹೆಂಗಸರೆಲ್ಲಾ ನಿಮ್ಮವರೆ, ಒಟ್ಟಿನಲ್ಲಿ ಮೂರುದಿನಗಳಲ್ಲಿ ಶ್ರೀನಗರ ತಲುಪಿಬಿಟ್ಟರೆ ಸಾಕು ಎಂದು. ಹಸಿದ ತೋಳಗಳಂತಿದ್ದ ಈ ಬರ್ಬರ ಹತ್ಯೆಕೋರರು ಕಾಶ್ಮೀರವನ್ನು ಪ್ರವೇಶಿಸುವುದನ್ನೇ ಕಾಯುತ್ತಿದ್ದರು. ಮೂರು ತಿಂಗಳ ತರಬೇತಿಯ ನಂತರ ಇವರನ್ನು ಉತ್ತರ, ಪಶ್ಚಿಮ ಮತ್ತು ದಕ್ಷಿಣ ಮೂರೂ ದಿಕ್ಕುಗಳಿಂದ ಕಾಶ್ಮೀರದೊಳಕ್ಕೆ ನುಗ್ಗಿಸಿ ಅಂತಿಮವಾಗಿ ಶ್ರೀನಗರವನ್ನು ವಶಪಡಿಸಿಕೊಳ್ಳವ ಯೋಜನೆಯೊಂದು ತಯಾರಾಗಿತ್ತು. ಇವರ ಜೊತೆಗೆ ಹಲವಾರು ಪಾಕಿಸ್ತಾನಿ ಸೈನಿಕರು ಮತ್ತು ಸೈನ್ಯಾಧಿಕಾರಿಗಳು ಸೇರಿಕೊಂಡಿದ್ದರು.
ಜಿನ್ನಾರಿಂದ ರಾಜಕೀಯವಾಗಿ ರಾಜಾ ಹರಿಸಿಂಗರ ಮೇಲೆ ಪಾಕಿಸ್ತಾನಕ್ಕೆ ಸೇರಿಕೊಳ್ಳುವಂತೆ ಒತ್ತಡವನ್ನೂ ಹೇರಲಾಗಿತ್ತು. ಹರಿಸಿಂಗ್ ನಿರ್ಧಾರ ತೆಗೆದುಕೊಳ್ಳುವ ಮೊದಲೇ ಅಕ್ಟೋಬರ್ 22 ರಂದು ಈ ಪಾಕಿಸ್ತಾನಿ ದಾಳಿಕೋರರನ್ನು ಕಾಶ್ಮೀರದ ಒಳಗೆ ನುಗ್ಗಿಸಿಯೇ ಬಿಟ್ಟರು ಪಾಕಿಸ್ತಾನದ ಸೈನ್ಯಾಧಿಕಾರಿಗಳು. ಇನ್ನು ತಡ ಮಾಡಿದರೆ ಮೂರೇ ದಿನಕ್ಕೆ ಶ್ರೀನಗರವನ್ನ ಆಕ್ರಮಿಸಿಕೊಂಡು ಬಿಡುತ್ತಾರೆ ಎಂದು ರಾಜಾ ಹರಿಸಿಂಗ್ ವಿಲೀನ ಪತ್ರಕ್ಕೆ ಸಹಿ ಹಾಕುತ್ತೇನೆ ಎಂದು ಸರ್ದಾರ್ ಪಟೇಲರಿಗೆ ತಿಳಿಸಿದರು. ಕೂಡಲೇ ಅಕ್ಟೋಬರ್ 26 ರಂದು ಪಟೇಲರು ತಮ್ಮ ಕಾರ್ಯದರ್ಶಿ ವಿ ಪಿ ಮೆನನ್ ಅವರನ್ನು ಹರಿಸಿಂಗ್ ಅವರನ್ನು ಭೇಟಿ ಮಾಡಿ ವಿಲೀನ ಪತ್ರಕ್ಕೆ ಸಹಿ ಹಾಕಿಸಲು ಕಳುಹಿಸಿದರು. ಅಂದಿನಿಂದ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿಬಿಟ್ಟಿತು. ಭಾರತ ಸರ್ಕಾರ ಕಾಶ್ಮೀರಕ್ಕೆ ಭಾರತೀಯ ಸೈನ್ಯವನ್ನು ತಕ್ಷಣವೇ ರವಾನಿಸುವ ತೀರ್ಮಾನ ತೆಗೆದುಕೊಂಡ ಕೂಡಲೇ ರಾತ್ರೋರಾತ್ರಿ ವಾಯುಸೇನೆ ಮತ್ತು ಭೂಸೇನೆಯ ಮುಖ್ಯಸ್ಥರಿಗೆ ಸಂದೇಶ ತಲುಪಿಸಲಾಯಿತು. ಇಂಥಹದೊಂದು ಸಂದೇಶಕ್ಕೆ ಕಾತರದಿಂದ ಕಾಯುತ್ತಿದ್ದ ಸೇನೆ ತಕ್ಷಣವೇ ಕಾರ್ಯೋನ್ಮುಖವಾಯಿತು. ಇಲ್ಲಿಂದ ಪ್ರಾರಂಭವಾಗುತ್ತದೆ ಕಾಶ್ಮೀರವನ್ನು ಕೇಂದ್ರಬಿಂದುವಾಗಿಟ್ಟುಕೊಂಡ ಮೊದಲನೆಯ ಭಾರತ ಮತ್ತು ಪಾಕಿಸ್ತಾನದ ನಡುವಣ ಯುದ್ಧ.
