ಬೆಳಗಾವಿ : ಗೋಕಾಕಿನ ಮಹಾಲಕ್ಷ್ಮಿದೇವಿ ಜಾತ್ರೆಯ ಬಂದೋಬಸ್ತ್ ಗೆ ತೆರಳಿದ್ದ ಹುಬ್ಬಳ್ಳಿ ನವನಗರ ಪೊಲೀಸ್ ಠಾಣೆಯ ಎಎಸ್ಐ ಲಾಲಸಾಬ್ ಮೇರಾನಾಯ್ಕ(54) ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಜಾತ್ರಾ ಮಹೋತ್ಸವದ ಪ್ರಯುಕ್ತ ಲಾಲಾಸಾಬ್ ಅವರನ್ನು ಬಂದೋಬಸ್ಗೆ ನಿಯೋಜಿಸಲಾಗಿತ್ತು. ಎರಡು ದಿನಗಳ ಹಿಂದೆ ಅವರು ಗೋಕಾಕಿಗೆ ತೆರಳಿದ್ದರು. ಶುಕ್ರವಾರ ರಾತ್ರಿ ಚೆಕ್ ಪೋಸ್ಟ್ನಲ್ಲಿ ಕರ್ತವ್ಯ ಮುಗಿಸಿ ಗೋಕಾಕಿನಲ್ಲಿರುವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಶನಿವಾರ ಬೆಳಿಗ್ಗೆ ಹೃದಯಾಘಾತವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಲಾಲಸಾಬ್ ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ನಗರದ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು, ಮೂರು ವರ್ಷಗಳ ಹಿಂದೆ ಎಎಸ್ಐ ಬಡ್ತಿ ಪಡೆದು ನವನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದರು. ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.