ಸೋಲದೇವನಹಳ್ಳಿ(ನೆಲಮಂಗಲ): ಯುವತಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂಬ ಕಾರಣಕ್ಕೆ ಯುವಕನೊಬ್ಬನನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ವಿಡಿಯೊ ಚಿತ್ರೀಕರಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ.
ಕುಶಾಲ್ ಹಲ್ಲೆಗೊಳಗಾದ ಯುವಕ. ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿಯೊಬ್ಬಳನ್ನು ಕುಶಾಲ್ ಪ್ರೀತಿಸುತ್ತಿದ್ದು, ಎರಡು ವರ್ಷದ ಈ ಪ್ರೇಮ ಸಂಬಂಧ ಇತ್ತೀಚೆಗೆ ಮರಿದು ಬಿದ್ದಿತ್ತು. ಈ ನಡುವೆ ಆಕೆ ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಾಳೆ ಎಂಬ ವಿಷಯ ತಿಳಿದ ಕುಶಾಲ್ ಆಕೆಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ.
ಈ ಸಂದೇಶವನ್ನು ಯುವತಿ ಪ್ರಿಯಕರನಿಗೆ ತೋರಿಸಿದ್ದಾಳೆ. ಇದರಿಂದ ಕುಪಿತಗೊಂಡ ಆತ ತನ್ನ ಸ್ನೇಹಿತರೊಂದಿಗೆ ಕುಶಾಲ್ನನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ ಎನ್ನಲಾಗಿದೆ.
ಕುಶಾಲ್ನ ಬಟ್ಟೆ ಬಿಚ್ಚಿ, ಮರ್ಮಾಂಗಕ್ಕೆ ತುಳಿದು ಚಿತ್ರಹಿಂಸೆ ನೀಡುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಅಲ್ಲದೇ, ಆರೋಪಿಯೊಬ್ಬ, ‘ರೇಣುಕಸ್ವಾಮಿ
ಕೊಲೆ ಪ್ರಕರಣದಂತೆ ಇದು ಆಗುತ್ತದೆ’ ಎಂದು ಹೇಳಿರುವುದು ರೆಕಾರ್ಡ್ ಆಗಿದೆ.
ಚಿತ್ರದುರ್ಗದ ರೇಣುಕಸ್ವಾಮಿ ಎಂಬಾತ ನಟ ದರ್ಶನ್ ತೂಗುದೀಪ ಅವರ ಆಪ್ತ ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದು, ನಂತರ ಆ ಪ್ರಕರಣ ಕೊಲೆಯಲ್ಲಿ ಅಂತ್ಯವಾಗಿರುವುದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು.
ರೇಣುಕಸ್ವಾಮಿ ಅವರನ್ನು ಶೆಡ್ವೊಂದಕ್ಕೆ ಕರೆದುಕೊಂಡು ಹೋಗಿದ್ದ ದರ್ಶನ್ ಮತ್ತು ಅವರ ಸ್ನೇಹಿತರು ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಈಗ ಅಂತಹದ್ದೇ ಘಟನೆ ಮರುಕಳಿಸಿರುವುದು ಮತ್ತು ಆ ಘಟನೆಯನ್ನು ಸ್ಫೂರ್ತಿಯಾಗಿ ತೆಗೆದುಕೊಂಡಿರುವುದು ಆತಂಕ ಹುಟ್ಟುಹಾಕಿದೆ.