ನೌಷೇರಾದಿಂದ ರಜೌರಿಯತ್ತ
ಈ ಸಮಯದಲ್ಲಿ ರಾಮ ರಾಘೋಬ ರಾಣೆಯವರ ಜೀವನದಲ್ಲೂ ಮಹತ್ತರ ಬದಲಾವಣೆಗಳಾಗಿರುತ್ತವೆ, ಈಗ ಅವರು ಭಾರತೀಯ ಸೇನೆಯ ಅಧಿಕಾರಿಯಾಗಿ ಲೆಫ್ಟಿನೆಂಟ್ ರಾಣೆಯಾಗಿರುತ್ತಾರೆ. ಮತ್ತೊಮ್ಮೆ ಯುದ್ಧಭೂಮಿಗೆ ಇವರ ಪ್ರವೇಶವಾಗುತ್ತದೆ, ಅದೂ ಕಾಶ್ಮೀರದಲ್ಲಿ. ಕಾಶ್ಮೀರವನ್ನು ಭಾರತದಿಂದ ಬಲವಂತದಿಂದ ಕಿತ್ತುಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿದ ಪಾಕಿಸ್ತಾನವನ್ನು ಹಿಮ್ಮೆಟ್ಟಿಸುತ್ತಾ, ಒಂದೊಂದೇ ಪ್ರದೇಶಗಳನ್ನು ಮುಕ್ತಗೊಳಿಸುತ್ತಾ ಮುನ್ನಡೆದಿದ್ದ ಭಾರತೀಯ ಸೇನೆ 18 ಮಾರ್ಚ್ 1948ರಂದು ನೌಷೇರಾ ವಲಯವನ್ನು ಪಾಕೀಸ್ತಾನಿಯರಿಂದ ಮುಕ್ತಗೊಳಿಸಿದ ನಂತರ ಅಲ್ಲಿಂದ ಸುಮಾರು ನಲವತ್ತು ಕಿಲೋಮೀಟರ್ ದೂರದ ಉತ್ತರದ ರಜೌರಿ ನಗರವನ್ನು ವಶಪಡಿಸಿಕೊಳ್ಳಬೇಕಿತ್ತು. ಈ ಕಾರ್ಯಾಚರಣೆಯನ್ನು ನಾಲ್ಕನೇ ಡೋಗ್ರಾ ತಂಡಕ್ಕೆ ವಹಿಸಿಕೊಡಲಾಗಿತ್ತು. 8 ಏಪ್ರಿಲ್ 1948 ರಂದು ರಜೌರಿಯ ಕಡೆಗೆ ಈ ತಂಡ ತಮ್ಮ ಆಕ್ರಮಣವನ್ನು ಪ್ರಾರಂಭಿಸಿದವು. ಈ ಆಕ್ರಮಣದ ಮಂಚೂಣಿಯಲ್ಲಿದ್ದದ್ದೇ ಲೆಫ್ಟಿನೆಂಟ್ ರಾಣೆಯವರ ಮುಖಂಡತ್ವದಲ್ಲಿದ್ದ ಮೂವತ್ತೇಳನೇ ಆಕ್ರಮಣಕಾರಿ ಕಂಪನಿ. ಇವರು ಪಾಕಿಸ್ತಾನಿಯರು ಹುದುಗಿಟ್ಟು ಹೋಗಿದ್ದ ನೆಲಬಾಂಬುಗಳನ್ನು ಪತ್ತೆಹಚ್ಚಿ, ಅವುಗಳನ್ನು ನಿಷ್ಕ್ರಿಯೆಗೊಳಿಸಿದ ನಂತರ ಯುದ್ಧಟ್ಯಾಂಕುಗಳು ಮುಂದೆ ಸಾಗುತ್ತಿದ್ದವು ಮತ್ತು ಟ್ಯಾಂಕುಗಳನ್ನು ಹಿಂಬಾಲಿಸಿಕೊಂಡು ಸೈನಿಕರ ಆಕ್ರಮಣದ ತಂಡ…ಹೀಗೆ ಸಾಗುವ ಯೋಜನೆಯನ್ನು ನಡೆಸಲಾಗಿತ್ತು. ಹೆದ್ದಾರಿಯ ಒಂದು ಕಡೆ ತಾವಿ ನದಿ ಮತ್ತೊಂದು ಕಡೆ ಕಡಿದಾದ ಪರ್ವತ ಶಿಖರಗಳು ಮತ್ತು ದಟ್ಟವಾದ ಪೈನ್ ಮರಗಳ ಕಾಡು. ಉದ್ದನೆಯ ಈ ಪೈನ್ ಮರಗಳನ್ನು ಕಡಿದು ದಾರಿಗೆ ಅಡ್ಡಲಾಗಿ ಹಾಕಿ ಬಿಟ್ಟಿದ್ದರು ಪಾಕಿಗಳು. ಆ ಮರಗಳನ್ನು ತೆರವು ಮಾಡಲು ಹೋದ ಭಾರತೀಯ ಸೈನಿಕರ ಮೇಲೆ ಗುಡ್ಡಗಳ ಮೇಲೆ ಅವಿತು ಕುಳಿತಿದ್ದ ಪಾಕಿ ಸೈನಿಕರು ಗುಂಡಿನ ಸುರಿಮಳೆ ಸುರಿಸಿಬಿಡುತ್ತಿದ್ದರು. ಆಕ್ರಮಣದ ಮೊದಲ ದಿನವೇ ಹಲವಾರು ಸೈನಿಕರು ಹತರಾದರು ಮತ್ತು ಗಾಯಗೊಂಡರು.ರಾಣಾರವರ ತೊಡೆಗೂ ಒಂದು ಗುಂಡೇಟು ಬಿದ್ದುಬಿಟ್ಟಿತ್ತು ಆದರೂ ಧೃತಿಗೆಡದೆ ರಾಣೆ ಮತ್ತು ಅವರ ತಂಡ ರಾತ್ರಿ ಇಡೀ ಶ್ರಮವಹಿಸಿ ನೆಲಬಾಂಬುಗಳನ್ನು ನಿಷ್ಕ್ರಯಿಸಿ ಯುದ್ಧಟ್ಯಾಂಕುಗಳು ಸುರಕ್ಷಿತವಾಗಿ ಸಾಗುವ ಹಾದಿಯನ್ನು ನಿರ್ಮಿಸಿದರು.ಇವರ ಕಾರ್ಯವೈಖರಿ ಸೈನ್ಯಾಧಿಕಾರಿಗಳನ್ನು ಅಚ್ಚರಿಗೊಳಿಸಿತು. ಇವರು ಕುದುರೆಯೊಂದರ ಮೇಲೆ ಹತ್ತಿಕೊಂಡು ಮೆಲುನಡಿಗೆಯಲ್ಲಿ ಸಾಗುತ್ತಾ ಉದ್ದನೆಯ ಕಬ್ಬಿಣದ ಕಂಬಿಗೆ ಕಟ್ಟಿದ್ದ ಖನಿಜ ಶೋಧಕವನ್ನ ತಿರುಗಿಸುತ್ತಾ, ಬೀಪ್..ಬೀಪ್ ಶಬ್ದ ಕೇಳಿದಕೂಡಲೇ ಕುದುರೆಯಿಂದಿಳಿದು ಬರಿಗೈಯಿಂದಲೇ ಆ ನೆಲಬಾಂಬುಗಳನ್ನು ಹೊರತೆಗೆದು ನಿಷ್ಕ್ರಿಯೆಗೊಳಿಸುತ್ತಿದ್ದರು.
10 ಏಪ್ರಿಲ್ ಬೆಳ್ಳಂಬೆಳಗ್ಗೆ ರಾಣೆಯವರ ತಂಡ ಅಡ್ಡಹಾಕಿದ್ದ ಪೈನ್ ಮರಗಳನ್ನು ದೂರದಿಂದಲೇ ಸ್ಪೋಟಿಸಿ, ಅದರ ಕೆಳಗಿದ್ದ ನೆಲಬಾಂಬುಗಳನ್ನು ನಿಷ್ಕಿಯೆಗೊಳಿಸಿ ಸುಮಾರು ಹನ್ನೊಂದು ಕಿಮೀಗಳಷ್ಟು ಹಾದಿಯನ್ನು ಡೋಗ್ರಾ ಆಕ್ರಮಣ ತಂಡ ಮುಂದುವರೆಯುವಂತೆ ಸುಗಮಗೊಳಿಸಿದರು. ಮಧ್ಯಾಹ್ನದೊಷ್ಟೊತ್ತಿಗೆ ಭಾರತೀಯ ಸೈನ್ಯ ಸುಮಾರು ಹನ್ನೊಂದು ಕಿಮೀಗಳಷ್ಟು ದೂರವನ್ನು ಕ್ರಮಿಸಿ ಚಿಂಗಾಸ್ ಎಂಬಲ್ಲಿಗೆ ತಲುಪಿದರು. ಮರುದಿನ 11 ಏಪ್ರಿಲ್ ಬೆಳಗಿನ ಜಾವ ರಾಣೆಯವರು ಮೊದಲ ಯುದ್ಧಟ್ಯಾಂಕಿನಲ್ಲಿ ಕುಳಿತು ಉದ್ದನೆಯ ಕಂಬಿಯಿಂದ ನೆಲಬಾಂಬುಗಳನ್ನು ಪತ್ತೆ ಹಚ್ಚಿ ನಿಷ್ಕ್ರಿಯೆಗೊಳಿಸುತ್ತಾ ಮುಂದೆ ಸಾಗುತ್ತಿದ್ದರೆ ಅತ್ತ ಪಾಕಿಸ್ತಾನೀಯರ ಕಡೆಯಿಂದ ಮಷೀನ್ ಗನ್ನಿನ ದಾಳಿ ಇನ್ನೂ ಹೆಚ್ಚಾಗತೊಡಗಿತು. ಆಗ ಒಂದು ಪ್ಲಾನ್ ಮಾಡಿದರು, ಬಹುಷ: ಇದಕ್ಕೇ ಅವರಿಗೆ ಪರಮವೀರ ಚಕ್ರ ದೊರಕಿರಬಹುದು ಎನಿಸುತ್ತೆ. ಅದೇನೆಂದರೆ ಟ್ಯಾಂಕ್ ಚಾಲಕನ ಎಡಗೈಗೊಂದು ಮತ್ತು ಬಲಗೈಗೊಂದು ತೆಳುವಾದ ಹಗ್ಗ ಕಟ್ಟಿ , ಆ ಚಾಲಕನಿಗೆ ಹೇಳಿದ್ದೇನೆಂದರೆ..ನಾನು ಎಡಗೈ ಹಗ್ಗ ಜಗ್ಗಿದರೆ ನೀವು ಟ್ಯಾಂಕನ್ನು ನಿಲ್ಲಿಸಿ ಮತ್ತೆ ಬಲಗೈ ಹಗ್ಗ ಜಗ್ಗಿದರೆ ಮುಂದೆ ಚಲಿಸಿ ಎಂದು ಹೇಳಿ ಇವರು ದೈತ್ಯಾಕಾರದ ಟ್ಯಾಂಕಿನ ಗಾಲಿಗಳ ನಡುವೆ ಮಲಗಿ ತೆವಳಿಕೊಂಡು ಪಾಕಿಸ್ತಾನಿ ಮಷಿನ್ ಗನ್ನುಗಳ ದಾಳಿಯಿಂದ ಮುಂದೆ ಸಾಗಿ ನೆಲಬಾಂಬುಗಳ ಪತ್ತೆ ಹಚ್ಚಲು ಪ್ರಾರಂಭಿಸಿದರು. ಇಂಥಹದೊಂದು ಅವಿಷ್ಕಾರಕ್ಕೆ ಸೈನ್ಯಾಧಿಕಾರಿಗಳೇ ಅವಾಕ್ಕಾಗಿ ಹೋದರು. ಮರುದಿನ ಭಾರತೀಯ ಸೈನ್ಯ ರಜೌರಿಯನ್ನು ತಲುಪಿ ಪಾಕಿಸ್ತಾನೀಯರ ಮೇಲೆ ಭೀಕರ ಆಕ್ರಮಣ ನಡೆಸಿತು. ಸುಮಾರು ಐನೂರಕ್ಕೂ ಹೆಚ್ಚು ಪಾಕಿಸ್ತಾನೀಯರು ಹತರಾಗಿ ಹೋದರು, ಉಳಿದವರು ಓಡಿಹೋದರು. ರಜೌರಿ ವಲಯ ಪಾಕಿಸ್ತಾನಿ ಆಕ್ರಮಣಕೋರರಿಂದ ಮುಖ್ತವಾಯಿತು.
ಲೆಫ್ಟಿನೆಂಟ್ ರಾಮ ರಾಘೋಬ ರಾಣೆಯವರ ಅಪ್ರತಿಮ ಸಾಹಸಕ್ಕೆ 21 ಜೂನ್ 1950 ರಂದು ಪರಮವೀರ ಚಕ್ರ ಪ್ರಶಸ್ತಿಯಿಂದ ಗೌರವಿಸಲಾಯಿತು.
✒️ವಿಂಗ್ ಕಮಾಂಡರ್ ಸುದರ್ಶನ